ಇದೇನಾ ಕನ್ನಡ? ಇದೇನಾ ಸಂಸ್ಕೃತಿ?

Update: 2020-01-07 05:24 GMT

ಕನ್ನಡ ಸಾಹಿತ್ಯ ಪರಿಷತ್ ಸದಾ ಒಂದಲ್ಲ ಒಂದು ಕಾರಣಕ್ಕೆ ಟೀಕೆ, ವಿವಾದಕ್ಕೊಳಗಾಗುತ್ತಲೇ ಬಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳ ವೇದಿಕೆಗಳಲ್ಲಿ ರಾಜಕಾರಣಿಗಳ ದಂಡಿನ ಅಗತ್ಯವಿದೆಯೇ ಎಂಬ ಪ್ರಶ್ನೆ ಹಲವು ಬಾರಿ ಚರ್ಚೆಗೊಳಗಾಗಿತ್ತು. ಆ ವೇದಿಕೆ ಸಾಹಿತ್ಯ, ವಿಚಾರ, ಚಿಂತನೆಗಳಿಗಷ್ಟೇ ಸೀಮಿತವಾಗಬೇಕು, ಯಾವ ಕಾರಣಕ್ಕೂ ರಾಜಕಾರಣಿಗಳು ಅಲ್ಲಿ ಮುಖ್ಯವಾಗಬಾರದು ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಅಂಗವಲ್ಲ. ಆದರೆ ಸಾಹಿತ್ಯ ಸಮ್ಮೇಳನಗಳಿಗೆ ಸರಕಾರದ ಅನುದಾನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅದು ಮುಖ್ಯಮಂತ್ರಿಯಾದಿಯಾಗಿ ಸಚಿವರನ್ನು ಓಲೈಸಲೇ ಬೇಕಾಗುತ್ತದೆ. ಈ ಕಾರಣದಿಂದಲೇ ರಾಜಕೀಯ ವ್ಯಕ್ತಿಗಳನ್ನು ಆಹ್ವಾನಿಸುವುದು ಪರಿಷತ್‌ಗೆ ಅನಿವಾರ್ಯವಾಗಿ ಬಿಡುತ್ತದೆ. ಆದರೆ, ಸಾಹಿತ್ಯ ಸಮ್ಮೇಳನಗಳಿಗೆ ಅನುದಾನ ನೀಡುವುದು ಸರಕಾರದ ಹೊಣೆಗಾರಿಕೆಗಳಲ್ಲಿ ಒಂದು. ಈ ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ, ಚಿಂತನೆಗಳನ್ನು ಬೆಳೆಸುವಲ್ಲಿ ತನ್ನದೇ ಆದ ಪಾತ್ರಗಳನ್ನು ನಿರ್ವಹಿಸುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡುವುದು ಎಂದರೆ ಯಾವುದೋ ಮಠಗಳಿಗೆ, ಪೀಠಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಿದಂತಲ್ಲ. ನೀಡಿದ ಅನುದಾನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ತನ್ನ ಮೂಗಿನ ನೇರಕ್ಕಿರಬೇಕು ಎಂದು ಭಾವಿಸುವುದು ಸರಕಾರದ ಉದ್ಧಟತನವಾಗುತ್ತದೆ. ಇದೀಗ ಅಂತಹದೊಂದು ಉದ್ಧಟತನದ ಕಾರಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಸುದ್ದಿಯಾಗಿದ್ದಾರೆ. ಶೃಂಗೇರಿಯಲ್ಲಿ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಅವರು ತಕರಾರು ತೆಗೆದಿದ್ದಾರೆ. ‘ನಾನು ಹೇಳಿದ್ದು ನಡೆಯದೇ ಇದ್ದರೆ, ಅನುದಾನ ಬಿಡುಗಡೆ ಮಾಡುವುದಿಲ್ಲ, ಯಾವ ಸಹಕಾರ ನೀಡುವುದಿಲ್ಲ’ ಎನ್ನುವ ಮೂಲಕ ಸಾಹಿತ್ಯ, ಚಿಂತನೆ, ವೈಚಾರಿಕತೆಯನ್ನು ತಮ್ಮ ಮನೆಯ ಊಳಿಗ ಮಾಡಲು ಹೊರಟಿದ್ದಾರೆ.

ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಹೆಚ್ಚು ನಡೆದವು. ಸಮ್ಮೇಳನ ಹೋಬಳಿ ಮಟ್ಟದವರೆಗೂ ತಲುಪಿತು. ಆದರೆ ಸಾಹಿತ್ಯ ಸಮ್ಮೇಳನಗಳು ಇವರ ಅವಧಿಯಲ್ಲಿ ತನ್ನ ಗುಣಮಟ್ಟವನ್ನು ಸಂಪೂರ್ಣ ಕಳೆದುಕೊಂಡವು. ಸಾಹಿತ್ಯ ಸಮ್ಮೇಳನವೋ, ಸತ್ಯನಾರಾಯಣ ಪೂಜೆಯೋ ಎಂದು ಜನರು ಭಾವಿಸುವಂತೆ, ದೇವಸ್ಥಾನಗಳಲ್ಲೂ ಸಮ್ಮೇಳನಗಳನ್ನು ಹಮ್ಮಿಕೊಳ್ಳಲು ಶುರು ಹಚ್ಚಿಕೊಂಡರು. ಸಾಹಿತ್ಯ ಸಮ್ಮೇಳನದ ವಿಚಾರಗಳಿಗಿಂತ ಸಮ್ಮೇಳನದ ಅಡುಗೆಗಳಷ್ಟೇ ಚರ್ಚೆಗೊಳಗಾಗಲು ಶುರುವಾದವು. ಕನ್ನಡ ಅಸ್ಮಿತೆಯೊಳಗೆ ಅತಿ ಹೆಚ್ಚು ವೈದಿಕ ಅಸ್ಮಿತೆಗಳು ನುಗ್ಗಿದ್ದು ಪುನರೂರು ಅವಧಿಯಲ್ಲಿ. ಇದಾದ ಬಳಿಕ ನಿಧಾನಕ್ಕೆ ಸಂಘಪರಿವಾರದ ಚಿಂತನಾ ವಲಯಗಳೂ ಇದರೊಳಗೆ ಕನ್ನ ಹಾಕಿದವು. ಇದೀಗ ಸಾಹಿತ್ಯದ ಗಂಧಗಾಳಿ ಇರದ, ಸಾಹಿತ್ಯ ಬೋಧಿಸುವ ಜೀವನ ವೌಲ್ಯಗಳ ಬಗ್ಗೆ ಅಣುವಿನಷ್ಟು ಅರಿವೂ ಇರದ ಸಚಿವ ಸಿ. ಟಿ. ರವಿ, ‘ಸಮ್ಮೇಳನಾಧ್ಯಕ್ಷರು ಯಾರಾಗಬೇಕು, ಯಾರಾಗಬಾರದು?’ ಎನ್ನುವುದನ್ನು ನಿರ್ಧರಿಸಲು ಮುಂದಾಗಿದ್ದಾರೆ. ಅನುದಾನ ನೀಡುವುದರ ಹೊರತಾಗಿ ಕನ್ನಡ ಸಾಹಿತ್ಯ ಪರಿಷತ್‌ಗೂ ಸರಕಾರಕ್ಕೂ ಯಾವ ಸಂಬಂಧವೂ ಇಲ್ಲ. ಅದರ ಮೇಲೆ ತನ್ನ ನಿಯಂತ್ರಣವನ್ನು ವಿಧಿಸುವ ಅಧಿಕಾರವೂ ಇಲ್ಲ. ಈ ನಾಡಿನ ಹಿರಿಯ ಸಾಹಿತಿಗಳು ಕನ್ನಡ ಕಟ್ಟುವ ಭಾಗವಾಗಿ ಕನ್ನಡ ಸಾಹಿತ್ಯ ಪರಿಷತ್‌ನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅಂತಹ ಪರಿಷತ್‌ನೊಳಗೆ ತನ್ನ ರಾಜಕೀಯವನ್ನು ತುರುಕುವುದಕ್ಕೆ ಮುಂದಾಗಿರುವ ಸಿ. ಟಿ. ರವಿ, ಆ ಮೂಲಕ ಕನ್ನಡ ಮತ್ತು ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ.

ತನ್ನ ಸಂಘಪರಿವಾರದ ಸಮಾವೇಶದಲ್ಲಿ ಯಾರು ಅಧ್ಯಕ್ಷರಾಗಬೇಕು, ಬೇಡ ಎನ್ನುವುದನ್ನು ನಿರ್ಣಯಿಸಲು ಸಿ. ಟಿ. ರವಿ ಹಕ್ಕುದಾರರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಯಾರು ನಿರ್ವಹಿಸಬೇಕು ಎನ್ನುವುದನ್ನು ಜಿಲ್ಲಾ ಪರಿಷತ್‌ನ ಅಧ್ಯಕ್ಷರು ಮತ್ತು ಸದಸ್ಯರು ನಿರ್ಧರಿಸುತ್ತಾರೆ. ಸಾಹಿತ್ಯ, ಚಿಂತನೆಯ ಬಗ್ಗೆ ಅರಿವಿರುವವರೇ ಅಲ್ಲಿರುವುದರಿಂದ ಯಾರಾಗಬೇಕು, ಯಾರಾಗಬಾರದು ಎನ್ನುವುದನ್ನು ನಿರ್ಧರಿಸಲು ಅವರು ಸಕಲ ರೀತಿಯಲ್ಲೂ ಅರ್ಹರು. ಈ ನಿಟ್ಟಿನಲ್ಲಿ ಅವರು ಈಗಾಗಲೇ ಕಲ್ಕುಳಿ ವಿಠಲ್ ಹೆಗ್ಗಡೆಯವರನ್ನು ಅರ್ಹರು ಎಂದೇ ಆಯ್ಕೆ ಮಾಡಿದ್ದಾರೆ. ಹೀಗಿರುವಾಗ ಅವರ ಆಯ್ಕೆ ಸರಿಯಲ್ಲ ಎಂದು ಹೇಳುವ ಯಾವ ಅರ್ಹತೆ ಸಚಿವರಿಗಿದೆ? ಕಲ್ಕುಳಿ ವಿಠಲ್ ಹೆಗ್ಗಡೆಯವರು ಹಿರಿಯ ಚಿಂತಕರು ಮಾತ್ರವಲ್ಲ, ಆದಿವಾಸಿಗಳ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡಿದವರು. ಸ್ವತಃ ಕೃಷಿಕರೂ ಆಗಿರುವ ಹೆಗ್ಗಡೆಯವರು, ಕೃಷಿಕರ ಹಕ್ಕುಗಳಿಗಾಗಿಯೂ ವ್ಯವಸ್ಥೆಯ ವಿರುದ್ಧ ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿದವರು. ಈ ನೆಲದ ಮಣ್ಣಿನಿಂದ ಕುಡಿಯೊಡೆದ ಅಪ್ಪಟ ಸೃಜನಶೀಲರು ಅವರು. ಅವರ ಇತ್ತೀಚಿನ ‘ಮಂಗನ ಬ್ಯಾಟಿ’ ಕೃತಿ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿತ್ತು ಮಾತ್ರವಲ್ಲ ಹಲವು ಮುದ್ರಣಗಳನ್ನೂ ಕಂಡಿತು. ಕೃಷಿ ಬದುಕು ಮತ್ತು ಪರಿಸರದ ಜೊತೆಗಿರುವ ನಂಟನ್ನು ಇದು ತೆರೆದಿಡುತ್ತದೆ. ಮಲೆನಾಡಿನ ಕುರಿತಂತೆ ಅಗಾಧ ಮಾಹಿತಿಯನ್ನು ಹೊಂದಿದವರು ಕಲ್ಕುಳಿ ವಿಠಲ್ ಹೆಗ್ಗಡೆ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿಸಿರುವುದು ಅರ್ಥಪೂರ್ಣವಾಗಿದೆ.

ಕಲ್ಕುಳಿ ವಿಠಲ್ ಹೆಗ್ಗಡೆ ಅಧ್ಯಕ್ಷ ಸ್ಥಾನ ವಹಿಸಿದರೆ ತಾನು ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಮತ್ತು ಅನುದಾನ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಬೆದರಿಕೆ ಒಡ್ಡಿದ್ದಾರೆ. ಸಿ. ಟಿ. ರವಿಯ ಮೇಲಿರುವ ಕ್ರಿಮಿನಲ್ ಆರೋಪಗಳನ್ನು ಗಮನಿಸಿದರೆ ಅವರು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ಇರುವುದೇ ಸಮ್ಮೇಳನಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ. ಸಾಹಿತ್ಯದ ಗುರಿ ಸರ್ವರಿಗೂ ಹಿತವನ್ನು ಬಯಸುವುದು. ಸಮಾಜದಲ್ಲಿ ಒಳಿತನ್ನು ಹರಡುವುದು. ಸಿ.ಟಿ. ರವಿ ಅವರು ವೇದಿಕೆಗಳಲ್ಲಿ ನಿಂತು ಸಮಾಜಕ್ಕೆ ಕಿಚ್ಚು ಹಚ್ಚಿದ್ದೇ ಹೆಚ್ಚು. ಹೀಗಿರುವಾಗ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಏರಿ, ಸಾಹಿತ್ಯ ಸಮ್ಮೇಳನದ ಉದ್ದೇಶವನ್ನೇ ಅವರು ಕೆಡಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ ಎಂಬ ಸಿ.ಟಿ. ರವಿ ಅವರ ಕೊಡುಗೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ, ಸರಕಾರದಿಂದ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಸಾಹಿತ್ಯ ಪರಿಷತ್ ಕೇಳುತ್ತಿರುವುದು ಸಿ.ಟಿ. ರವಿಯವರು ನಾಡಿನಿಂದ ದೋಚಿ ಮಾಡಿಟ್ಟ ಹಣವನ್ನಲ್ಲ. ಸರಕಾರವೆನ್ನುವುದು ಸಚಿವರ ಸೊತ್ತೂ ಅಲ್ಲ. ಜನರು ತಾವು ಸರಕಾರಕ್ಕೆ ತೆರಿಗೆ ರೂಪದಲ್ಲಿ ನೀಡಿದ ಹಣವನ್ನು, ಕನ್ನಡ ನಾಡು, ನುಡಿಯ ಏಳಿಗೆಗಾಗಿ ಕೇಳುತ್ತಿದ್ದಾರೆ. ಮಠ ಮಾನ್ಯಗಳಿಗೆ ಕೇಳುವ ಮೊದಲೇ ಬಾಚಿ ಬಾಚಿ ಕೊಡುವ ಸರಕಾರ ಸಾಹಿತ್ಯ ಸಮ್ಮೇಳನಕ್ಕೆ ಹಣ ಬಿಡುಗಡೆ ಮಾಡದೇ ಇದ್ದರೆ ಕನ್ನಡಕ್ಕೆ ದ್ರೋಹ ಬಗೆದಂತೆ. ಒಂದು ವೇಳೆ ಸರಕಾರ ರಾಜಕೀಯ ಕಾರಣಕ್ಕಾಗಿ ಅನುದಾನ ಬಿಡುಗಡೆ ಮಾಡದೇ ಇದ್ದರೆ, ರಾಜ್ಯಮಟ್ಟದಲ್ಲಿ ಒಂದಾಗಿ ಸರಕಾರದ ಕನ್ನಡ ದ್ರೋಹಿ ನೀತಿಯನ್ನು ಪ್ರತಿಭಟಿಸಬೇಕಾಗಿದೆ. ಮುಖ್ಯಮಂತ್ರಿಯವರು ತಕ್ಷಣ ಮಧ್ಯ ಪ್ರವೇಶಿಸಿ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಿಗೆ ಕನ್ನಡತನದ ಮತ್ತು ಸಂಸ್ಕೃತಿಯ ಪಾಠವನ್ನು ಹೇಳಿಕೊಟ್ಟು, ಸಾಹಿತ್ಯ ಸಮ್ಮೇಳನದ ಮುಂದಿರುವ ವಿಘ್ನವನ್ನು ನಿವಾರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News