ಸೌರವ್ಯೂಹದ ಹೊರಗೆ ಭೂಮಿ ಗಾತ್ರದ ಗ್ರಹ ಪತ್ತೆ

Update: 2020-01-07 16:59 GMT

ವಾಶಿಂಗ್ಟನ್, ಜ. 7: ತನ್ನ ಗ್ರಹ ಶೋಧಕ ಉಪಗ್ರಹ ‘ಟಿಇಎಸ್‌ಎಸ್’ ಸೌರವ್ಯೂಹದ ಹೊರಗೆ ಭೂಮಿ ಗಾತ್ರದ ಗ್ರಹವೊಂದನ್ನು ಪತ್ತೆಹಚ್ಚಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಹೇಳಿದೆ. ಈ ಗ್ರಹವು ತನ್ನ ಸೂರ್ಯನಿಂದ ಜೀವಿಗಳಿಗೆ ಪೂರಕವಾಗುವಷ್ಟು ಅಂತರದಲ್ಲಿದ್ದು, ಅಲ್ಲಿ ಜಲ ರೂಪದ ನೀರು ಇರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

 ಹೊಸದಾಗಿ ಕಂಡುಹಿಡಿಯಲ್ಪಟ್ಟ ಗ್ರಹ ‘ಟಿಒಐ 700 ಡಿ’ ನಮ್ಮ ಭೂಮಿಯಿಂದ 100 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಹವಾಯಿ ರಾಜಧಾನಿ ಹೊನೊಲುಲುನಲ್ಲಿ ನಡೆದ ಅಮೆರಿಕನ್ ಆಸ್ಟ್ರೋನಾಮಿಕಲ್ ಸೊಸೈಟಿಯ ವಾರ್ಷಿಕ ಸಮ್ಮೇಳನದಲ್ಲಿ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿ ಘೋಷಿಸಿದೆ.

‘‘ನಮ್ಮ ಸೂರ್ಯನಿಗೆ ಸಮೀಪದಲ್ಲಿರುವ ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಭೂಮಿ ಗಾತ್ರದ ಗ್ರಹಗಳನ್ನು ಪತ್ತೆಹಚ್ಚುವ ಉದ್ದೇಶಕ್ಕಾಗಿಯೇ ಟಿಇಎಸ್‌ಎಸ್‌ನ್ನು ವಿನ್ಯಾಸಗೊಳಿಸಲಾಗಿತ್ತು’’ ಎಂದು ನಾಸಾದ ಆ್ಯಸ್ಟ್ರೋಫಿಸಿಕ್ಸ್ ವಿಭಾಗದ ನಿರ್ದೇಶಕ ಪೌಲ್ ಹರ್ಟ್ಝ್ ಹೇಳಿದರು.

 ನೂತನ ಗ್ರಹದ ನಕ್ಷತ್ರ ಟಿಒಐ 700 ನಮ್ಮ ಸೂರ್ಯನಿಗೆ ಹೋಲಿಸಿದರೆ ಸಣ್ಣದು. ಅಂದರೆ ನಮ್ಮ ಸೂರ್ಯನ ಗಾತ್ರದ ಸೂಮಾರು 40 ಶೇಕಡದಷ್ಟು ಇದೆ. ಶಾಖ ಸೂರ್ಯನಿಗಿಂತ ಅರ್ಧದಷ್ಟು ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News