×
Ad

ವೆಸ್ಟ್ ಇಂಡೀಸ್‌ಗೆ 5 ವಿಕೆಟ್‌ಗಳ ಜಯ

Update: 2020-01-08 23:42 IST

ಬ್ರಿಡ್ಜ್‌ಟೌನ್, ಜ.8: ಆರಂಭಿಕ ಬ್ಯಾಟ್ಸ್ ಮನ್ ಎವಿನ್ ಲೆವಿಸ್ ಔಟಾಗದೆ ದಾಖಲಿಸಿದ 99 ರನ್‌ಗಳ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಇಲ್ಲಿ ನಡೆದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 5 ವಿಕೆಟ್‌ಗಳ ಜಯ ಗಳಿಸಿದೆ.

ಕಿಂಗ್ಸ್‌ಸ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್‌ನ 28ರ ಹರೆಯದ ಎಡಗೈ ಬ್ಯಾಟ್ಸ್‌ಮನ್ ಎವಿನ್ ಲೆವಿಸ್ ಒಂದು ರನ್‌ನಿಂದ ಮೂರನೇ ಶತಕ ದಾಖಲಿಸುವ ಅವಕಾಶದಿಂದ ವಂಚಿತಗೊಂಡರು. ಲೆವಿಸ್ 99 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 99 ರನ್ ಗಳಿಸಿದರು. 8ನೇ ಅರ್ಧಶತಕ ದಾಖಲಿಸಿದ ಲೆವಿಸ್ 33.2ನೇ ಓವರ್‌ನಲ್ಲಿ ಬ್ಯಾರ್ರಿ ಮೆಕ್‌ಕರ್ಟಿ ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆ ಎತ್ತುವ ಪ್ರಯತ್ನ ನಡೆಸಿದ್ದರು. ಆದರೆ ಸಿಕ್ಸರ್ ತಪ್ಪಿಹೋಯಿತು. 4 ರನ್‌ಗೆ ತೃಪ್ತಿಪಟ್ಟುಕೊಂಡರು. ಐರ್ಲೆಂಡ್‌ನ್ನು 180ಕ್ಕೆ ಆಲೌಟ್ ಮಾಡಿದ್ದ ವೆಸ್ಟ್‌ಇಂಡೀಸ್ ತಂಡ ಇನ್ನೂ 100 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು. ಆಫ್ ಸ್ಪಿನ್ನರ್ ಸಿಮಿ ಸಿಂಗ್ ಮಾತ್ರ 10 ಓವರ್‌ಗಳನ್ನು ಪೂರ್ಣಗೊಳಿಸಿದ ಐರ್ಲೆಂಡ್‌ನ ಬೌಲರ್. ಅವರು 44ಕ್ಕೆ 2 ವಿಕೆಟ್ ಪಡೆದರು.

<ಐರ್ಲೆಂಡ್ 180: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 47 ಓವರ್‌ಗಳಲ್ಲಿ 180 ರನ್‌ಗಳಿಗೆ ಆಲೌಟಾಗಿತ್ತು. 4 ವಿಕೆಟ್ ಕಬಳಿಸಿದ ವೆಸ್ಟ್‌ಇಂಡೀಸ್‌ನ ಅಲ್ಝಾರಿ ಜೋಸೆಫ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಐರ್ಲೆಂಡ್‌ನ ಲೊರ್ಕಾನ್ ಟುಕೆರ್ (31) ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ವಿಂಡೀಸ್‌ನ ಅಲ್ಝಾರಿ ಜೋಸೆಫ್ ಅವರು ಆರಂಭಿಕ ಜೋಡಿ ಪಾಲ್ ಸ್ಟಿರ್ಲಿಂಗ್(15) ಮತ್ತು ಚೊಚ್ಚಲ ಪಂದ್ಯವನ್ನಾಡಿದ ಗ್ಯಾರೆತ್ ಡೆನಾನೈ (19), ಅಪಾಯಕಾರಿ ಬ್ಯಾಟ್ಸ್ ಮನ್ ಕೆವಿನ್ ಓ ಬ್ರಿಯಾನ್ (4) ವಿಕೆಟ್ ಉಡಾಯಿಸಿದರು. 51ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಐರ್ಲೆಂಡ್ 88 ರನ್ ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

 ಟುಕೆರ್ ಮತ್ತು ಮಾರ್ಕ್ ಆದೈರ್ 7ನೇ ವಿಕೆಟ್‌ಗೆ 54 ರನ್‌ಗಳ ಜಮೆ ಮಾಡಿದರು. ಆದೈರ್ 34 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 29 ರನ್ ಗಳಿಸಿ ಹೇಡನ್ ವಾಲ್ಶ್‌ಗೆ ವಿಕೆಟ್ ಒಪ್ಪಿಸಿದರು. ಆದೈರ್ ನಿರ್ಗಮಿಸಿದ ಬೆನ್ನಲ್ಲೆ ಟುಕೆರ್‌ಗೆ ಜೋಸೆಫ್ ಪೆವಿಲಿಯನ್ ಹಾದಿ ತೋರಿಸಿದರು.

 ಐರ್ಲೆಂಡ್ ಮತ್ತು ವೆಸ್ಟ್‌ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಅಂತರ್‌ರಾಷ್ಟ್ರೀಯ ಸರಣಿಯ ಎರಡನೇ ಪಂದ್ಯ ಜ.9ರಂದು ಹಾಗೂ 3ನೇ ಪಂದ್ಯ ಜ.12ರಂದು ನಡೆಯಲಿದೆ.

ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯ ಜ.15, ಎರಡನೇ ಪಂದ್ಯ 18ರಂದು ಮತ್ತು ಮೂರನೇ ಪಂದ್ಯ ಜ.19ರಂದು ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News