ಮಹದಾಯಿ: ಕರ್ನಾಟಕಕ್ಕೆ ಮತ್ತೆ ಮೋಸ

Update: 2020-01-01 04:51 GMT

  ಧಾರವಾಡ ಬೆಳಗಾವಿ, ಗದಗ ಮತ್ತು ಬಾಗಲಕೋಟ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಯೋಜನೆಯ ವಿಷಯದಲ್ಲಿ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕಕ್ಕೆ ಮತ್ತೆ ಮೋಸ ಮಾಡಿದೆ. ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಮುನ್ನ ಮಹದಾಯಿ ಯೋಜನೆ ಕೈಗೆತ್ತಿಕೊಳ್ಳಲು ಯಾವ ಅಭ್ಯಂತರವೂ ಇಲ್ಲ ಎಂದು ಭರವಸೆ ನೀಡಿದ್ದ ಕೇಂದ್ರ ಸರಕಾರ ಚುನಾವಣೆ ಮುಗಿದ ನಂತರ ಕೈ ಕೊಟ್ಟಿದೆ. ಕೇಂದ್ರ ಪರಿಸರ ಸಚಿವಾಲಯ ಈ ಹಿಂದೆ ತಾನೇ ನೀಡಿದ್ದ ಆದೇಶವನ್ನು ತಡೆ ಹಿಡಿದಿದೆ.ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ಮಂಡಳಿ ನೀಡಿದ ಆದೇಶದಂತೆ ಯೋಜನೆ ಕಾರ್ಯಗತಗೊಳಿಸಲು ಈ ಮುಂಚೆ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಅವರ ಸಮ್ಮುಖದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಪರಿಸರ ಸಚಿವ ಜಾವ್ಡೇಕರ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಆದೇಶ ನೀಡಿದ್ದರು. ಆದರೆ ಈಗ ಅದೇ ಸಚಿವರೇ ತಮ್ಮ ಆದೇಶವನ್ನು ತಡೆ ಹಿಡಿಯುವ ಮೂಲಕ ಉರಿಯುವ ಗಾಯಕ್ಕೆ ಉಪ್ಪು ಸವರಿದ್ದಾರೆ.

  ಮಹದಾಯಿ ಯೋಜನೆಗೆ ಗೋವಾದಲ್ಲಿ ಇರುವ ಬಿಜೆಪಿ ಸರಕಾರ ಮೊದಲಿನಿಂದಲೂ ಅಡ್ಡಗಾಲು ಹಾಕುತ್ತಲೇ ಬಂದಿದೆ. ನ್ಯಾಯ ಮಂಡಳಿ ತೀರ್ಪನ್ನೂ ಗೋವಾ ಸರಕಾರ ವಿರೋಧಿಸಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ವಪಕ್ಷ ನಾಯಕರ ನಿಯೋಗವನ್ನು ದಿಲ್ಲಿಗೆ ಕರೆದುಕೊಂಡು ಹೋಗಲಾಗಿತ್ತು. ಆಗ ಮೈಗೆ ಎಣ್ಣೆ ಹಚ್ಚಿಕೊಂಡೇ ಕರ್ನಾಟಕದ ನಿಯೋಗದ ಜೊತೆ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ ಗೋವಾ, ಮಹಾರಾಷ್ಟ್ರ ವಿಧಾನ ಸಭೆಗಳ ಪ್ರತಿಪಕ್ಷ ನಾಯಕರನ್ನು ಒಪ್ಪಿಸಿಕೊಂಡು ಬನ್ನಿ ಎಂದು ವಿತಂಡವಾದದ ಸಲಹೆಯನ್ನು ನೀಡಿ, ಮೂಗಿಗೆ ತುಪ್ಪಸವರಿ ಕಳುಹಿಸಿದ್ದರು. ವಿಧಾನಸಭಾ ಚುನಾವಣೆ ಬಂದಾಗ ಅನುಮತಿ ನೀಡಿದಂತೆ ಮಾಡಿ ಈಗ ಮತ್ತೆ ಕೈಕೊಟ್ಟಿರುವುದು ಖಂಡನೀಯವಾಗಿದೆ. ಉತ್ತರ ಕರ್ನಾಟಕದ ಜನ ಹೇಗಿದ್ದರೂ ಬಿಜೆಪಿಗೆ ಮತ ಹಾಕುತ್ತಾರೆ. ಕುಡಿಯುವ ನೀರಿನ ಯೋಜನೆಗಿಂತ ಅವರ ಆದ್ಯತೆ ಬೇರೆಯದೇ ಆಗಿದೆ ಎಂದು ಕೇಂದ್ರದ ಬಿಜೆಪಿ ಸರಕಾರಕ್ಕೆ ಗೊತ್ತಾಗಿದೆ, ಅಂತಲೇ ಈ ನಿರ್ಲಕ್ಷ ಧೋರಣೆ ಮುಂದುವರಿದಿದೆ.

ಈಗ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದೆ. ಸದ್ಯ ಯಾವ ಚುನಾವಣೆಗಳೂ ಇಲ್ಲ. ಅಂತಲೇ ಕೇಂದ್ರ ಸರಕಾರ ಮಲತಾಯಿ ನೀತಿ ಅನುಸರಿಸುತ್ತಿದೆ.ಮಹದಾಯಿ ನೀರು ಹಂಚಿಕೆಯ ಕುರಿತಂತೆ ನ್ಯಾಯಾಧಿಕರಣವು 2018ರಲ್ಲಿ ನೀಡಿದ ತೀರ್ಪಿನ ಕುರಿತು ಸ್ಪಷ್ಟೀಕರಣ ಇನ್ನೂ ಬಾಕಿ ಇದೆ. ನ್ಯಾಯಾಧಿಕರಣದ ತೀರ್ಪನ್ನು ಪ್ರಶ್ನಿಸಿ ಗೋವಾ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ನೋಟಿಸು ಜಾರಿ ಮಾಡಿದೆ. ಈ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಈಗ ಕುಂಟು ನೆಪ ಹೇಳುತ್ತಿದೆ. ಕೇಂದ್ರ ಪರಿಸರ ಸಚಿವಾಲಯದ ವರ್ತನೆ ಸಂಶಯಾಸ್ಪದವಾಗಿದೆ. ಯಾಕೆಂದರೆ ಅನುಮತಿ ನೀಡುವಾಗ ಈ ಎಲ್ಲ ಅಂಶಗಳು ಕೇಂದ್ರ ಸರಕಾರಕ್ಕೆ ಗೊತ್ತಿರಲಿಲ್ಲವೇ? ಗೊತ್ತಿದ್ದೂ ಅನುಮತಿ ನೀಡಲಾಯಿತೇ? ಉಪಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜನರ ವೋಟುಗಳನ್ನು ಸೆಳೆಯಲು ಈ ರೀತಿ ಅನುಮತಿ ನೀಡುವ ನಾಟಕ ಆಡಲಾಯಿತೇ? ಈ ಪ್ರಶ್ನೆಗೆ ಉತ್ತರ ಬೇಕಾಗಿದೆ. ಗೋವಾದ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಕರ್ನಾಟಕದ ಜನರ ಬದುಕಿನ ಜೊತೆ, ಭಾವನೆಗಳ ಜೊತೆ ಆಟ ಆಡುವುದು ಸರಿಯಲ್ಲ.

ಗೋವಾ ಬಿಜೆಪಿ ಸರಕಾರದ ಒತ್ತಡಕ್ಕೆ ಕೇಂದ್ರದ ಮೋದಿ ಸರಕಾರ ಮಣಿದಿರಬಹುದು, ಆದರೆ ರಾಜ್ಯದ ಬಿಜೆಪಿ ಸಂಸದರು, ಕೇಂದ್ರ ಸಂಪುಟದಲ್ಲಿ ಇರುವ ರಾಜ್ಯದ ಸಚಿವರು ಏನು ಮಾಡುತ್ತಿದ್ದಾರೆ? ರಾಜ್ಯಕ್ಕೆ ಸಂಬಂಧಪಡದ ಕೋಮು ಪ್ರಚೋದಕ ವಿಷಯಗಳ ಬಗ್ಗೆ ಬಿಜೆಪಿ ಸಚಿವರು, ಸಂಸದರು, ಶಾಸಕರು ಸಾಕಷ್ಟು ಮಾತಾಡುತ್ತಾರೆ. ಪೌರತ್ವ ಕಾನೂನಿನ ಬಗ್ಗೆ ಮಹಾ ಕಾನೂನು ಪಂಡಿತರಂತೆ ಮಾತಾಡುತ್ತಾರೆ. ಪೌರತ್ವ ಕಾನೂನು ವಿರೋಧಿ ಚಳವಳಿಗಾರರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕೆಂದು, ಚಳವಳಿಗಾರರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಕರೆ ನೀಡುತ್ತಾರೆ. ಆದರೆ ಕರ್ನಾಟಕದ ಜಲ ಮತ್ತು ನೆಲದ ಪ್ರಶ್ನೆ ಬಂದಾಗ ಇವರ ನಾಲಿಗೆಗೆ ಬಲ ಬರುವುದಿಲ್ಲ. ಪ್ರಧಾನಿ ಮೋದಿಯವರು ಎಲ್ಲಿ ಕೋಪ ಮಾಡಿಕೊಂಡಾರೆಂದು ಬಾಯಿ ಮುಚ್ಚಿ ಕೂರುತ್ತಾರೆ.

ಗೋವಾ ರಾಜ್ಯದಲ್ಲಿ ಇಬ್ಬರು ಸಂಸದರಿದ್ದಾರೆ. ಆದರೆ ಕರ್ನಾಟಕದಲ್ಲಿ 28 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಅವರಲ್ಲಿ 25 ಜನ ಬಿಜೆಪಿಗೆ ಸೇರಿದವರು. ವಾಸ್ತವ ಸಂಗತಿ ಹೀಗಿದ್ದೂ ಕೇಂದ್ರ ಸರಕಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ? ಮಹದಾಯಿ ಯೋಜನೆಗೆ ಕೇಂದ್ರ ಸರಕಾರ ಈ ಹಿಂದೆ ನೀಡಿದ್ದ ಅನುಮತಿಯನ್ನು ಈಗ ತಡೆ ಹಿಡಿದಿದ್ದೇಕೆ? ಇದನ್ನು ಕೇಳಲು ನಮ್ಮ ಸಂಸದರಿಗೆ ಏನಾಗಿದೆ. ರಾಜ್ಯದಲ್ಲಿ ದಿಗ್ಬಂಧನ ಕೇಂದ್ರಗಳನ್ನು ನಿರ್ಮಿಸಲು ಆತುರ ತೋರುತ್ತಿರುವ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಯಾಕೆ ತೆಪ್ಪಗಿದೆ?

ಮಹದಾಯಿ ಯೋಜನೆಯ ಪ್ರಶ್ನೆಯಲ್ಲಿ ಕೇಂದ್ರ ಸರಕಾರದ ಎದುರು ತಮ್ಮ ವಾದ ಮಂಡಿಸಲು ಮತ್ತು ಪ್ರತಿರೋಧವನ್ನು ದಾಖಲಿಸಲು ರಾಜ್ಯದ ಬಿಜೆಪಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ರಾಜ್ಯದ ಬಿಜೆಪಿ ಸರಕಾರ ಮೋದಿಯವರಿಗೆ ಹೆದರಿ ಜಾಣ ಮೌನ ತಾಳಿದೆ. ಮಂಗಳೂರು ಗಲಭೆಗಳ ಬಗ್ಗೆ ವೀರಾಧಿವೀರರಂತೆ ಹೇಳಿಕೆ ನೀಡುವ ಬಿಜೆಪಿ ಸಂಸದರು ಮಹದಾಯಿ ಪ್ರಶ್ನೆಯಲ್ಲಿ ಬಾಯಿ ಮುಚ್ಚಿ ಕೊಳ್ಳುತ್ತಾರೆ.
ಮಹದಾಯಿ ವಿವಾದದ ಪ್ರಶ್ನೆಯಲ್ಲಿ ಕೇಂದ್ರದ ಬಿಜೆಪಿ ಸರಕಾರದ ನಡೆ ಪಕ್ಷಪಾತದಿಂದ ಕೂಡಿದೆ. ಗೋವಾಕ್ಕೆ ಬೆಣ್ಣೆ ನೀಡಿ ಕರ್ನಾಟಕಕ್ಕೆ ಸುಣ್ಣ ನೀಡಲಾಗುತ್ತಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡುವ ಅಪಚಾರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News