ಸಂವಿಧಾನದ ಕರಡು ಸಿದ್ಧಪಡಿಸಿದ್ದು ಬ್ರಾಹ್ಮಣರು: ಗುಜರಾತ್ ಸ್ಪೀಕರ್ ತ್ರಿವೇದಿ

Update: 2020-01-04 07:05 GMT

ಅಹ್ಮದಾಬಾದ್, ಜ.4: ಸಂವಿಧಾನದ ಕರಡು ಸಿದ್ಧಪಡಿಸಿದ ಶ್ರೇಯಸ್ಸನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರು ಬಿ.ಎನ್.ರಾವ್‌ಗೆ ನೀಡಿದ್ದರು. ರಾವ್ ಬ್ರಾಹ್ಮಣರಾಗಿದ್ದರು ಎಂದು ಗುಜರಾತ್ ವಿಧಾನಸಭೆಯ ಸ್ಪೀಕರ್ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.

ಎರಡನೇ ವರ್ಷದ ಮೆಗಾ ಬ್ರಾಹ್ಮಣರ ಉದ್ಯಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ತ್ರಿವೇದಿ, ನೊಬೆಲ್ ಪ್ರಶಸ್ತಿ ಪಡೆದ ಹೆಚ್ಚಿನ ಭಾರತೀಯರು ಬ್ರಾಹ್ಮಣರು. ಇತ್ತೀಚೆಗೆ ನೊಬೆಲ್ ಪ್ರಶಸ್ತಿ ಪಡೆದಿರುವ ಅಭಿಜಿತ್ ಬ್ಯಾನರ್ಜಿ ಕೂಡ ಬ್ರಾಹ್ಮಣರು ಎಂದು ತ್ರಿವೇದಿ ತಿಳಿಸಿದ್ದಾರೆ.

60 ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿದ ಬಳಿಕ ಸಂವಿಧಾನದ ಕರಡು ಸಿದ್ಧಪಡಿಸಿದ್ದು ನಿಮಗೆ ಗೊತ್ತಿದೆಯೇ? ಡಾ. ಬಿ.ಆರ್.ಅಂಬೇಡ್ಕರ್‌ಗೆ ಸಂವಿಧಾನದ ಕರಡು ಯಾರು ನೀಡಿದ್ದು ಗೊತ್ತಾ? ಸಂವಿಧಾನ ವಿಚಾರ ಬಂದಾಗ ಗೌರವದಿಂದ ನಾವು ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಹೇಳುತ್ತೇವೆ ಎಂದು ಸ್ವತಃ ಬ್ರಾಹ್ಮಣರಾಗಿರುವ ತ್ರಿವೇದಿ ಹೇಳಿದ್ದಾರೆ.

ಬೆನಗಲ್ ನರಸಿಂಗ್ ರಾವ್(ಬಿಆರ್ ರಾವ್)ಸಂವಿಧಾನ ಕರಡು ರಚಿಸಿದ್ದಾರೆ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. 1949ರ ನವೆಂಬರ್ 25ರಂದು ಸಂವಿಧಾನದ ಸಭೆಯ ಭಾಷಣದಲ್ಲಿ ಈ ವಿಚಾರವನ್ನು ಅಂಬೇಡ್ಕರ್ ತಿಳಿಸಿದ್ದರು. ಹೀಗಾಗಿ ನಮಗೆಲ್ಲರೂ ಅಂಬೇಡ್ಕರ್ ಬಗ್ಗೆ ಹೆಮ್ಮೆಯಿದೆ. 'ನನಗೆ ನೀಡಿದ ಶ್ರೇಯಸ್ಸು ನಿಜವಾಗಿಯೂ ನನಗೆ ಸೇರುವುದಿಲ್ಲ. ಇದು ಬಿಎನ್ ರಾವ್‌ಗೆ ಸೇರಬೇಕಾಗಿದೆ' ಎಂದು ಸ್ವತಃ ಅಂಬೇಡ್ಕರ್ ಸಭೆಯಲ್ಲಿ ಹೇಳಿದ್ದರು. ಬ್ರಾಹ್ಮಣರು ಯಾವಾಗಲೂ ಬೇರೊಬ್ಬರ ಬೆನ್ನಿಗೆ ನಿಂತು ಪ್ರೋತ್ಸಾಹ ನೀಡುತ್ತಾರೆ ಎಂದು ಇತಿಹಾಸ ಹೇಳುತ್ತದೆ. ರಾವ್ ಅವರು ಅಂಬೇಡ್ಕರ್ ಅವರಿಗೆ ಬೆಂಬಲ ನೀಡಿ ತೆರೆಮರೆಯಲ್ಲಿ ಕೆಲಸ ಮಾಡಿದ್ದರು ಎಂದು ತ್ರಿವೇದಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News