ಇರಾಕ್‌ನಿಂದ ಯೋಧರನ್ನು ಹಿಂತೆಗೆದ ಜರ್ಮನಿ

Update: 2020-01-08 17:25 GMT

ಬರ್ಲಿನ್,ಜ.8: ಇರಾಕ್‌ನಲ್ಲಿ ಐಸಿಸ್ ವಿರೋಧಿ ಸೇನಾ ಮೈತ್ರಿಕೂಟದ ಭಾಗವಾಗಿ ಇರಾಕ್‌ನಲ್ಲಿ ನಿಯೋಜಿತವಾದ ತನ್ನ ಸೇನಾಪಡೆಗಳನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿರುವುದಾಗಿ ಜರ್ಮನಿಯು ಮಂಗಳವಾರ ತಿಳಿಸಿದೆ. ಅಮೆರಿಕದ ಡ್ರೋನ್ ದಾಳಿಯಿಂದ ಇರಾನ್‌ನ ಉನ್ನತ ಸೇನಾ ಜನರಲ್ ಖಾಸಿಂ ಸುಲೈಮಾನಿ ಸಾವನ್ನಪ್ಪಿದ ಬಳಿಕ ಪ್ರದೇಶದಲ್ಲಿ ಉದ್ವಿಗ್ನಸ್ಥಿತಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಜರ್ಮನಿ ಈ ನಿರ್ಧಾರ ಕೈಗೊಂಡಿದೆ.

ಐಸಿಸ್ ಉಗ್ರರ ವಿರುದ್ಧ ಕಾರ್ಯಾಚರಣೆಗಾಗಿ ಬಗ್ದಾದ್‌ನ ಕ್ಯಾಂಪ್ ತಾಜಿ ಸಮೀಪದ ಸೇನಾನೆಲೆಯಲ್ಲಿರುವ ಒಟ್ಟು 32 ಜರ್ಮನ್ ಯೋಧರನ್ನು , ಜೋರ್ಡಾನ್‌ನ ಅಲ್‌ಝರೂಕ್ ವಾಯುಪಡೆ ನೆಲೆಗೆ ರವಾನಿಸಲಾಗಿದೆ ಎಂದು ಜರ್ಮನ್ ಸೇನೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಬಗ್ದಾದ್‌ನಲ್ಲಿರುವ ಐಸಿಸ್ ವಿರೋಧಿ ಹೋರಾಟ ಮೈತ್ರಿಪಡೆಯ ಮುಖ್ಯಕಚೇರಿಯಲ್ಲಿರುವ ಮೂವರು ಜರ್ಮನ್ ಯೋಧರನ್ನು ಕುವೈತ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ‘‘ನಮ್ಮ ಸೈನಿಕರ ಸುರಕ್ಷತೆಯು, ನಮ್ಮ ಅತ್ಯುನ್ನತ ಆದ್ಯತೆಯಾಗಿದೆ’’ ಎಂದು ಅದು ಹೇಳಿದೆ.

ಐಸಿಸ್ ವಿರೋಧಿ ಮೈತ್ರಿಪಡೆಯ ಭಾಗವಾಗಿ ಜರ್ಮನಿಯು ಇರಾಕ್‌ನಲ್ಲಿ ತನ್ನ 415 ಸೈನಿಕರನ್ನು ನಿಯೋಜಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News