ಮೈಸ್ತೇನಿಯಾ ರೋಗ ಲಕ್ಷಣಗಳು

Update: 2020-01-02 18:31 GMT

ಕೇವಲ 10 ನಿಮಿಷ ನಡೆದರೂ ನಿಮಗೆ ನಿಶ್ಶಕ್ತಿ ಮತ್ತು ಆಯಾಸವುಂಟಾಗುತ್ತದೆಯೇ? ಏನಾದರೂ ದೈಹಿಕ ಚಟುವಟಿಕೆಯನ್ನು ಆರಂಭಿಸಿದ ತಕ್ಷಣ ಏದುಸಿರು ಬಿಡುತ್ತೀರಾ? ಕುರ್ಚಿ ಅಥವಾ ಭಾರವಾದ ಬ್ಯಾಗ್‌ನ್ನು ಎತ್ತುವುದು ನಿಮಗೆ ಕಷ್ಟವಾಗುತ್ತದೆಯೇ? ಇವೆಲ್ಲ ಸಾಮಾನ್ಯ ವಿಷಯಗಳು, ಆದರೆ ಆಗಾಗ್ಗೆ ಇಂತಹ ಸ್ಥಿತಿಯನ್ನು ನೀವು ಎದುರಿಸುತ್ತಿದ್ದರೆ ಅದು ಕಳವಳಕಾರಿಯಾಗುತ್ತದೆ. ಈ ಪೈಕಿ ಕೆಲವು ಅಥವಾ ಎಲ್ಲ ಸಮಸ್ಯೆಗಳು ನಿಮ್ಮನ್ನು ದಿನವೂ ಕಾಡುತ್ತಿದ್ದರೆ ನೀವು ಮೈಸ್ತೇನಿಯಾ ಅಥವಾ ಸ್ನಾಯು ದೌರ್ಬಲ್ಯದಿಂದ ನರಳುತ್ತಿರಬಹುದು. ಇದು ನಮ್ಮ ಸ್ನಾಯುಗಳಿಗೆ ಕ್ಷಣಾರ್ಧದಲ್ಲಿ ದಣಿವನ್ನುಂಟು ಮಾಡುವ ಗಂಭೀರ ಸ್ಥಿತಿಯಾಗಿದೆ. ಈ ರೋಗವು ದೀರ್ಘಕಾಲಿಕವಾಗಿದ್ದರೆ ಮಾರಣಾಂತಿಕವೂ ಆಗಬಲ್ಲದು.

ಮೈಸ್ತೇನಿಯಾ ಗ್ರೇವಿಸ್ ಅಥವಾ ಮೈಸ್ತೇನಿಯಾ ಮೂಲತಃ ಸ್ನಾಯುಗಳನ್ನು ನಿಶ್ಶಕ್ತಗೊಳಿಸುವ ನ್ಯುರೋಮಸ್ಕುಲರ್ ಅಥವಾ ನರಸ್ನಾಯುಕ ರೋಗವಾಗಿದೆ.

♦ ಮೈಸ್ತೇನಿಯಾ ಏಕೆ ಉಂಟಾಗುತ್ತದೆ?

ರಕ್ತದಲ್ಲಿ ಎಸಿಟೈಲ್‌ಕೊಲಿನೆಸ್ಟರೇಸ್ ಎಂಬ ರಾಸಾಯನಿಕ ಘಟಕದ ಕೊರತೆಯಾದಾಗ ಮೈಸ್ತೇನಿಯಾ ಉಂಟಾಗುತ್ತದೆ. ಈ ರಾಸಾಯನಿಕ ಘಟಕವು ಶರೀರದಲ್ಲಿಯ ಸ್ನಾಯುಗಳನ್ನು ಕ್ರಿಯಾಶೀಲವಾಗಿರಿಸುತ್ತದೆ ಮತ್ತು ಅವು ಶಕ್ತಿಯಿಂದ ತುಂಬಿರುವಂತೆ ಮಾಡುತ್ತದೆ. ಈ ರಾಸಾಯನಿಕದ ಕೊರತೆಯುಂಟಾದಾಗ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ಆಲಸ್ಯಗೊಳ್ಳುತ್ತವೆ,ಇದರಿಂದಾಗಿ ವ್ಯಕ್ತಿಗೆ ನಡೆಯುತ್ತಿರುವಾಗ ಅಥವಾ ಲಘು ಕೆಲಸ ಮಾಡುತ್ತಿರುವಾಗ ತೀವ್ರ ಆಯಾಸವಾಗುತ್ತದೆ.

♦ ಮೈಸ್ತೇನಿಯಾಕ್ಕೆ ಪ್ರಮುಖ ಕಾರಣಗಳು

ಮೈಸ್ತೇನಿಯಾ ಅಥವಾ ಸ್ನಾಯುದೌರ್ಬಲ್ಯಕ್ಕೆ ವಯಸ್ಸು ಅಥವಾ ಲಿಂಗದ ಭೇದವಿಲ್ಲ, ಅದು ಯಾವುದೇ ವಯಸ್ಸಿನ ಪುರುಷರು ಅಥವಾ ಮಹಿಳೆಯರನ್ನು ಕಾಡುತ್ತದೆ. ಆದರೆ ಈ ರೋಗಕ್ಕೆ ಗುರಿಯಾಗುವ ಅಪಾಯ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು. ಸಾಮಾನ್ಯವಾಗಿ ಬಾಲಕಿಯರು ಮೈನೆರೆತ ಬಳಿಕ ಈ ರೋಗಕ್ಕೆ ತುತ್ತಾಗುವ ಸಂಭವನೀಯತೆಯು ಹೆಚ್ಚಾಗುತ್ತದೆ. ಇದರಿಂದಾಗಿ ಅಂತಹವರು ಸದಾ ಕಾಲ ಆಯಾಸ ಮತ್ತು ಆಲಸ್ಯವನ್ನು ಅನುಭವಿಸುತ್ತಿರುತ್ತಾರೆ.

ಕೆಲವೊಮ್ಮೆ ಅತಿಯಾದ ಚಳಿ ಅಥವಾ ಅತಿಯಾದ ಉಷ್ಣತೆಯೂ ಮೈಸ್ತೇನಿಯಾ ರೋಗಕ್ಕೆ ಕಾರಣವಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಹೆದರಿಕೆ, ಒತ್ತಡ ಅಥವಾ ಅತ್ಯುತ್ಸಾಹವೂ ಈ ರೋಗವನ್ನುಂಟು ಮಾಡಬಲ್ಲವು.

♦ ಲಕ್ಷಣಗಳು

ನಿಶ್ಶಕ್ತಿ ಮತ್ತು ಆಯಾಸ ಮೈಸ್ತೇನಿಯಾದ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಈ ರೋಗದಿಂದಾಗಿ ರೋಗಿಯ ನರಗಳು ಮತ್ತು ಸ್ನಾಯುಗಳು ಪರಸ್ಪರ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದರಂತೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಮೈಸ್ತೇನಿಯಾದ ಆರಂಭದ ಹಂತದಲ್ಲಿ ಕೂದಲು ಬಾಚಿಕೊಳ್ಳಲು ಕಷ್ಟವಾಗುವುದು, ಮಾತನಾಡುವಾಗ ತೊಂದರೆ, ಮೆಟ್ಟಿಲುಗಳನ್ನು ಹತ್ತುವಾಗ ಬಳಲಿಕೆಯುಂಟಾಗುವುದು, ಭಾರವಾದ ವಸ್ತುಗಳನ್ನು ಹೊತ್ತೊಯ್ಯಲು ಕಷ್ಟವಾಗುವುದು, ಶರೀರದಲ್ಲಿ ಮರಗಟ್ಟಿದ ಅಥವಾ ಪಾರ್ಶ್ವವಾಯುವಿಗೆ ತುತ್ತಾದಂತಹ ಅನುಭವ, ಉಸಿರಾಟದಲ್ಲಿ ಕಷ್ಟ, ಕೆಲಸ ಮಾಡುವಾಗ ದಮ್ಮು ಕಟ್ಟುವುದು, ಅತಿಯಾದ ಬಳಲಿಕೆಯಿಂದಾಗಿ ಕಣ್ಣಿನ ರೆಪ್ಪೆಗಳು ಮುಚ್ಚಿ ಮುಚ್ಚಿ ಬರುವುದು, ಮಸುಕಾದ ದೃಷ್ಟಿ ಇವೂ ಮೈಸ್ತೇನಿಯಾದ ಲಕ್ಷಣಗಳಲ್ಲಿ ಸೇರಿವೆ.

ಈ ಪೈಕಿ 2-3 ಲಕ್ಷಣಗಳು ನಿಮ್ಮ ಶರೀರದಲ್ಲಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳಿ. ಭವಿಷ್ಯದಲ್ಲಿ ಯಾವುದೇ ಗಂಭೀರ ಅಪಾಯವನ್ನು ನಿವಾರಿಸಲು ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

ಮೈಸ್ತೇನಿಯಾಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಆಹಾರ ಸೇವನೆ ಮತ್ತು ಉಸಿರಾಟದಲ್ಲಿ ಕಷ್ಟ ಇನ್ನಷ್ಟು ತೀವ್ರ ಗೊಳ್ಳುತ್ತದೆ ಮತ್ತು ರೋಗಿಯ ಪ್ರಾಣಕ್ಕೆ ಅಪಾಯ ಎದುರಾಗುವ ಸ್ಥಿತಿಯೂ ಉಂಟಾಗಬಹುದು. ಹೀಗಾಗಿ ಮೈಸ್ತೇನಿಯಾ ರೋಗಕ್ಕೆ ಆರಂಭದ ದಿನಗಳಿಂದಲೇ ಚಿಕಿತ್ಸೆಯನ್ನು ಪಡೆಯಬೇಕಾಗುತ್ತದೆ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ