ಪ್ರಶಸ್ತಿ ಗೆಲ್ಲುವತ್ತ ಸಿಂಧು ಚಿತ್ತ

Update: 2020-01-07 04:31 GMT

ಕೌಲಾಲಂಪುರ, ಜ.6: ಮಲೇಶ್ಯಾ ಮಾಸ್ಟರ್ಸ್ ಸೂಪರ್ -500 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತದ ಪಿ.ವಿ. ಸಿಂಧು ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸುವ ಯೋಜನೆಯಲ್ಲಿದ್ಧಾರೆ.

       ವಿಶ್ವದ ಆರನೇ ಶ್ರೇಯಾಂಕದ ಸಿಂಧು ಕಳೆದ ವರ್ಷ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ಪ್ರಶಸ್ತಿಯನ್ನು ಜಯಿಸಿದ್ದರು ಬಳಿಕ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಹೊರತುಪಡಿಸಿದರೆ ಉಳಿದ ಟೂರ್ನಿಗಳಲ್ಲಿ ಪ್ರಶಸ್ತಿ ವಂಚಿತಗೊಂಡಿದ್ದರು. ಒಲಿಂಪಿಕ್ಸ್ಸ್‌ಗೆ ಇನ್ನು 6 ತಿಂಗಳು ಬಾಕಿ ಇದೆ. ಈ ಕಾರಣದಿಂದಾಗಿ ಸಿಂಧು ಮಲೇಶ್ಯಾ ಮಾಸ್ಟರ್ಸ್ ನಲ್ಲಿ ಗೆಲುವಿನೊಂದಿಗೆ ತಯಾರಿ ಆರಂಭಿಸುವ ಯೋಜನೆಯಲ್ಲಿದ್ದಾರೆ. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಸಿಂಧು ಅವರು ರಶ್ಯದ ಎವ್ಗೆನಿಯಾ ಕೊಸೆಟ್ಸಾಕಾಯಾ ಸವಾಲನ್ನು ಎದುರಿಸಲಿರುವರು.

  

   ಸಿಂಧು ಮೊದಲ ಪಂದ್ಯದಲ್ಲಿ ಜಯಿಸಿದರೆ, ಕ್ವಾರ್ಟರ್ ಫೈನಲ್‌ನ ವಿಶ್ವದ ನಂಬರ್ 1 ಚೈನಾ ತೈಪೆಯ ತೈ ತ್ಸು ಯಿಂಗ್ ಸವಾಲು ಎದುರಾಗಲಿದೆ. ಭಾರತದ ಮಹಿಳಾ ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್ ಕಳೆದ ವರ್ಷ ಇಂಡೋನೇಶ್ಯಾ ಮಾಸ್ಟರ್ಸ್ ಪ್ರಶಸ್ತಿ ಜಯಿಸಿದ್ದರು. ಉಳಿದ ಪಂದ್ಯಗಳಲ್ಲಿ ಬೇಗನೇ ನಿರ್ಗಮಿಸಿದ್ದರು. ಅವರು ಅರ್ಹತಾ ಪಂದ್ಯದಲ್ಲಿ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ಒಲಿಂಪಿಕ್ಸ್ ವರ್ಷದಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳಲು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ನಿಂದ (ಪಿಬಿಎಲ್) ಹೊರಬಂದಿರುವ ಕಿಡಂಬಿ ಶ್ರೀಕಾಂತ್ ಅವರು ಚೈನಿ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಆಡಲಿದ್ದಾರೆ.

       ಬಿಡಬ್ಲ್ಯುಎಫ್ ಶ್ರೇಯಾಂಕದಲ್ಲಿ ಭಾರತದ ಪುರುಷರ ಸಿಂಗಲ್ಸ್ ಆಟಗಾರನಾಗಿ ಉತ್ತಮ ಸ್ಥಾನ ಪಡೆದ ಬಿ. ಸಾಯಿ ಪ್ರಣೀತ್ ಅವರು ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಸವಾಲನ್ನು ಮತ್ತು ಸಮೀರ್ ವರ್ಮಾ ಥಾಯ್ಲೆಂಡ್‌ನ ಕಾಂಟಾಫೊನ್ ಸವಾಲು ಎದುರಿಸಲಿದ್ದಾರೆ.

   ವಿಶ್ವದ ಮಾಜಿ ನಂ.6 ಆಟಗಾರ ಪಿ. ಕಶ್ಯಪ್ ಅವರು ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ನಂ.1 ಕೆಂಟೊ ಮೊಮೊಟಾರನ್ನು , ಎಚ್ .ಎಸ್ .ಪ್ರಣಯ್ ಜಪಾನ್‌ನ ಕಾಂಟಾ ಸುನೇಯಾಮಾರನ್ನು ಎದುರಿಸುವರು.

     

   

   ಥಾಯ್ಲೆಂಡ್ ಓಪನ್‌ನಲ್ಲಿ ಸೂಪರ್ 500 ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಪುರುಷ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸ್ಥಳೀಯ ಜೋಡಿ ವಾಂಗ್ ಯೂ ಸಿನ್ ಮತ್ತು ಟಿಯೋ ಯೇ ಯಿ ಸವಾಲು ಎದುರಾಗಲಿದೆ. ಗಾಯದಿಂದಾಗಿ ಕಳೆದ ನವೆಂಬರ್‌ನಲ್ಲಿ ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಿಂದ ಹಿಂದೆ ಸರಿದ ಅಶ್ವಿನಿ ಪೊನ್ನಪ್ಪ ಇದೀಗ ಚೇತರಿಸಿಕೊಂಡಿದ್ದಾರೆ. ಕೊರಿಯಾದ ಚಾಂಗ್ ಯೆ ನಾ ಮತ್ತು ಕಿಮ್ ಹೆ ರಿನ್ ಅವರನ್ನು ಎದುರಿಸಲು ತನ್ನ ಮಹಿಳಾ ಡಬಲ್ಸ್ ಆಟಗಾರ್ತಿ ಎನ್ ಸಿಕ್ಕಿ ರೆಡ್ಡಿ ಜೊತೆ ಕಣಕ್ಕಿಳಿಯಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್ ಎರಡನೇ ಶ್ರೇಯಾಂಕಿತ ಚೀನಾದ ಜೋಡಿ ವಾಂಗ್ ಯಿ ಲ್ಯು ಮತ್ತು ಹುವಾಂಗ್ ಡಾಂಗ್ ಪಿಂಗ್ ಅವರನ್ನು ಎದುರಿಸಲಿದ್ದಾರೆ.

    ಸಿಕ್ಕಿ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಅವರಿಗೆ ಆರಂಭಿಕ ಸುತ್ತಿನಲ್ಲಿ ಝೆಂಗ್ ಸಿ ವೀ ಮತ್ತು ಹುವಾಂಗ್ ಯಾ ಕಿಯೊಂಗ್ ಸವಾಲು ಎದುರಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News