ಇರಾನ್ ಸೇನಾಧಿಕಾರಿ ಹತ್ಯೆ ಖಂಡಿಸಿ ಶ್ವೇತಭವನದ ಎದುರು ಪ್ರತಿಭಟನೆ

Update: 2020-01-05 17:34 GMT

ವಾಶಿಂಗ್ಟನ್, ಜ. 5: ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿಯ ಸಾವಿಗೆ ಕಾರಣವಾದ ಅಮೆರಿಕ ವಾಯುಪಡೆಯ ದಾಳಿ ಮತ್ತು ಮಧ್ಯ ಪ್ರಾಚ್ಯಕ್ಕೆ ಇನ್ನೂ 3,000 ಅಮೆರಿಕನ್ ಸೈನಿಕರನ್ನು ಕಳುಹಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ಖಂಡಿಸಿ ವಾಶಿಂಗ್ಟನ್ ಮತ್ತು ಅಮೆರಿಕದ ಇತರ ನಗರಗಳಲ್ಲಿ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

‘ಅಮೆರಿಕವು ಮಧ್ಯಪ್ರಾಚ್ಯದಿಂದ ಹೊರಬರದಿದ್ದರೆ ಶಾಂತಿಯೂ ಇಲ್ಲ, ನ್ಯಾಯವೂ ಇಲ್ಲ’ ಎಂಬ ಘೋಷಣೆಗಳನ್ನು ನೂರಾರು ಪ್ರತಿಭಟನಕಾರರು ವಾಶಿಂಗ್ಟನ್‌ನ ಶ್ವೇತಭವನದ ಹೊರಗೆ ಕೂಗಿದರು. ಬಳಿಕ, ಅಲ್ಲಿಂದ ಕೆಲವು ಬ್ಲಾಕ್‌ಗಳಷ್ಟು ದೂರದಲ್ಲಿರುವ ಟ್ರಂಪ್ ಇಂಟರ್‌ನ್ಯಾಶನಲ್ ಹೊಟೇಲ್‌ಗೆ ಅವರು ಮೆರವಣಿಗೆಯಲ್ಲಿ ತೆರಳಿದರು.

 ನ್ಯೂಯಾರ್ಕ್, ಶಿಕಾಗೊ ಮತ್ತು ಇತರ ನಗರಗಳಲ್ಲೂ ಪ್ರತಿಭಟನಾ ಪ್ರದರ್ಶನಗಳನ್ನು ಏರ್ಪಡಿಸಲಾಯಿತು.

‘ಇರಾನ್ ವಿರುದ್ಧ ಯುದ್ಧ ಅಥವಾ ದಿಗ್ಬಂಧನ ಬೇಡ’ ಮತ್ತು ‘ಅಮೆರಿಕ ಸೈನಿಕರು ಇರಾಕ್‌ನಿಂದ ಹೊರಬರಲಿ’ ಎಂಬ ಬರಹಗಳ ಘೋಷಪತ್ರಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.

ತೈಲಕ್ಕಾಗಿ ಇನ್ನು ಜನರನ್ನು ಕೊಲ್ಲುವುದು ಸಾಧ್ಯವಿಲ್ಲ: ನಟಿ ಜೇನ್ ಫೊಂಡ

ವಾಶಿಂಗ್ಟನ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನಟಿ ಮತ್ತು ಹೋರಾಟಗಾರ್ತಿ ಜೇನ್ ಫೊಂಡ ಸೇರಿದಂತೆ ಹಲವಾರು ಮಂದಿ ಮಾತನಾಡಿದರು.

‘‘ನೀವು ಹುಟ್ಟಿದ ಬಳಿಕ ನಡೆದ ಎಲ್ಲಾ ಯುದ್ಧಗಳನ್ನು ತೈಲಕ್ಕಾಗಿ ಮಾಡಲಾಗಿದೆ ಎನ್ನುವುದನ್ನು ಇಲ್ಲಿ ನೆರದಿರುವ ಯುವ ಜನರು ಅರ್ಥಮಾಡಿಕೊಳ್ಳಬೇಕು’’ ಎಂದು 82 ವರ್ಷದ ಫೊಂಡ ಹೇಳಿದರು. ‘‘ಇನ್ನು ನಾವು ಪ್ರಾಣಗಳನ್ನು ಕಳೆದುಕೊಳ್ಳುವುದು ಮತ್ತು ಜನರನ್ನು ಕೊಲ್ಲುವುದು ಮತ್ತು ತೈಲಕ್ಕಾಗಿ ಪರಿಸರವನ್ನು ಹಾಳುಗೆಡಹುವುದು ಸಾಧ್ಯವಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News