ದೇಶ ಕಟ್ಟಲು ವರುಷ ಆರೆಸ್ಸೆಸ್ ದೊಣ್ಣೆಗೆ ನಿಮಿಷ

Update: 2020-01-04 04:19 GMT

ಪ್ರಾಚೀನ ಕಾಲದಲ್ಲಿ ಈ ದೇಶ ವಿಶ್ವವನ್ನೇ ಗುರುತಿಸುವಷ್ಟು ಸಂಪತ್ಭರಿತವಾಗಿತ್ತೋ ಇಲ್ಲವೋ, ಸ್ವಾತಂತ್ರಾನಂತರ ನೆಹರೂ ಅವರಂತಹ ಹಲವು ನಾಯಕರ ಅವಿರತ ಪರಿಶ್ರಮದಿಂದಾಗಿ ಭಾರತ ಸಾಧಿಸಿದ ಪ್ರಗತಿಯನ್ನು ವಿಶ್ವ ಬೆಕ್ಕಸ ಬೆರಗಾಗಿ ನೋಡಿತ್ತು ಎನ್ನುವುದು ಸುಳ್ಳಲ್ಲ. ಭಾರತ ಸಂಪತ್ತನ್ನು ಬ್ರಿಟಿಷರು ಹಿಂಡಿ ಹಿಪ್ಪೆ ಮಾಡಿದ ಬಳಿಕವೂ, ಈ ದೇಶವನ್ನು ತಮ್ಮ ಸಂಕಲ್ಪಬಲದಿಂದ ನೆಹರೂ ಮುನ್ನಡೆಸಿದರು. ಅವರ ಜೊತೆಗೆ ಪಟೇಲ್, ಅಂಬೇಡ್ಕರ್, ಆಝಾದ್‌ರಂತಹ ನಾಯಕರು ಜೊತೆಗೂಡಿದರು. ಆ ಬಳಿಕ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವ್ ಗಾಂಧಿಗಳು ಈ ದೇಶಕ್ಕೆ ಕೊಟ್ಟ ಕೊಡುಗೆಗಳೇನು ಎನ್ನುವುದು ನಮ್ಮ ಮುಂದಿದೆ. ಈ ದೇಶದ ಸಾವಿರಾರು ಬೃಹತ್ ಅಣೆಕಟ್ಟುಗಳು, ಐಐಟಿಗಳು, ಬೃಹತ್ ವೈದ್ಯಕೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಇಸ್ರೋ, ಹಿಂದೂಸ್ಥಾನ್ ಏರೋನಾಟಿಕ್ಸ್, ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಭೂಸುಧಾರಣೆ ಕಾಯ್ದೆಗಳು, ಬ್ಯಾಂಕ್ ರಾಷ್ಟ್ರೀಕರಣ, ಕಂಪ್ಯೂಟರ್ ಯುಗ...ಕಳೆದ 70 ವರ್ಷಗಳಲ್ಲಿ ಭಾರತ ಸಾಧಿಸಿದ ಸಾಧನೆಗಳಿಂದಾಗಿಯೇ ವಿಶ್ವದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿತು.

ವಿದೇಶಾಂಗ ನೀತಿಯ ವಿಷಯದಲ್ಲಿ ಅದು ಇಟ್ಟ ಹೆಜ್ಜೆಯೂ ಮುತ್ಸದ್ದಿತನದಿಂದ ಕೂಡಿದೆ. ರಶ್ಯ-ಅಮೆರಿಕದ ಜೊತೆಗೆ ಗುರುತಿಸಿಕೊಳ್ಳದೆ ತೃತೀಯ ಶಕ್ತಿಯಾಗಿ ಇಂದಿರಾಗಾಂಧಿ ಕಾಲದಲ್ಲಿ ಭಾರತ ಮೂಡಿ ಬಂತು. ಭಾರತದ ಅಭಿವೃದ್ಧಿಯ ಪರಿಕ್ರಮ ರಿಲೇ ಇದ್ದ ಹಾಗೆ. ನೆಹರೂ ಅವರಿಂದ ಶಾಸ್ತ್ರಿಗಳು, ಆನಂತರ ಇಂದಿರಾಗಾಂಧಿ, ಆ ಬಳಿಕ ರಾಜೀವ ಗಾಂಧಿ, ಬಳಿಕ ವಿ.ಪಿ. ಸಿಂಗ್ ದೂರದೃಷ್ಟಿಯನ್ನಿಟ್ಟು ಯೋಜನೆಗಳನ್ನು ರೂಪಿಸಿದರು. ಇದು ಅವರಿಗೆ ಹೇಗೆ ಸಾಧ್ಯವಾಯಿತು ಎಂದರೆ, ಅವರು ತಮ್ಮ ಬಳಿ ಮೇಧಾವಿ ಚಿಂತಕರನ್ನು, ತಜ್ಞರನ್ನು ಇಟ್ಟುಕೊಂಡಿದ್ದರು. ಇದೀಗ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಆಳುತ್ತಿದ್ದಾರೆ. ಅಧಿಕಾರಕ್ಕೆ ಏರುತ್ತಿದ್ದಂತೆಯೇ ‘ಅಚ್ಛೇ ದಿನ್ ಬರಲಿದೆ’ ಎಂದು ಘೋಷಿಸಿದ್ದರು. ಇದೇ ಸಂದರ್ಭದಲ್ಲಿ ಶೀಘ್ರದಲ್ಲೇ ದೇಶ ‘ವಿಶ್ವಗುರು’ ಆಗಲಿದೆ ಎಂದು ಅವರ ಅಭಿಮಾನಿಗಳು ಸಂಭ್ರಮಿಸಿದರು. ಆದರೆ ಅದಕ್ಕೆ ಬೇಕಾದ ಯಾವ ತಯಾರಿಯೂ ಮೋದಿಯವರಲ್ಲಿರಲಿಲ್ಲ. ಅವರ ಬಳಿ ಇದ್ದುದು ಕೇವಲ 3,000 ಸಾವಿರ ಕೋಟಿ ರೂಪಾಯಿಯ ವಲ್ಲಭಬಾಯ್ ಪಟೇಲ್ ಪ್ರತಿಮೆ ಮಾತ್ರ. ಆ ಪ್ರತಿಮೆಯನ್ನು ನೋಡುವುದಕ್ಕಾಗಿಯೇ ವಿಶ್ವ ಭಾರತದ ಕಡೆಗೆ ಆಗಮಿಸುತ್ತದೆ ಎಂದು ಅವರು ನಂಬಿರೇ? ಎಂಬ ಅನುಮಾನ ಈಗ ಕಾಡುತ್ತದೆ.

ದೇಶವನ್ನು ಮುಂದಕ್ಕೆ ಕೊಂಡೊಯ್ಯದೇ ಇದ್ದರೂ, ಹಿಂದಕ್ಕೆ ಜಾರದಂತೆ ನೋಡಿಕೊಳ್ಳುವ ಅವಕಾಶ ಮೋದಿಯವರಿಗಿತ್ತು. ಯಾಕೆಂದರೆ, ಮೋದಿಯ ಕೈಗೆ ಸಿಕ್ಕಿದ ದೇಶ 1947ರದ್ದಲ್ಲ. ಅದಾಗಲೇ ತಂತ್ರಜ್ಞಾನ, ಉದ್ಯಮ, ಕೃಷಿ, ಐಟಿ ಬಿಟಿ ಮೊದಲಾದ ಕ್ಷೇತ್ರಗಳಲ್ಲಿ ಭಾರೀ ಸಾಧನೆಗಳನ್ನು ಮಾಡಿದ ಭಾರತವನ್ನು ಅವರ ಕೈಗಿಡಲಾಗಿತ್ತು. ಇಂತಹ ದೇಶವನ್ನು ಅವರು ಕೇವಲ ಅಂಬಾನಿ ಮತ್ತು ಅದಾನಿಗಳ ಮೂಗಿನ ನೇರಕ್ಕೆ ರೂಪಿಸಲು ಹೊರಟರು. ಈ ದೇಶ ಮೊದಲ ಬಾರಿಗೆ ನುರಿತ ಅರ್ಥಶಾಸ್ತ್ರಜ್ಞರ ಮಾರ್ಗದರ್ಶನವಿಲ್ಲದೇ ಆರ್ಥಿಕ ನೀತಿಗಳನ್ನು ರೂಪಿಸಲು ಮುಂದಾಯಿತು. ಪರಿಣಾಮವಾಗಿ ಈಗ ದೇಶ ಮುಗ್ಗರಿಸಿ ಕೂತಿದೆ. ಇದನ್ನು ಹೇಗೆ ದುರಸ್ತಿ ಮಾಡಬೇಕು ಎನ್ನುವುದು ತಿಳಿಯದೇ ಅಮಿತ್ ಶಾ, ಮೋದಿ ಜೋಡಿ ಎನ್‌ಆರ್‌ಸಿ, ಸಿಎಎಯ ಹಿಂದೆ ಬಿದ್ದಿದ್ದಾರೆ. ಅಂದರೆ ಧರ್ಮದ ಹೆಸರಲ್ಲಿ ದೇಶವನ್ನು ಒಡೆದು, ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವುದು ಅವರ ಉದ್ದೇಶ. ದುರಂತವೆಂದರೆ, ಇದನ್ನೇ ತನ್ನ ಸಾಧನೆ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಅತ್ಯಂತ ದುರಂತದ ಸಂಗತಿಯೆಂದರೆ, ದೇಶ ವಿಶ್ವಗುರುವಾಗುವುದನ್ನೇ ಕಾಯುತ್ತಿದ್ದವರಿಗೆ, ‘ಸಿಎಎ, ಎನ್‌ಆರ್‌ಸಿಯಿಂದ ಭಾರತ ಜಗತ್ತಿನ ಎಲ್ಲೆಡೆಗೆ ತಲುಪಿದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಸಮಾಧಾನ ಹೇಳಿದೆ.

ಅಂದರೆ ಸಿಎಎ ಕಾಯ್ದೆಯ ಮೂಲಕ ಭಾರತ ‘ವಿಶ್ವ ಗುರು’ ಆಗಿ ಬಿಟ್ಟಿದೆ. ಆದುದರಿಂದ ಇನ್ನು ಸರಕಾರದ ಬಳಿ ಜನರು ಏನನ್ನೂ ಕೇಳಬಾರದು ಎನ್ನುವುದು ಸಚಿವಾಲಯದ ಇಂಗಿತ. ಇದೊಂದು ರೀತಿ, ಊರಲ್ಲಿ ಬೆತ್ತಲೆ ತಿರುಗಿ ಎಲ್ಲರ ಗಮನ ಸೆಳೆಯಲು ಪ್ರಯತ್ನಿಸುವ ಮೂರ್ಖನ ಕತೆಯಂತಾಗಿದೆ. ‘ಊರಿನಲ್ಲಿ ಎಲ್ಲರಿಗೂ ಮರ್ಯಾದೆ. ಆದರೆ ತನ್ನನ್ನು ಯಾರೂ ಗಮನಿಸುತ್ತಿಲ್ಲ...’ ಎಂಬ ಚಿಂತೆಯಲ್ಲಿದ್ದ ವ್ಯಕ್ತಿಯೊಬ್ಬ ಹೇಗಾದರೂ ಊರಿನ ಗಮನ ಸೆಳೆಯಬೇಕು ಎಂಬ ಇರಾದೆಯಲ್ಲಿ ಬೆತ್ತಲೆಯಾಗಿ ಓಡಾಡಲು ಶುರು ಹಚ್ಚಿದನಂತೆ. ಇದೀಗ ನೋಡಿದರೆ, ಇಡೀ ಊರೇ ಆತನ ಬಗ್ಗೆ ಮಾತನಾಡತೊಡಗಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ‘ವಿಶ್ವ ಇದೀಗ ಭಾರತದೆಡೆಗೆ ನೋಡುತ್ತಿದೆ’ ಎಂದು ಹೇಳಿದೆ. ಆದರೆ ಯಾವ ಕಾರಣಕ್ಕೆ ಎನ್ನುವುದನ್ನು ಅದು ಮುಚ್ಚಿಟ್ಟಿದೆ. ‘ಸಿಎಎಯಿಂದ ಭಾರತ ಜಗತ್ತಿನೆಲ್ಲೆಡೆ ತಲುಪಿದೆ’ ಎನ್ನುವ ಸರಕಾರ ಸಿಎಎ ಕುರಿತಂತೆ ದೇಶದ ವಿವಿಧ ಸರಕಾರಗಳು ಹೇಗೆ ಪ್ರತಿಕ್ರಿಯಿಸುತ್ತಿವೆ ಎನ್ನುವುದನ್ನು ಕಿವಿ, ಕಣ್ಣು ತೆರೆದು ನೋಡಬೇಕಾಗಿದೆ. ಅಮೆರಿಕದ ಕಾಂಗ್ರೆಸ್‌ನ ಸದಸ್ಯರು ಸರಕಾರದ ನೀತಿಗಳನ್ನು ಪದೇ ಪದೇ ಖಂಡಿಸಿದ್ದಾರೆ. ಧರ್ಮಾಧಾರಿತವಾಗಿ ಭಾರತ ವಿಭಜನೆಯಾಗುತ್ತಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ವಿಶ್ವ ಸಂಸ್ಥೆಯೂ ಭಾರತದಲ್ಲಿ ನಡೆಯುತ್ತಿರುವುದರ ವಿರುದ್ಧ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಎಲ್ಲ ದೇಶಗಳೂ ಭಾರತದಲ್ಲಿ ನಡೆಯುತ್ತಿರುವ ಅಪಾಯಕಾರಿ ಬೆಳವಣಿಗೆಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ.

ಸರಕಾರದ ನೀತಿ, ಭಾರತದೊಳಗೆ ಮಾತ್ರವಲ್ಲ, ಭಾರತದ ಹೊರಗಡೆ ಇರುವ ಭಾರತೀಯರ ಮೇಲೂ ತನ್ನ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞರಿಂದ ಹಿಡಿದು ವಿವಿಧ ಸಾಮಾಜಿಕ ಚಿಂತಕರು, ಹೋರಾಟಗಾರರೂ ಈ ಬಗ್ಗೆ ಭಾರತವನ್ನು ಎಚ್ಚರಿಸುತ್ತಿದ್ದಾರೆ. ಸಿಎಎ ವಿರುದ್ಧ ವಿದೇಶಗಳಲ್ಲೂ ಸಾಕಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಇಂದು ಭಾರತದ ಪ್ರಧಾನಿ ವಿದೇಶಗಳಿಗೆ ಕಾಲಿಡದಂತಹ ಸನ್ನಿವೇಶ ನಿರ್ಮಾಣವಾಗಿದೆ. ದೇಶದೊಳಗಿನ ಸ್ಥಿತಿ ಚಿಂತಾಜನಕವಾಗಿದೆ. ಪ್ರತಿಭಟನೆಯ ಪ್ರವಾಹವೇ ಹರಿಯುತ್ತಿದೆ. ಇವುಗಳನ್ನು ಪೊಲೀಸರ ಲಾಠಿ ಮತ್ತು ಗುಂಡುಗಳ ಮೂಲಕ ಸರಕಾರ ದಮನಿಸಲು ಯತ್ನಿಸುತ್ತಿದೆ. ಪ್ರತಿಭಟನಾಕಾರರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ತಳ್ಳಲಾಗುತ್ತಿದೆ. ಪೊಲೀಸರೇ ಲಾಠಿ ಹಿಡಿದು ಸಾರ್ವಜನಿಕ ಸೊತ್ತುಗಳನ್ನು ಹಾನಿಗೊಳಿಸುತ್ತಿದ್ದಾರೆ. ದೇಶವನ್ನು ಪರೋಕ್ಷವಾಗಿ ಪೊಲೀಸರೇ ಆಳುತ್ತಿದ್ದಾರೆ. ಸೇನೆಯ ಮುಖ್ಯಸ್ಥರೊಬ್ಬರೇ ತನ್ನ ಅಧಿಕಾರದ ಮಿತಿಯನ್ನು ಮೀರಿ, ಜನ ಚಳವಳಿಯ ಕುರಿತಂತೆ ನಕಾರಾತ್ಮಕ ಹೇಳಿಕೆಯನ್ನು ನೀಡುತ್ತಾರೆ.

ಇವೆಲ್ಲವೂ ದೇಶದ ಪ್ರಜಾಸತ್ತೆಗೆ ಗೌರವ ತರುವ ವಿಷಯಗಳೇ? ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಗುರುತಿಸಿಕೊಂಡಿದ್ದ ಭಾರತ, ಸರ್ವಾಧಿಕಾರದೆಡೆಗೆ ಹೊರಳುತ್ತಿದೆ ವಿವಿಧ ದೇಶಗಳ ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ದೇಶದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ತಮ್ಮ ತಮ್ಮ ದೇಶದ ನಾಗರಿಕರನ್ನು ಭಾರತದಿಂದ ಮರಳಿ ಕರೆಸುತ್ತಿದ್ದಾರೆ. ನಿರಾಶ್ರಿತರ ಕುರಿತ ಭಾರತದ ಕಾಳಜಿಯನ್ನು ವಿಶ್ವ ಗೌರವಿಸುತ್ತಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ಭಾರತದ ಪ್ರಜೆಗಳ ಜೊತೆಗೇ ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುತ್ತಿರುವ ಸರಕಾರ, ವಿದೇಶಗಳಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸಿವೆ ಎನ್ನುವುದು ನಂಬುವುದಕ್ಕೆ ಅರ್ಹವೆ ? ಒಂದು ಕಾಲದಲ್ಲಿ ವಿದೇಶಾಂಗ ನೀತಿಗಳಿಗಾಗಿ, ಪಂಚಶೀಲ ತತ್ವಗಳಿಗಾಗಿ, ಅಲಿಪ್ತ ನಿಲುವುಗಳಿಗಾಗಿ, ವಿಜ್ಞಾನ ಕ್ಷೇತ್ರದ ಶೋಧನೆಗಳಿಗಾಗಿ, ಖಗೋಳ ಸಾಧನೆಗಳಿಗಾಗಿ, ನೊಬೆಲ್, ಶಾಂತಿ ಪ್ರಶಸ್ತಿಗಳಿಗಾಗಿ ವಿಶ್ವದ ಗಮನ ಸೆಳೆದ ಭಾರತ ಇಂದು, ಪೊಲೀಸ್ ಸರ್ವಾಧಿಕಾರಕ್ಕಾಗಿ ವಿಶ್ವದ ಮುಂದೆ ಗುರುತಿಸಿಕೊಳ್ಳುತ್ತಿದೆ. 70 ವರ್ಷಗಳ ಶ್ರಮವನ್ನು ಮೋದಿ ಸರಕಾರ ಬರೇ ಆರು ವರ್ಷಗಳಲ್ಲಿ ಒಡೆದು ಹಾಕಿದೆ. ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎನ್ನುವ ಗಾದೆಯಂತೆ ದೇಶದ ಪ್ರತಿಷ್ಠೆ, ವರ್ಚಸ್ಸಿನ ಮಡಕೆ ಒಡೆದು ಬಿದ್ದಿದೆ. ಆರೆಸ್ಸೆಸ್‌ನ ದೊಣ್ಣೆ ವಿಜೃಂಭಿಸುತ್ತಿದೆ. ಈ ದೊಣೆಯನ್ನು ಭಾರತವೀಗ ತನ್ನ ಸಾಧನೆಯೆಂದು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗ ಸ್ಥಿತಿ ನಿರ್ಮಾಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News