ದೇಶದ ಆತ್ಮದ ವಿಭಜನೆ

Update: 2020-01-04 18:32 GMT

ಪಾಕಿಸ್ತಾನದ ಸೃಷ್ಟಿ ಭಾರತೀಯ ಉಪಖಂಡದಲ್ಲಿ ಒಂದು ಭಾಗವನ್ನು ಒಂದು ಧಾರ್ಮಿಕ ರಾಷ್ಟ್ರವಾಗಿ ಮಾಡಿತು; ಈಗ ಹಿಂದುತ್ವ ರಾಷ್ಟ್ರೀಯತೆಯ ಪ್ರವಾಹವು ಇನ್ನೊಂದು ಭಾಗವನ್ನು ಅದರ ಹಿಂದೂ ಪ್ರತಿಫಲನವಾಗಿ ಮಾಡುತ್ತಿದೆ. ಇದು ವಿಭಜನೆಯ ಪೂರ್ಣಗೊಳಿಸುವಿಕೆಯಾಗುತ್ತದೆ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಿಂದ ಪಾಕಿಸ್ತಾನ ಬೇರೆಯಾಗಬೇಕು ಎಂದು ವಾದಿಸುವವರಿಗೆ ಗೆಲುವು ಆಗುತ್ತದೆ. ಇತ್ತೀಚೆಗೆ ಶಶಿ ತರೂರು ಬರೆದಂತೆ ‘‘ಆಗ ಆದದ್ದು ಭಾರತ ಮಣ್ಣಿನ ವಿಭಜನೆ ಮತ್ತು ಇದು ಭಾರತದ ಆತ್ಮದ ವಿಭಜನೆಯಾಗಿದೆ.’’

 ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಅಲ್ಲಿಂದ ಬರುವ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶ ಹೊಂದಿದೆ. ನಿರಾಶ್ರಿತರಿಗೆ ಆಶ್ರಯ ನೀಡುವುದು ಉದಾತ್ತವಾದ ಒಂದು ಮಾನವೀಯ ಕ್ರಮ ಆದರೂ ನಾಗರಿಕ ಪೌರತ್ವ ಕಾಯ್ದೆ ಮಾನವೀಯತೆಯ ಹಲವು ಅಂಶಗಳನ್ನು ಕಡೆಗಣಿಸಿದೆ. ಅದು ಪಾಕಿಸ್ತಾನದ ಅಹಮದೀಯ ಮತ್ತು ಶಿಯಾಗಳನ್ನು, ಶ್ರೀಲಂಕಾದ ತಮಿಳು ನಿರಾಶ್ರಿತರನ್ನು, ದೇಶರಹಿತ ರೊಹಿಂಗ್ಯಾಗಳನ್ನು ತನ್ನ ವ್ಯಾಪ್ತಿಯಿಂದ ಹೊರಗಿಡುತ್ತದೆ.

ಅಸ್ಮಿತೆಯ ಆಧಾರದಲ್ಲಿ ಒಂದು ಜೀವಕ್ಕೆ ಇನ್ನೊಂದು ಜೀವಕ್ಕಿಂತ ಹೆಚ್ಚು ಬೆಲೆ ನೀಡದೆ, ಧಾರ್ಮಿಕ ಪಂಥದ ಆಧಾರದಲ್ಲಿ ತಾರತಮ್ಯ ಎಸಗದೆ ರಾಷ್ಟ್ರಗಳು ಎಲ್ಲ ನಿರಾಶ್ರಿತರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ಮಾನವೀಯತೆಯ ತಿರುಳು.

ಸಿಎಎಯ ಬೆಂಬಲಿಗರು ಈ ಕಾಯ್ದೆಯ ಧಾರ್ಮಿಕ ತಾರತಮ್ಯದ ಮೂಲ ಭಾರತದ ವಿಭಜನೆಯಲ್ಲಿದೆ ಎಂದು ವಾದಿಸುತ್ತಾರೆ. ಗೃಹಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಾತನಾಡುತ್ತಾ ಹೇಳಿದರು: ‘‘ಈ ಮೂರು ನೆರೆ ದೇಶಗಳು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರಗಳು ಮತ್ತು ಅವುಗಳ ಸಂವಿಧಾನಗಳ ಮೂಲವೇ ಇಸ್ಲಾಂನಲ್ಲಿದೆ. ಆದ್ದರಿಂದ ಅವರು (ಮುಸ್ಲಿಮರು) ಇತರ ಸಮುದಾಯಗಳ ಹಾಗೆ ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಲು ಸಾಧ್ಯವಿಲ್ಲ.’’

ಈ ದೇಶಗಳಲ್ಲಿ ಮುಸ್ಲಿಮರು ತಮ್ಮ ಅಸ್ಮಿತೆಗಾಗಿ (ಧರ್ಮದ ಕಾರಣಕ್ಕಾಗಿ) ಕಿರುಕುಳಕ್ಕೊಳಗಾಗುವುದಿಲ್ಲ ಎಂಬುದು ಸುಳ್ಳು. ಆದರೆ ಹಿಂದೂ ರಾಷ್ಟ್ರೀಯವಾದಿಗಳ ತರ್ಕದ ಪ್ರಕಾರ ದೇಶ ವಿಭಜನೆಯು ಒಂದು ಮುಸ್ಲಿಮ್ ರಾಷ್ಟ್ರವಾದ ಪಾಕಿಸ್ತಾನವನ್ನು ಮತ್ತು ಹಿಂದೂ ಭಾರತವನ್ನು ಸೃಷ್ಟಿಸಿತು.

‘ಹಿಂದೂ ರಾಷ್ಟ್ರ’ ಬೇಕೆಂಬ ಬೇಡಿಕೆಗೆ ಈ ಕಥಾನಕ ಆಧಾರವಾಗಿದೆ. ಆದರೆ ಹಿಂದೂಗಳ, ಹಿಂದೂಗಳಿಂದ ಮತ್ತು ಹಿಂದೂಗಳಿಗಾಗಿ ಇರುವ (ಆಫ್, ಬೈ ಆ್ಯಂಡ್ ಫಾರ್) ಹಿಂದೂ ರಾಷ್ಟ್ರ. ಇದು ಮುಸ್ಲಿಮ್ ದೇಶ ಆಗಿರುವ ಪಾಕಿಸ್ತಾನಕ್ಕೆ ಸಂವಾದಿಯಾಗಿರಬೇಕಾದ ಹಿಂದೂ ಭಾರತ.

ಆದರೆ ಈ ವಾದವು ಭಾರತದ ಮೂಲ ತತ್ವಗಳ ಉಲ್ಲಂಘನೆಯಾಗುತ್ತದೆ. ದಶಕಗಳ ಕಾಲ ಭಾರತದ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ದರ್ಶನದ (ವಿಜನ್) ಬಹುಸಾಂಸ್ಕೃತಿಕ ಸ್ವರೂಪದ ಬಗ್ಗೆ ಒತ್ತಿ ಹೇಳಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1929ರಲ್ಲಿ ಪೂರ್ಣ ಸ್ವರಾಜ್ಯದ ನಿಲುವಳಿಯನ್ನು ಅಂಗೀಕರಿಸಿದಾಗ ಅದು ಮಾನವ ಹಕ್ಕುಗಳಿಗಾಗಿ ತಾನು ಮಂಡಿಸಿದ್ದ ಬೇಡಿಕೆಯಲ್ಲಿ ಯಾವುದೇ ಧಾರ್ಮಿಕ ಷರತ್ತುಗಳನ್ನು ಉಲ್ಲೇಖಿಸದೆ ವಿಶ್ವಾತ್ಮಕವಾದ ಪರಿಭಾಷೆಯಲ್ಲಿ ತನ್ನ ನಿಲುವಳಿಯನ್ನು ಅಂಗೀಕರಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನ ಸೃಷ್ಟಿಯಾಗಬೇಕೆಂಬ ಚಳವಳಿಯು ಈ ಆದರ್ಶಗಳನ್ನು ತಿರಸ್ಕರಿಸಿತ್ತು ಮತ್ತು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿತು. ಆದರೆ ಹಲವು ವರ್ಷಗಳವರೆಗೆ ಪಾಕಿಸ್ತಾನ ಸೃಷ್ಟಿಯಾಗಬೇಕೆಂಬ ಬೇಡಿಕೆಗೆ ಬಹಳ ಜನ ಬೆಂಬಲ ಸಿಗಲಿಲ್ಲ. ಮುಸ್ಲಿಮ್ ಸಿರಿವಂತರ ಒಂದು ವರ್ಗದ ಒಂದು ಫ್ಯಾಂಟಸಿಯಾಗಿ ಅಷ್ಟೇ ಈ ಬೇಡಿಕೆ ಇತ್ತು. ಹಲವು ಮುಸ್ಲಿಮ್ ಸಂಘಟನೆಗಳು ಮತ್ತು ನಾಯಕರು ಈ ಬೇಡಿಕೆಯ ವಿರುದ್ಧ ಮಾತಾಡಿದ್ದರು.

ಮುಸ್ಲಿಮ್ ಲೀಗ್ ವರ್ಷ ವರ್ಷ ಕಳೆದಂತೆ ಭಾರೀ ಚುನಾವಣಾ ಸೋಲುಗಳನ್ನು ಅನುಭವಿಸಿತು. ದೇಶಾದ್ಯಂತ ಮುಸ್ಲಿಮ್ ಲೀಗ್ ಶೇ. 5ಕ್ಕಿಂತಲೂ ಕಡಿಮೆ ಮತ ಗಳಿಸಿತು.

ಅಂತಿಮವಾಗಿ, ಪಾಕಿಸ್ತಾನ ಸೃಷ್ಟಿಸಲ್ಪಟ್ಟಾಗ ಅದು ಭಯ ಮತ್ತು ಹಿಂಸೆಯ ಬಲದ ಮೂಲಕ ಸೃಷ್ಟಿಸಲ್ಪಟ್ಟಿದೆ ಹೊರತು ಮತಪತ್ರಗಳ ಬಲದ ಮೂಲಕವಲ್ಲ. ಸ್ವಾತಂತ್ರಾನಂತರ ತನ್ನ ಧಾರ್ಮಿಕ ರಾಷ್ಟ್ರೀಯತೆಯ ಮೌಲ್ಯಗಳಿಗನುಗುಣವಾಗಿ ಪಾಕಿಸ್ತಾನ ತನ್ನನ್ನು ಇಸ್ಲಾಮಿಕ್ ಗಣರಾಜ್ಯವೆಂದು ಘೋಷಿಸಿಕೊಂಡಿತ್ತು. ಆದರೆ ಭಾರತ ಸ್ವಾತಂತ್ರ್ಯ ಚಳವಳಿಯ ಬಹು ಸಾಂಸ್ಕೃತಿಕ ಮೌಲ್ಯಗಳಿಗೆ ಬದ್ಧವಾಗಿ ಉಳಿಯಿತು ಮತ್ತು ಹಾಗಾಗಿ ಅದು ಹಿಂದೂ ಗಣರಾಜ್ಯವಾಗಲಿಲ್ಲ.

1937ರಲ್ಲಿ ಪಾಕಿಸ್ತಾನ ಒಂದು ಪ್ರತ್ಯೇಕ ರಾಷ್ಟ್ರವಾಗಬೇಕೆಂದು ವಾದಿಸುತ್ತಿದ್ದವರಿಗೆ ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಿಂದ-ಹಿಂದೂ ಮಹಾಸಭಾದಿಂದ ಸೈದ್ಧಾಂತಿಕ ಬೆಂಬಲ ದೊರಕಿತು. ಆ ವರ್ಷ ಅದರ ಅಧ್ಯಕ್ಷರು ಹೇಳಿದರು: ‘‘...ಭಾರತದಲ್ಲಿ ಮುಖ್ಯವಾಗಿ ಎರಡು ರಾಷ್ಟ್ರಗಳಿವೆ. ಹಿಂದೂಗಳು ಮತ್ತು ಮುಸ್ಲಿಮರು.’’ ಇದಾಗಿ ಸ್ವಲ್ಪಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಂತೀಯ ಸರಕಾರಗಳನ್ನು ತೊರೆದು ಆ ಬಳಿಕ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿತು. ಆಗ ಹಿಂದೂ ಮಹಾಸಭಾ ತನ್ನ ಸೈದ್ಧಾಂತಿಕ ಸಮಾನ ಮನಸ್ಕ ಮುಸ್ಲಿಮ್ ಲೀಗ್ ಜೊತೆ ಸೇರಿ ಸಿಂಧ್ ಮತ್ತು ಬಂಗಾಳದಲ್ಲಿ ಮೈತ್ರಿ ಸರಕಾರ ರಚಿಸಿತು.

ಅದೇನಿದ್ದರೂ ಹಿಂದೂ ರಾಷ್ಟ್ರೀಯ ವಾದಿಗಳು ಮುಸ್ಲಿಮ್ ಲೀಗ್ ಯಶಸ್ವಿಯಾದಷ್ಟು ಯಶಸ್ವಿಯಾಗಲಿಲ್ಲ ಮತ್ತು ಭಾರತೀಯ ಗಣರಾಜ್ಯವನ್ನು ಧಾರ್ಮಿಕ ನೆಲೆಯಲ್ಲಿ ವ್ಯಾಖ್ಯಾನಿಸಲು ಅವರಿಗೆ ಸಾಧ್ಯವಾಗಲಿಲ್ಲ. ಸ್ವಾತಂತ್ರಾ ನಂತರ ಎರಡು ತಲೆಮಾರುಗಳ ವರೆಗೆ ಭಾರತೀಯರು ಚುನಾವಣೆಯಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ನಿರಾಕರಿಸುತ್ತಲೇ ಬಂದರು.

ಈಗ ಅದು ಬದಲಾಗುತ್ತಿದೆ. ಭಾರತವನ್ನು ಆಳುತ್ತಿರುವ ರಾಜಕೀಯ ಸಿದ್ಧಾಂತವು ಈಗ ಪಾಕಿಸ್ತಾನದ ಆದರ್ಶಗಳಿಗೆ ತನ್ನ ನಿಷ್ಠೆಯನ್ನು ಅಡವಿಟ್ಟಿದೆ. ಹಿಂದೂಗಳು ಮತ್ತು ಮುಸ್ಲಿಮರು ಎರಡು ಪ್ರತ್ಯೇಕ ರಾಷ್ಟ್ರಗಳಿಗೆ ಸೇರಿದವರೆಂಬುದೇ ಪಾಕಿಸ್ತಾನದ ಆ ಆದರ್ಶಗಳು.

ಪಾಕಿಸ್ತಾನದ ಸೃಷ್ಟಿ ಭಾರತೀಯ ಉಪಖಂಡದಲ್ಲಿ ಒಂದು ಭಾಗವನ್ನು ಒಂದು ಧಾರ್ಮಿಕ ರಾಷ್ಟ್ರವಾಗಿ ಮಾಡಿತು; ಈಗ ಹಿಂದುತ್ವ ರಾಷ್ಟ್ರೀಯತೆಯ ಪ್ರವಾಹವು ಇನ್ನೊಂದು ಭಾಗವನ್ನು ಅದರ ಹಿಂದೂ ಪ್ರತಿಫಲನವಾಗಿ ಮಾಡುತ್ತಿದೆ. ಇದು ವಿಭಜನೆಯ ಪೂರ್ಣಗೊಳಿಸುವಿಕೆಯಾಗುತ್ತದೆ ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಿಂದ ಪಾಕಿಸ್ತಾನ ಬೇರೆಯಾಗಬೇಕು ಎಂದು ವಾದಿಸುವವರಿಗೆ ಗೆಲುವು ಆಗುತ್ತದೆ. ಇತ್ತೀಚೆಗೆ ಶಶಿ ತರೂರು ಬರೆದಂತೆ ‘‘ಆಗ ಆದದ್ದು ಭಾರತ ಮಣ್ಣಿನ ವಿಭಜನೆ ಮತ್ತು ಇದು ಭಾರತದ ಆತ್ಮದ ವಿಭಜನೆಯಾಗಿದೆ.’’

(ಲೇಖಕರು ಫ್ರೀಡಂ ಗಜೆಟ್‌ನ ಮುಖ್ಯ ಸಂಪಾದಕರು ಹಾಗೂ ಓರ್ವ ನೀತಿ ವಿಶ್ಲೇಷಕರು. ಈ ಹಿಂದೆ ಅವರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.)

 ಕೃಪೆ ಡೆಕ್ಕನ್ ಹೆರಾಲ್ಡ್‌

Writer - ಮುಹಮ್ಮದ್ ಝೀಶಾನ್

contributor

Editor - ಮುಹಮ್ಮದ್ ಝೀಶಾನ್

contributor

Similar News

ಜಗದಗಲ
ಜಗ ದಗಲ