ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಯುವಕನ ಕನಸಿಗೆ ಕೊಳ್ಳಿ ಇಟ್ಟ ಪೊಲೀಸರು

Update: 2019-12-31 04:52 GMT

ಮಂಗಳೂರು, ಡಿ.30: ಯಾರ ಹಂಗಿಲ್ಲದೆ ಬದುಕಬೇಕು, ಏನಾದರೊಂದು ಸಾಧಿಸಬೇಕು, ಇತರರ ಅಧೀನದಲ್ಲಿ ಕೆಲಸ ಮಾಡುವ ಬದಲು ಸ್ವಾವಲಂಬಿ ಬದುಕು ಕಟ್ಟಬೇಕು... ಹೀಗೆ ಈ ಯುವಕ ಕಟ್ಟಿಕೊಂಡ ಕನಸು ಅಷ್ಟಿಷ್ಟಲ್ಲ. ಅದಕ್ಕಾಗಿ ತನ್ನ ಸ್ನೇಹಿತರ ಜೊತೆಗೂಡಿ ಸ್ವ ಉದ್ಯಮದಲ್ಲಿ ಸಕ್ರಿಯನಾಗಿದ್ದ. ಉದ್ಯಮದ ವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತಿರುಗಾಡುತ್ತಿದ್ದ. ಮುಂಜಾನೆ ಮನೆಯಿಂದ ಹೊರಟರೆ ಮರಳಿ ಬರುವಾಗ ರಾತ್ರಿಯಾಗುತ್ತಿತ್ತು. ಏಳೆಂಟು ಗೆಳೆಯರ ಪಾಲುದಾರಿಕೆಯಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಈತ ನಗರದ ಫಳ್ನೀರ್‌ನ ಅಥೆನಾ ಆಸ್ಪತ್ರೆಯ ಮುಂಭಾಗದಲ್ಲಿ 'ಕಟ್ಟಾ ಮೀಟಾ' (ಜ್ಯೂಸ್ ಹಬ್) ತೆರೆಯಲು ಸಿದ್ಧತೆ ನಡೆಸುತ್ತಿದ್ದ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಡಿ.23ರಂದು ಈ ಜ್ಯೂಸ್ ಹಬ್ ಉದ್ಘಾಟನೆಗೊಳ್ಳಬೇಕಿತ್ತು. ಡಿ.19ರಂದು ಆ 'ಹಬ್'ಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಇನ್ನೇನೋ ಮರಳಬೇಕೆನ್ನುವಷ್ಟರಲ್ಲಿ ಪೊಲೀಸರು ರಾಕ್ಷಕರಂತೆ ಒಕ್ಕರಿಸಿದರು. ಅಷ್ಟೇ ಅಲ್ಲ, ಸೆ.307 ಸಹಿತ ಹಲವು ಕಲಂನಡಿ ಪ್ರಕರಣ ದಾಖಲಿಸಿಕೊಂಡು ಜೈಲು ಪಾಲಾಗುವಂತೆ ಮಾಡಿದ್ದರು. ತನ್ನದಲ್ಲದ ತಪ್ಪಿಗೆ ಇದೀಗ ನಾಲ್ಕು ಕೋಣೆಯ ಮಧ್ಯೆ ದಿನಗಳೆಯುತ್ತಿದ್ದಾನೆ. ಒಮ್ಮೆ ತನ್ನನ್ನು ಇಲ್ಲಿಂದ ಪಾರು ಮಾಡಿ ಎಂದು ಕುಟುಂಬಸ್ಥರಲ್ಲಿ ಬೇಡಿಕೊಳ್ಳುತ್ತಿದ್ದಾನೆ.

ಇದು ಡಿ.19ರಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್-ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ ತೊಕ್ಕೊಟ್ಟಿನ ತಂಝೀಲ್ (26) ಎಂಬ ಯುವಕನ ಕರುಣಾಜನಕ ಕಥೆ.

'ತಂಝೀಲ್ ಪ್ರತಿಭಟನೆಯಲ್ಲಿ ಪಾಲ್ಗೊಂಡವನಲ್ಲ. ಈವರೆಗೆ ಯಾವುದೇ ಗಲಭೆೆೆಯಲ್ಲೂ ತೊಡಗಿಸಿಕೊಂಡವನಲ್ಲ. ದ್ವಿತೀಯ ಪಿಯುಸಿ ಪೂರೈಸಿದ ಬಳಿಕ ತಂಝೀಲ್ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ. ಹಾಗೇ ಸುರತ್ಕಲ್ ಮತ್ತಿತರ ಕಡೆ ಸ್ನೇಹಿತರ ಜೊತೆಗೂಡಿ ಪಾಲುದಾರಿಕೆಯಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಇತ್ಯಾದಿಗಳನ್ನು ತೆರೆದಿದ್ದ. ನಗರದ ಅಥೆನಾ ಆಸ್ಪತ್ರೆಯ ಮುಂದೆ ಜ್ಯೂಸ್ ಅಂಗಡಿ ತೆರೆಯಲು ಸಿದ್ಧತೆ ನಡೆಸಿದ್ದ. ಅದಕ್ಕೆ ಡಿ.19ರಂದು ಅಗತ್ಯವಿರುವ ಸಾಮಗ್ರಿ ಗಳನ್ನು ಖರೀದಿಸಲು ಗೆಳೆಯನ ಕಾರಿನಲ್ಲಿ ತೆರಳಿ ಸ್ಟೇಟ್‌ಬ್ಯಾಂಕ್ ಬಳಿ ಪಾರ್ಕ್ ಮಾಡಿದ್ದರು. ಸೆಂಟ್ರಲ್ ಮಾರ್ಕೆಟ್ ಬಳಿ ಖರೀದಿಸಿದ ಸಾಮಾಗ್ರಿಗಳನ್ನು ರಿಕ್ಷಾದಲ್ಲಿ ಜ್ಯೂಸ್ ಅಂಗಡಿಯತ್ತ ಸಾಗಿಸಿ ಮರಳಿ ಸ್ಟೇಟ್‌ಬ್ಯಾಂಕ್ ಬಳಿ ನಡೆದುಕೊಂಡು ಬರುತ್ತಿದ್ದಾಗ ಹಿಂಸಾಚಾರದ ಸುದ್ದಿ ಸಿಕ್ಕಿದೆ. ಸ್ಟೇಟ್‌ಬ್ಯಾಂಕ್ ಬಳಿ ನಿಲ್ಲಿಸಲಾಗಿದ್ದ ಕಾರಿನತ್ತ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದಾಗ ಮೊದಲು ಒಬ್ಬ ಪೊಲೀಸ್ ವಿಚಾರಿಸಿದ್ದಾರೆ. ಆಯ್ತು... ಜಾಗ್ರತೆ ಎಂದು ಆ ಪೊಲೀಸ್ ಹೇಳಿದ್ದಾರೆ. ಬಳಿಕ ಇನ್ನೊಬ್ಬ ಪೊಲೀಸ್ ವಿಚಾರಿಸಿ, ಪರಿಸ್ಥಿತಿ ಚೆನ್ನಾಗಿಲ್ಲ, ಈ ರಸ್ತೆಯಾಗಿ ಹೋಗು ಎಂದಿದ್ದಾರೆ. ಆ ಮಾತು ಕೇಳಿದ್ದ ತಂಝೀಲ್ ಮತ್ತಾತನ ಸ್ನೇಹಿತ ಪೊಲೀಸರು ಹೇಳಿದ ರಸ್ತೆಯಲ್ಲಿ ಸಾಗಿದ್ದರು. ಗುಂಪು ಸೇರಿದ್ದ ಪೊಲೀಸರಿಗೆ ಏನಾಗಿತ್ತೋ ಏನೋ... ಯದ್ವಾತದ್ವಾ ಹಲ್ಲೆ ನಡೆಸತೊಡಗಿದರು. ತಂಝೀಲ್ ಪೊಲೀಸರ ಕೈಗೆ ಸಿಕ್ಕಿಬಿದ್ದ. ಹಾಗೇ ಸಂಜೆ 7ರವರೆಗೆ ಠಾಣೆಯಲ್ಲಿ ಕೂಡಿ ಹಾಕಿದ ಪೊಲೀಸರು ಬಳಿಕ ಆತನ ಮೊಬೈಲ್, ಪರ್ಸ್ ಕಿತ್ತುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಹಾಕಿದರು.

ಮಿತಭಾಷಿಯಾಗಿದ್ದ ತಂಝೀಲ್ ಡಿ.19ರಂದು ಹಂಪನಕಟ್ಟೆ, ಸೆಂಟ್ರಲ್ ಮಾರ್ಕೆಟ್‌ಗೆ ಹೋದ ಬಳಿಕ ಹುಬ್ಬಳ್ಳಿಗೆ ತೆರಳಲು ನಿರ್ಧರಿಸಿದ್ದ. ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡಲೇ ಇಲ್ಲ. ಅವ ಅಂದು ಸಾಮಗಿಗಳನ್ನು ಖರೀದಿಸಿದ ಬಿಲ್ ಕೂಡಾ ಆತನ ಬಳಿ ಇದೆ. ಪೊಲೀಸರು ಸರಿಯಾಗಿ ವಿಚಾರಿಸಿದ್ದರೆ ಅವನನ್ನು ಆವತ್ತೇ ಬಿಡುಗಡೆ ಮಾಡಬಹುದಿತ್ತು ಎಂದು ತಂಝೀಲ್‌ನ ಅಣ್ಣ ನೌಷಾದ್ 'ವಾರ್ತಾಭಾರತಿ'ಯ ಜೊತೆ ನೋವು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News