ಭಾರತದ ಆರ್ಥಿಕ ಸ್ಥಿತಿ ಸಮಸ್ಯೆ, ಕಾರಣ ಮತ್ತು ಪರಿಹಾರ

Update: 2020-01-02 18:32 GMT

ಭಾರತದ ಆರ್ಥಿಕತೆಯ ಸ್ಥಿತಿ ಚೆನ್ನಾಗಿಲ್ಲ, ಬಿಕ್ಕಟ್ಟು ತೀವ್ರವಾಗುತ್ತಿದೆ ಎಂದು ಬಹುಪಾಲು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಅರ್ಥಶಾಸ್ತ್ರಜ್ಞರಲ್ಲಿ ಸ್ವಲ್ಪಮಟ್ಟಿನ ಒಮ್ಮತವೂ ಇದೆ. ಸರಕಾರದ ಕ್ರಮಗಳ ಬಗ್ಗೆ ನಿರಾಸೆಯೂ ವ್ಯಕ್ತವಾಗುತ್ತಿದೆ. ದೇಶದ ಉಳಿವಿನ ದೃಷ್ಟಿಯಿಂದ ಈ ಬಗ್ಗೆ ಹೆಚ್ಚು ಗಂಭೀರವಾಗಿ ಚಿಂತಿಸಬೇಕಾಗಿದೆ. ಸಂಬಂಧಪಟ್ಟವರು ಕಾರ್ಯೋನ್ಮುಖರಾಗುವಂತೆ ಒತ್ತಡವೂ ಬೇಕಾಗುತ್ತದೆ. ಎಲ್ಲವೂ ಕೈಮೀರಿ ಹೋಗದೆ ಇರುವಾಗಲೇ ಕ್ರಮ ತೆಗೆದುಕೊಳ್ಳುವಂತಾಗಲಿ. ಸರಕಾರಕ್ಕೆ ಪ್ರಮುಖ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದ ಅರವಿಂದ್ ಸುಬ್ರಮಣ್ಯಂ ಭಾರತದ ಆರ್ಥಿಕತೆಯ ಬಗ್ಗೆ ಇತ್ತೀಚೆಗೆ ಜಾಷ್ ಫೆಲ್ಡ್‌ಮನ್ ಜೊತೆ ಸೇರಿಕೊಂಡು ಒಂದು ಸಂಶೋಧನಾ ಲೇಖನವನ್ನು ಪ್ರಕಟಿಸಿದ್ದಾರೆ. ಈಗ ಆಕ್ಸ್‌ಫರ್ಡ್‌ನಲ್ಲಿ ಪಾಠಮಾಡುತ್ತಿರುವ ಅರವಿಂದ್ ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಗಂಭೀರತೆ, ಅದಕ್ಕೆ ಕಾರಣಗಳು ಮತ್ತು ಪರಿಹಾರಗಳನ್ನು ಚರ್ಚಿಸಿದ್ದಾರೆ. ತೀವ್ರ ಭಿನ್ನಾಭಿಪ್ರಾಯವೂ ಸಾಧ್ಯ. ಆದರೆ ನಿರ್ಲಕ್ಷಿಸುವುದು ತರವಲ್ಲ. ಚರ್ಚಿಸಬೇಕು ಅನ್ನುವ ಕಾರಣಕ್ಕೆ ಅವರ ಪ್ರಮುಖ ಚಿಂತನೆಗಳನ್ನು ಸಂಗ್ರಹವಾಗಿ ನೀಡಲಾಗಿದೆ.

ಅವರ ವಾದ ತೀರಾ ಸರಳವಾಗಿ, ನೇರವಾಗಿದೆ. ನಮ್ಮ ಆರ್ಥಿಕತೆಯಲ್ಲಿ ಇಂದು ಕಾಣುತ್ತಿರುವುದು ಸಾಧಾರಣವಾದ ಮಾಮೂಲಿಯಾದ ಆರ್ಥಿಕ ನಿಧಾನವಲ್ಲ. ತುಂಬಾ ಗಂಭೀರವಾದದ್ದು. ಕಳೆದ ಮೂವತ್ತು ವರ್ಷಗಳಲ್ಲಿ ಎಂದೂ ಹೀಗೆ ಆಗಿರಲಿಲ್ಲ. ಅದು ಐಸಿಯು (ತೀವ್ರ ನಿಗಾ ಘಟಕದ) ಕಡೆ ಹೋಗುತ್ತಿದೆ ಎನ್ನುತ್ತಿದ್ದಾರೆ. ಮೊದಲಿಗೆ ಅವರು ಭಾರತದ ಆರ್ಥಿಕ ಪರಿಸ್ಥಿತಿಯನ್ನು ಹೇಗೆ ವಿವರಿಸುತ್ತಾರೆ ಅನ್ನುವುದನ್ನು ಅರ್ಥಮಾಡಿಕೊಳ್ಳೋಣ.

ಭಾರತದ ಆರ್ಥಿಕತೆಯ ಸದ್ಯದ ಸ್ಥಿತಿ:

1. ಭಾರತದಲ್ಲಿ ಬೆಳವಣಿಗೆಯ ದರ ಅಂದರೆ ಜಿಡಿಪಿ ಕುಸಿಯುತ್ತಿದೆ. ಕೆಲದಿನಗಳ ಹಿಂದೆ ಶೇ. 8ರಷ್ಟು ಇದ್ದುದು ಈಗ ಶೇ. 4.5ಕ್ಕೆ ಕುಸಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದೇ ಕಡಿಮೆ. ಆದರೆ ಈ ಜಿಡಿಪಿ ಸಂಖ್ಯೆಯನ್ನು ಕುರಿತಂತೆಯೂ ಅವರು ತಮ್ಮ ಹಿಂದಿನ ಲೇಖನದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಯಾಕೆಂದರೆ ಬಳಕೆಯ ದರ, ಕಂದಾಯ ಸಂಗ್ರಹಣೆ ಇತ್ಯಾದಿ ಉಳಿದ ಸೂಚಿಗಳನ್ನು ಗಮನಿಸಿದರೆ ದೇಶದ ಅರ್ಥವ್ಯವಸ್ಥೆ ಈ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಡುತ್ತಾರೆ. 2000-2002ರಲ್ಲಿ ಜಿಡಿಪಿ ಇಷ್ಟೇ ಇತ್ತು. ಆದರೆ ಉಳಿದ ಸೂಚಿಗಳು ಉತ್ತಮವಾಗಿದ್ದವು. 1991-92ರಲ್ಲಿ ಆರ್ಥಿಕ ಪರಿಸ್ಥಿತಿ ಹೀಗೆ ಇತ್ತು. ಆದರೆ ಆಗ ಜಿಡಿಪಿ ದರ ಕೇವಲ ಶೇ. 1.1ರಷ್ಟಿತ್ತು. ಹಾಗಾಗಿ ಈಗಿನ ಜಿಡಿಪಿ ಲೆಕ್ಕಾಚಾರದ ಬಗ್ಗೆ ಅನುಮಾನ ಬರುತ್ತದೆ. ಆ ಅನುಮಾನ ನಿಜವಾದರೆ ಆರ್ಥಿಕ ಪರಿಸ್ಥಿತಿ ಇನ್ನೂ ನಿರಾಶಾದಾಯಕವಾಗಿ ಇದ್ದಿರಲೇಬೇಕು. ಒಂದೆರಡು ಆರ್ಥಿಕ ಸೂಚಿಗಳನ್ನು ಗಮನಿಸೋಣ.

1. ಇಂದು ಭಾರತದ ರಫ್ತು ಕಳೆದ 30ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ. 2007-8ರಲ್ಲಿ ಅನಿಲೇತರ ರಫ್ತು ಶೇ. 8ರಷ್ಟು ಇದ್ದದ್ದು ಈಗ ಶೇ. -1 ಆಗಿದೆ.

2. ಹಾಗೆಯೇ ಬಂಡವಾಳ ಸರಕು ಕೈಗಾರಿಕೆಗಳು ಶೇ. -10ರಷ್ಟಾಗಿದೆ. ಅಂದರೆ ಬೆಳವಣಿಗೆ ಋಣಾತ್ಮಕವಾಗಿದೆ. ಬಳಕೆದಾರರ ಸರಕುಗಳ ಅಂದರೆ ಜನ ಬಳಸುವ ಸರಕುಗಳ ಉತ್ಪಾದನೆಯೂ 2017-18ರಲ್ಲಿ ಶೇ. 5ರಷ್ಟು ಇದ್ದುದು ಈಗ ಶೇ. 1ಕ್ಕೆ ಕುಸಿದಿದೆ.

3. ವಿದ್ಯುತ್ ಉತ್ಪಾದನೆ ಕಳೆದ ಮೂವತ್ತು ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಈಗ ಅದು ಶೇ. 1.8ರಷ್ಟು ಇದೆ.

ಈ ಎಲ್ಲಾ ಸೂಚಿಗಳೂ ಋಣಾತ್ಮಕವಾಗಿದೆ. ಇಲ್ಲವೇ ತುಂಬಾ ಅಪಾಯಕಾರಿ ಮಟ್ಟದಲ್ಲಿದೆ. ಹಾಗಾಗಿಯೇ ಅರವಿಂದ್ ಹೇಳುವುದು ಇದು ಇನ್ನೊಂದು ತಾತ್ಕಾಲಿಕ ಹಿನ್ನಡೆ ಅಲ್ಲ. ಭಾರತದ ವಿಶೇಷವಾದ ಸ್ಲೋಡೌನ್. 1991ಕ್ಕೆ ಹೋಲಿಸಿದರೆ ಆಗಿನಂತೆೆ ಬಿಓಪಿ ಬಿಕ್ಕಟ್ಟು, ಹಣದುಬ್ಬರ, ವಿದೇಶಿ ವಿನಿಮಯದ ಕೊರತೆ, ವಿದೇಶಿ ಸಾಲದ ಹೊರೆ ಇವೆಲ್ಲಾ ಈಗಿಲ್ಲ. ಆದರೆ ಆರ್ಥಿಕತೆಯ ನೈಜ ಕ್ಷೇತ್ರಗಳಾದ ಬೆಳವಣಿಗೆ, ಹೂಡಿಕೆ, ಆಮದು, ರಫ್ತು, ಇವೆಲ್ಲವೂ ಕುಸಿದಿವೆ. ಇವೆಲ್ಲಾ ಉದ್ಯೋಗ, ಸರಕಾರದ ಸಾಮಾಜಿಕ ಕಾರ್ಯಕ್ರಮಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತವೆ.

ತೆರಿಗೆ ಸಂಗ್ರಹಣೆಯಲ್ಲೂ ಸಿಕ್ಕಾಪಟ್ಟೆ ಕುಸಿತ ಕಾಣುತ್ತಿದೆ.

ಪ್ರತ್ಯಕ್ಷ ತೆರಿಗೆ ಅಂದರೆ ವೈಯಕ್ತಿಕ ವರಮಾನ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಬೆಳವಣಿಗೆ 2017-18ರಲ್ಲಿ ಶೇ. 16ರಷ್ಟು ಇದ್ದುದು, 18-19ರಲ್ಲಿ ಶೇ. 10ರಷ್ಟು ಆಗಿತ್ತು. ಈಗ ಅದು ಸೊನ್ನೆಯಾಗಿದೆ (ಹಣದುಬ್ಬರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.) ಇದೇ ಪ್ರವೃತ್ತಿಯನ್ನು ಪರೋಕ್ಷ ತೆರಿಗೆ ಅಂದರೆ ಜಿಎಸ್‌ಟಿಯಲ್ಲೂ ನೋಡಬಹುದು. ಇವೆಲ್ಲಾ ದೇಶದ ಆರ್ಥಿಕ ಹಿಂಜರಿಕೆಯ ಹಿನ್ನಡೆಯ ಫಲ. ಹಾಗಾಗಿ ಒಂದೆಡೆ ಆರ್ಥಿಕ ಹಿನ್ನಡೆಯಾದರೆ ಇನ್ನೊಂದೆಡೆ ಬಂಡವಾಳದ ಕೊರತೆ ಸರಕಾರವನ್ನು ಕಾಡುತ್ತಿದೆ.

ಈ ಪರಿಸ್ಥಿತಿಗೆ ಕಾರಣಗಳೇನು?

1. ನಮ್ಮ ಮುಂದಿರುವ ಈ ಆರ್ಥಿಕ ಹಿನ್ನಡೆಗೆ ಮುಖ್ಯವಾಗಿ ದೇಶದ ಹಣಕಾಸು ವ್ಯವಸ್ಥೆ ಮುರಿದುಬಿದ್ದಿರುವುದು ಕಾರಣ. ರಫ್ತು, ಹೂಡಿಕೆ ಇತ್ಯಾದಿಗಳು ಕುಸಿಯುತ್ತಿರುವುದು ದೀರ್ಘ ಕಾಲೀನ ಕಾರಣಗಳು. ಹಾಗೆಯೇ ಕೃಷಿಯಲ್ಲಿ ಕುಸಿತ, ನಗದು ಅಮಾನ್ಯೀಕರಣ ಇತ್ಯಾದಿ ಅಲ್ಪಕಾಲೀನ ಕಾರಣಗಳೂ ಸೇರಿಕೊಂಡಿವೆ. ಇವೆರಡನ್ನೂ ಹಣಕಾಸು ವ್ಯವಸ್ಥೆಯಲ್ಲಿ ಒಂದನ್ನೊಂದು ಸೇರಿಕೊಂಡಿವೆ. ಆದರೆ ಸದ್ಯದ ಆರ್ಥಿಕ ಹಿನ್ನಡೆಗೆ ಅರವಿಂದ್ ಅವರ ದೃಷ್ಟಿಯಲ್ಲಿ ಮುಖ್ಯವಾಗಿ ಕಾರಣವಾಗಿರುವುದು ಜೋಡಿ ಬ್ಯಾಲೆನ್ಸ್‌ಶೀಟ್ ಸಮಸ್ಯೆ. ಇದು ಎರಡು ಅಲೆಗಳಲ್ಲಿ ನಮ್ಮ ಆರ್ಥಿಕತೆಯನ್ನು ಕಾಡಿದೆ.

1. ಈಗ ಮೊದಲ ಜೋಡಿ ಬ್ಯಾಲೆನ್ಸ್ ಶೀಟ್ ಸಮಸ್ಯೆಯನ್ನು ಗಮನಿಸೋಣ. ಆಗ ಸಾರ್ವಜನಿಕ ಬ್ಯಾಂಕುಗಳು ಮೂಲಸೌಕರ್ಯ (ಇನ್ಫ್ರಾಸ್ಟ್ರಕ್ಚರ್) ಒದಗಿಸುವ ಕಾರ್ಪೊರೇಟ್ ಕಂಪೆನಿಗಳಿಗೆ ಧಾರಾಳವಾಗಿ ಸಾಲನೀಡಿದ್ದವು. ಆ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಏರಿಕೆಯಲ್ಲಿತ್ತು. ನಂತರ ಬೆಳವಣಿಗೆ ನಿಧಾನವಾಗತೊಡಗಿತು. ಆ ಕಂಪೆನಿಗಳ ಸ್ಥಿತಿಯೂ ಹದಗೆಡುತ್ತಾ ಹೋಯಿತು. ಅವುಗಳು ಸಾಲವನ್ನು ತೀರಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅವುಗಳ ಆಯವ್ಯಯ ಖಾತೆಯ ಸ್ಥಿತಿಯು ಕೆಟ್ಟಿತು. ಪರಿಣಾಮವಾಗಿ ಬ್ಯಾಂಕುಗಳ ಬ್ಯಾಲೆನ್ಸ್‌ಶೀಟ್ ಸ್ಥಿತಿಯೂ ಹಾಳಾಯಿತು.

ಈಗಿನದ್ದು ಎರಡನೆಯ ಹಣಕಾಸು ವ್ಯವಸ್ಥೆಯ ಬಿಕ್ಕಟ್ಟು. ಇದು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಮೂಲದಿಂದ ಹುಟ್ಟಿಕೊಂಡ ಸಮಸ್ಯೆ. ಈ ಸಂಸ್ಥೆಗಳು ಕೂಡ ಬ್ಯಾಂಕಿನ ಹಾಗೆ ಸಾಲಕೊಡುತ್ತವೆ. ಆದರೆ ಠೇವಣಿದಾರರಿಂದ ಠೇವಣಿ ಸಂಗ್ರಹಿಸುವುದಿಲ್ಲ. ಈ ಕಂಪೆನಿಗಳು ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಅಂದರೆ ರಸ್ತೆಗಳನ್ನು, ಸೇತುವೆಗಳನ್ನು, ವಿಮಾನ ನಿಲ್ದಾಣಗಳನ್ನು ಕಟ್ಟುವ ಕಂಪೆನಿಗಳಿಗೆ ಧಾರಾಳವಾಗಿ ಸಾಲ ನೀಡಿದವು. ಇಂತಹ ಸಾಲದ ಪ್ರಮಾಣ ಪ್ರತಿ ವರ್ಷ ಶೇ. 20ರಷ್ಟು ಬೆಳೆಯುತ್ತಿತ್ತು. ಆದರೆ ಈಗ ಆರ್ಥಿಕ ಹಿನ್ನಡೆಯಿಂದಾಗಿ ರಿಯಲ್ ಎಸ್ಟೇಟ್ ಕಂಪೆನಿಗಳು ಸಂಕಟಕ್ಕೆ ಸಿಕ್ಕಿವೆ. ಅವುಗಳು ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಪರಿಣಾಮವಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಇಕ್ಕಟ್ಟಿಗೆ ಸಿಕ್ಕಿದವು. ಒಂದು ಕಡೆ ರಿಯಲ್ ಎಸ್ಟೇಟ್ ಕಂಪೆನಿಗಳ ಆಯವ್ಯಯ ಪರಿಸ್ಥಿತಿ ಹದಗೆಟ್ಟಿತು. ಅದರ ಪರಿಣಾಮವಾಗಿ ಬ್ಯಾಂಕೇತರ ಸಂಸ್ಥೆಗಳ ಸ್ಥಿತಿ ಹದಗೆಟ್ಟಿತು. ಇದು ಎರಡನೆಯ ಜೋಡಿ ಬ್ಯಾಲೆನ್ಸ್ ಷೀಟ್ ಸಮಸ್ಯೆ.

ಸಮಸ್ಯೆಯ ಭೀಕರತೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಗೃಹನಿರ್ಮಾಣದ ಉದಾಹರಣೆಯನ್ನು ತೆಗೆದುಕೊಳ್ಳೋಣ. 2019ರಲ್ಲಿ ಇದು ಮೇಲಿನ 8 ದೊಡ್ಡ ನಗರಗಳಲ್ಲಿ ಒಟ್ಟು 10 ಲಕ್ಷಕೋಟಿ ಮೌಲ್ಯದ ಮನೆಗಳು ನಿರ್ಮಾಣವಾದರೆ ಅದರಲ್ಲಿ ಕೇವಲ 2ಲಕ್ಷಕೋಟಿಯಷ್ಟು ಮೌಲ್ಯದ ಮನೆಗಳು ಮಾತ್ರ ಮಾರಾಟವಾದವು. ಉಳಿದ 8 ಲಕ್ಷಕೋಟಿಯಷ್ಟು ಮೌಲ್ಯದ ಮನೆಗಳು ಮಾರಾಟವಾಗದೆ ಹಾಗೇ ಉಳಿದವು. ಕೆಲ ವರ್ಷಗಳಿಂದ ಪ್ರತಿವರ್ಷ ಹೀಗೆ ನಡೆದುಕೊಂಡು ಬಂದಿದೆ. ಸಹಜವಾಗಿಯೇ ಗೃಹ ಸಾಲದ ಪ್ರಮಾಣ ಕಡಿಮೆಯಾಗಿದೆ. 2018-19ರಲ್ಲಿ 22 ಲಕ್ಷಕೋಟಿ ಇದ್ದದ್ದು ಈಗ 2019-20ರಲ್ಲಿ ಅದು 1 ಲಕ್ಷ ಕೋಟಿಗೆ ಕುಸಿದಿದೆ. ಈ ದುರಂತಕ್ಕೆ ಐಎಲ್‌ಎಫ್‌ಎಸ್ ಕಂಪೆನಿ ಒಂದು ಪ್ರಚೋದನೆ. 90,000 ಕೋಟಿ ರೂಪಾಯಿ ಮೌಲ್ಯದ ಬಿಕ್ಕಟ್ಟು. ಸೂಚನೆಯೇ ಇಲ್ಲದೇ ಅಪ್ಪಳಿಸಿತು. ಎಲ್ಲರ ದೃಷ್ಟಿಯೂ ಹಣಕಾಸು ಕ್ಷೇತ್ರದ ಕಡೆ ತಿರುಗಿತು. ಈ ಸಂಸ್ಥೆಗಳು ಗೃಹ ನಿರ್ಮಾಣಕ್ಕೆ ಹೇರಳವಾಗಿ ಸಾಲ ನೀಡಿದ್ದವು. ಅದು ಲಾಭದಾಯಕ ವ್ಯವಹಾರವಲ್ಲ. ಬಾಳಿಕೆಯ ವ್ಯವಹಾರವೂ ಅಲ್ಲ. ಬ್ಯಾಂಕುಗಳು ಎನ್‌ಬಿಎಫ್‌ಸಿಗಳಿಗೆ ಕೊಡುತ್ತಿದ್ದ ಹಣವನ್ನು ಹಿಂದೆಗೆದುಕೊಂಡವು. ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳು ಈ ಕ್ಷೇತ್ರಗಳಿಗೆ ಕೊಡುತ್ತಿದ್ದ ಹಣವನ್ನು ನಿಲ್ಲಿಸಿಬಿಟ್ಟವು. ಇದು ಈಗಿನ ಸಾಲದ ಕೊರತೆಗೆ ಕಾರಣ. ಸಾಲ ಅನ್ನೋದು ಸದ್ಯದ ಆರ್ಥಿಕತೆಯನ್ನು ಚಾಲನೆಯಲ್ಲಿಟ್ಟಿರುವುದು. ಅದೇ ಇಲ್ಲದೇ ಹೋದರೆ ಆರ್ಥಿಕತೆ ಸೋಲುತ್ತದೆ. ಇದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.

ಗಳಿಸುತ್ತಿರುವುದಕ್ಕಿಂತ ತೆರುತ್ತಿರುವುದೇ ಹೆಚ್ಚು

ಸಮಸ್ಯೆಗೆ ಇನ್ನೊಂದು ಭೀಕರವಾದ ಅಂಶವೂ ಸೇರಿಕೊಂಡಿದೆ. ಕಂಪೆನಿಗಳಿಗೆ ಬರುತ್ತಿರುವ ವರಮಾನಕ್ಕಿಂತ ಅವು ತೆರುತ್ತಿರುವ ಬಡ್ಡಿಯ ಪ್ರಮಾಣವೇ ಹೆಚ್ಚಿದೆ. ಸಾಲದ ಮೇಲೆ ಅವರು ತೆರುತ್ತಿರುವ ಬಡ್ಡಿ ಶೇ. 10.5ರಷ್ಟು. ಅವರ ನಿರೀಕ್ಷಿತ ಗಳಿಕೆ ಶೇ. 6.1ರಷ್ಟು. ಅಂದರೆ ಶೇ. 4.4ರಷ್ಟು ಕೊರತೆ ಬೀಳುತ್ತದೆ. ಸಾಮಾನ್ಯವಾಗಿ ಕಾರ್ಪೊರೇಟ್‌ಗಳ ಗಳಿಕೆಯನ್ನು ಜಿಡಿಪಿಯ ಆಧಾರದ ಮೇಲೆ ಅರ್ಥಮಾಡಿಕೊಳ್ಳಲಾಗುತ್ತದೆ. ಆರ್ಥಿಕತೆ ತುಂಬಾ ಉತ್ಕೃಷ್ಟವಾಗಿದ್ದಾಗ ಬೆಳವಣಿಗೆ ದರ ಶೇ. 15-20 ಹೀಗೆ ಇರುತ್ತಿತ್ತು. ಆಗ ಬಡ್ಡಿ ದರ ಶೇ. 12-13 ಇರುತ್ತಿತ್ತು. ಹಾಗಾಗಿ ಲಾಭ ಅಂತ ಇರುತ್ತಿತ್ತು. ಈಗ ಅದು ನೆಗೆಟಿವ್ ಆಗಿದೆ. ಹಾಗಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚು. ಕಾರ್ಪೊರೇಟ್‌ಗಳ ಮೇಲೂ ಒತ್ತಡ ಹೆಚ್ಚಾಗಿದೆ. ಸರಕಾರದ ಸ್ಥಿತಿಯೂ ಬಿಗಡಾಯಿಸಿದೆ. ಯಾಕೆಂದರೆ ಇದು ಸರಕಾರದ ಮೇಲೂ ಪರಿಣಾಮ ಬೀರುತ್ತದೆ.

ಹಾಗಾದರೆ ಪರಿಹಾರ ಏನು?

ಮೊದಲಿಗೆ ಏನು ಮಾಡಬಾರದು ಅನ್ನುವುದಕ್ಕೆ ಇವರ ಸಲಹೆಯನ್ನು ಗಮನಿಸೋಣ.

 1. ಬಜೆಟ್ ಕೊರತೆಯನ್ನು ಹೆಚ್ಚಿಸಬಾರದು. ಈಗ ಸರಕಾರ ಹೇಳುವಂತೆ ಅದು ಶೇ. 3.5 ಅಲ್ಲ. ಅದಕ್ಕಿಂತ ಕನಿಷ್ಠ ಶೇ. 2 ಹೆಚ್ಚಿದೆ. ಯಾಕೆಂದರೆ ಆಹಾರದ ಸಬ್ಸಿಡಿ, ಕೆಲವು ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದ ಖರ್ಚು ಇವೆಲ್ಲಾ ಬಜೆಟ್ಟಿನಲ್ಲಿ ಬಂದಿಲ್ಲ. ಹಾಗಾಗಿ ಈಗ ಇರುವ ಬಜೆಟ್ ಕೊರತೆಯೇ ಹೆಚ್ಚು. ಇನ್ನೂ ಹೆಚ್ಚಿಸಿ ಅದು ಎರಡು ಅಂಕೆ ಮುಟ್ಟುವುದಕ್ಕೆ ಬಿಡಬಾರದು. ಆಗ ಸಾಲದ ಹಣಕಾಸು ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ.

2. ಎರಡನೆಯದಾಗಿ, ವರಮಾನ ತೆರಿಗೆಯ ಪ್ರಮಾಣವನ್ನು ಇಳಿಸಬಾರದು. ತೆರಿಗೆ ಇಳಿದರೆ ಅವರ ಬಳಕೆ ಹೆಚ್ಚುತ್ತದೆ ಅನ್ನುವ ವಾದ ಸರಿಯಿಲ್ಲ. ವರಮಾನ ತೆರಿಗೆ ಕೊಡುತ್ತಿರುವವರು ಮೇಲಿನ ಸಾಪೇಕ್ಷವಾಗಿ ಶ್ರೀಮಂತ ಶೇ. 4 ಜನ. ಅವರಿಂದ ಬಳಕೆ ಹೆಚ್ಚುವುದಿಲ್ಲ. ಹಣ ಇಲ್ಲದವರಿಗೆ ಹಣ ನೀಡಬೇಕು. ಅದಕ್ಕೆ ನೇರವಾಗಿ ಅವರಿಗೆ ಹಣವನ್ನು ವರ್ಗಾಯಿಸಬೇಕು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಂತಹ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು. ಇದು ಹೆಚ್ಚು ಪರಿಣಾಮಕಾರಿಯಾದ ಹಾಗೂ ನ್ಯಾಯಯುತವಾದ ಕ್ರಮವಾಗುತ್ತದೆ.

3. ಜಿಎಸ್‌ಟಿ ದರವನ್ನು ಹೆಚ್ಚಿಸಬಾರದು. ಈಗ ಜಿಎಸ್‌ಟಿ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಅದರ ಮೇಲೆ ಒತ್ತಡ ಹೆಚ್ಚಿದೆ. ಆದರೆ ಅದನ್ನು ಹೆಚ್ಚಿಸುವುದಕ್ಕೆ ಇದು ಸಕಾಲವಲ್ಲ. ಆರ್ಥಿಕತೆ ನಿಧಾನವಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ತೆರಿಗೆಯನ್ನು ಹೆಚ್ಚಿಸಬಾರದು. ಜನರ ಬಳಕೆಯ ಸಾಮರ್ಥ್ಯ ಹೆಚ್ಚಬೇಕು ಅಂತ ಹೇಳುತ್ತಲೇ ಜಿಎಸ್‌ಟಿ ಹೆಚ್ಚಿಸುವುದು ವಿಪರ್ಯಾಸ.

ಈಗ ಏನು ಮಾಡಬೇಕು?

ಈ ನಿಟ್ಟಿನಲ್ಲಿ ಅರವಿಂದನ್ ಕೆಲವು ಸಲಹೆಗಳನ್ನು ನೀಡುತ್ತಾರೆ.

1. ಭಾರತದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಇರುವ ಅಂಕಿ ಅಂಶಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಮಾಡಬೇಕು. ಸರಿಯಾದ ಅಂಕಿ ಅಂಶಗಳು ನಮಗೆ ಅವಶ್ಯಕ. ಇದರಿಂದ ದೇಶದ ಬಗ್ಗೆ ನಂಬಿಕೆ ಹೆಚ್ಚುತ್ತದೆ. ಅಷ್ಟೇ ಅಲ್ಲ ಸೂಕ್ತ ನೀತಿಗಳನ್ನು ರೂಪಿಸುವುದಕ್ಕೂ, ಕ್ರಮ ತೆಗೆದುಕೊಳ್ಳುವುದಕ್ಕೂ ಸರಿಯಾದ ಅಂಕಿ ಅವಶ್ಯಕ. ಆರ್ಥಿಕತೆ ಅನ್ನುವುದು ತುಂಬಾ ಸಂಕೀರ್ಣವಾದ ಕಾರು ಇದ್ದಂತೆ. ಸ್ಪಿಡೋಮೀಟರ್ ಸರಿಯಾಗಿ ಕೆಲಸಮಾಡುತ್ತಿಲ್ಲ, ಟ್ಯಾಂಕಿನಲ್ಲಿ ಪೆಟ್ರೋಲ್ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಆರ್ಥಿಕತೆಯನ್ನು ನಡೆಸುವುದು ಸುಲಭವಲ್ಲ.

2. ಹಣಕಾಸು ವ್ಯವಸ್ಥೆಯನ್ನು ಸುಸ್ಥಿತಿಗೆ ತರಬೇಕು. ಅದಕ್ಕಾಗಿ,

♦ ತೀರಿಸಲಾಗದ ಸಾಲ ಎಷ್ಟಿದೆ ಅನ್ನೋದು ತಿಳಿಯಬೇಕು. ಅದಕ್ಕಾಗಿ ಒಂದು ಸ್ವತಂತ್ರ ಸಂಸ್ಥೆಯಿಂದ ಲೆಕ್ಕಾಚಾರ ಮಾಡಿಸಬೇಕು. ಮರುಪಾವತಿಸಲಾಗದ ಸಾಲ ಕೇವಲ ಎನ್‌ಬಿಎಫ್‌ಸಿ ಸಮಸ್ಯೆ ಮಾತ್ರವಲ್ಲ. ಅವುಗಳಿಗೆ ಬ್ಯಾಂಕುಗಳು ಸಾಲ ನೀಡಿವೆ. ಬ್ಯಾಂಕುಗಳ ವಾಸ್ತವ ಸ್ಥಿತಿ ಏನು ಅನ್ನುವುದೂ ಗೊತ್ತಾಗಬೇಕು.

♦ ದಿವಾಳಿ ಕಾಯ್ದೆಯನ್ನು ಬಲಪಡಿಸಬೇಕು

♦ ತೀರಿಸಲಾಗದ ಸಾಲದ ಜವಾಬ್ದಾರಿಯನ್ನು ನಿರ್ವಹಿಸು ವುದಕ್ಕೆ ಪ್ರತ್ಯೇಕವಾಗಿ ಬ್ಯಾಡ್ ಬ್ಯಾಂಕನ್ನು ಪ್ರಾರಂಭಿಸಬೇಕು. ಅದು ಎಲ್ಲಾ ಬ್ಯಾಂಕುಗಳ ಲೆಕ್ಕದಿಂದ ಕೆಟ್ಟ ಸಾಲದ ಲೆಕ್ಕವನ್ನು ತನ್ನ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಅದನ್ನು ಹೇಗೆ ವಸೂಲು ಮಾಡುವುದು, ಅಥವಾ ಅದಕ್ಕೆ ಏನು ಮಾಡಬೇಕು ಅನ್ನುವುದನ್ನು ಕುರಿತು ಅದು ನಿರ್ಧಾರ ತೆಗೆದುಕೊಳ್ಳುತ್ತದೆ.

♦ ಎನ್‌ಬಿಎಫ್‌ಸಿ ಕುರಿತಂತೆ ಹೆಚ್ಚು ನಿಗಾ ವಹಿಸಬೇಕು.

♦ ಸರಕಾರಿ ಕ್ಷೇತ್ರದ ಬ್ಯಾಂಕುಗಳ ಪ್ರಮಾಣವನ್ನು ಕಡಿಮೆ ಮಾಡಬೇಕು. ಇದಕ್ಕಾಗಿ ಕೆಲವು ಬ್ಯಾಂಕುಗಳನ್ನು ಖಾಸಗೀಕರಣ ಗೊಳಿಸಬೇಕು, ಹೆಚ್ಚು ಖಾಸಗಿ ಬ್ಯಾಂಕುಗಳಿಗೆ ಅವಕಾಶ ಕಲ್ಪಿಸಬೇಕು. * ಮತ್ತೆ ಬ್ಯಾಂಕುಗಳಲ್ಲಿ ಇದೇ ಪರಿಸ್ಥಿತಿ ಮರುಕಳಿಸಬಾರದು. ಅದಕ್ಕಾಗಿ ಸುಧಾರಣೆಯನ್ನು ಅಳವಡಿಸಿಕೊಂಡ ಬ್ಯಾಂಕುಗಳಿಗೆ ಮಾತ್ರ ಸರಕಾರ ನೆರವು ನೀಡಬೇಕು.

3. ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕೃಷಿ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತಿರುವುದರಿಂದ ರೈತರ ವರಮಾನ ಕಮ್ಮಿಯಾಗುತ್ತಿದೆ. ರೈತರ ಸ್ಥಿತಿಯನ್ನು ಸುಧಾರಿಸುವುದಕ್ಕೆ,

♦ ರೈತರಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಬೇಕು. ರಸಗೊಬ್ಬರದ ಕಂಪೆನಿಗಳು, ವಿದ್ಯುತ್ ಕಂಪೆನಿಗಳ ಮೂಲಕ ಸಬ್ಸಿಡಿ ನೀಡಬಾರದು. ಯಾಕೆಂದರೆ ಆ ಕ್ರಮದಿಂದ ಇವರೆಗೆ ರೈತರ ವರಮಾನ ಹೆಚ್ಚಿಲ್ಲ. ಒಟ್ಟಾರೆ ಉದ್ದೇಶ ಕೃಷಿ ಉತ್ಪಾದಕತ್ವವನ್ನು ಹೆಚ್ಚಿಸುವುದಾಗಬೇಕು.

♦ ಕೃಷಿ ಉತ್ಪನ್ನಗಳಿಗೆ ಒಂದು ಅಖಿಲ ಭಾರತ ಮಾರುಕಟ್ಟೆಯನ್ನು ಸೃಷ್ಟಿಸಬೇಕು.

♦ ಕೃಷಿ ವ್ಯಾಪಾರ ನಿಯಮಗಳನ್ನು ಪದೇ ಪದೇ ಬದಲಿಸುತ್ತಾ ಹೋಗಬಾರದು. ಬೆಲೆ ಕಡಿಮೆ ಆದಾಗ ತೆರಿಗೆ ಹಾಕುವುದು, ಹೆಚ್ಚಾದಾಗ ಆಮದು ರಫ್ತು ನಿಯಂತ್ರಣ ಮಾಡುವುದು, ಹೀಗೆ ಮಾಡುತ್ತಾ ಹೋದರೆ ರೈತರಿಗೆ ನೀತಿಗಳನ್ನು ಕುರಿತಂತೆ ಒಂದು ಅನಿಶ್ಚಿತತೆ ಕಾಡುತ್ತಿರುತ್ತದೆ. ಅವರಿಗೆ ಕೊನೆಗೂ ಯಾವ ಬೆಲೆ ಸಿಗುತ್ತದೆ ಅನ್ನುವುದು ತಿಳಿದಿರುವುದಿಲ್ಲ.

♦ ನೀರಿನ ಉಳಿತಾಯಕ್ಕೆ ಉತ್ತೇಜನ ನೀಡಬೇಕು.

♦ ಕೊನೆಯದಾಗಿ ಅವರು ಹೊಸ ಕುಲಾಂತರಿ ತಳಿಗಳಿಗೆ ಅವಕಾಶ ಮಾಡಿಕೊಡಬೇಕು ಅನ್ನುತ್ತಾರೆ. ಅವರು ಅದಕ್ಕೆ ಗುಜರಾತಿ ಹತ್ತಿ, ಚೀನಾ, ಬ್ರೆಝಿಲ್ ಇವುಗಳನ್ನು ಉದಾಹರಣೆಯಾಗಿ ಕೊಡುತ್ತಾರೆ. ಇದು ಹೆಚ್ಚು ವಿವಾದಾತ್ಮಕವಾದ ಸಲಹೆ.

ಒಟ್ಟಿನಲ್ಲಿ ಅವರೇ ಹೇಳುವಂತೆ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ತುಂಬಾ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು. ಆದರೆ ಆರ್ಥಿಕತೆಗೆ ತನ್ನಷ್ಟಕ್ಕೆ ಸರಿಪಡಿಸಿಕೊಳ್ಳುವ ಸಾಮರ್ಥ್ಯವೂ ಸ್ವಲ್ಪಮಟ್ಟಿಗೆ ಇದೆ. ಸ್ವಲ್ಪಒಳ್ಳೆಯದು ಆಗಬಹುದು. ಆದರೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಬಾರದು. ಒಳ್ಳೆಯ ದಿನಗಳು ಬರುತ್ತವೆ. ಆದರೆ ಅದಕ್ಕೆ ಮುಂಚೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದರಲ್ಲಿ ಹೊಸದೇನೂ ಇಲ್ಲ ಅನ್ನೋದು ಸರಿ. ಆದರೆ ಈ ಅಧ್ಯಯನ ಮತ್ತೆ ನಮ್ಮನ್ನು ಆರ್ಥಿಕತೆಯ ಕಡೆಗೆ ಗಮನ ಹರಿಸಲು ಒತ್ತಾಯಿಸುತ್ತದೆ. ಉಳಿದೆಲ್ಲವೂ ಕಾಯಬಹುದು. ಆದರೆ ಆರ್ಥಿಕ ಸ್ಥಿತಿಯನ್ನು ಭದ್ರಪಡಿಸಿಕೊಳ್ಳುವುದು ಜರೂರಾಗಿ ಆಗಬೇಕು. ಯಾಕೋ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ.

Writer - ಟಿ. ಎಸ್. ವೇಣುಗೋಪಾಲ್

contributor

Editor - ಟಿ. ಎಸ್. ವೇಣುಗೋಪಾಲ್

contributor

Similar News

ಜಗದಗಲ
ಜಗ ದಗಲ