×
Ad

ದಟ್ಟ ಮಂಜು: 19 ರೈಲುಗಳ ಪ್ರಯಾಣ ವಿಳಂಬ

Update: 2020-01-04 23:30 IST

ಹೊಸದಿಲ್ಲಿ, ಜ.4: ರಾಷ್ಟ್ರೀಯ ರಾಜಧಾನಿ ದಿಲ್ಲಿಯಲ್ಲಿ ಚಳಿಗಾಳಿ ಮುಂದುವರಿದಿದ್ದು ಶನಿವಾರ ಬೆಳಿಗ್ಗೆ ದಿಲ್ಲಿಯ ಹಲವೆಡೆ ಮಂಜಿನ ಪದರ ಆವರಿಸಿತ್ತು. ದಿಲ್ಲಿಯಲ್ಲಿ 8 ಡಿಗ್ರಿ ಸೆಲ್ಶಿಯಸ್ ಕನಿಷ್ಟ ಉಷ್ಣಾಂಶ ದಾಖಲಾಗಿದ್ದು ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಮುಸುಕಿರುವ ಕಾರಣ ಉಷ್ಣಾಂಶ ಇನ್ನಷ್ಟು ಕೆಳಗಿಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರ ಭಾರತದ ಹಲವೆಡೆ ದಟ್ಟ ಮಂಜು ಆವರಿಸಿರುವ ಕಾರಣ ಕನಿಷ್ಟ 19 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಆದರೆ ಯಾವುದೇ ವಿಮಾನ ಯಾನ ರದ್ದಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಪ್ರದೇಶ, ರಾಜಸ್ತಾನದ ಹಲವು ಪ್ರದೇಶ, ಹರ್ಯಾಣ, ದಿಲ್ಲಿ, ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ದಟ್ಟ ಮಂಜು ಆವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದಿಲ್ಲಿಯಲ್ಲಿ ವಾಯು ಗುಣಮಟ್ಟ ಸ್ವಲ್ಪ ಪ್ರಮಾಣದಲ್ಲಿ ಸುಧಾರಿಸಿರುವುದು ವಾಯು ಗುಣಮಟ್ಟ ಸೂಚ್ಯಂಕದ ವರದಿ ತಿಳಿಸಿದೆ. ಶುಕ್ರವಾರ ಗಂಭೀರ ಮಟ್ಟದಲ್ಲಿದ್ದ ವಾಯು ಗುಣಮಟ್ಟ ಶನಿವಾರ ಸಾಧಾರಣ ಮಟ್ಟಕ್ಕೆ ತಲುಪಿದೆ. 2019ರ ಡಿಸೆಂಬರ್‌ನಲ್ಲಿ 18 ದಿನ ಅತ್ಯಂತ ತೀವ್ರವಾದ ಚಳಿಯ ವಾತಾವರಣವಿದ್ದು ಇದು ಕಳೆದ 119 ವರ್ಷಗಳಲ್ಲಿ ಡಿಸೆಂಬರ್‌ನಲ್ಲಿ ದಾಖಲಾಗಿರುವ ಅತ್ಯಂತ ಚಳಿಯ ದಿನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News