ನಿರ್ಭಯ: ಆರೋಪಿಗಳ ಜೊತೆಗೆ ಗಲ್ಲಿಗೇರಬೇಕಾದ ಮನಸ್ಥಿತಿಗಳು

Update: 2020-01-09 05:58 GMT

ಮನುಷ್ಯನೊಳಗಿನ ವಿಕೃತಿಗಳು ಮತ್ತು ಕ್ರೌರ್ಯಗಳ ಪರಾಕಾಷ್ಠೆಯನ್ನು ಜಗತ್ತಿಗೆ ಎತ್ತಿ ತೋರಿಸಿದ ಪ್ರಕರಣ ‘ನಿರ್ಭಯಾ ಅತ್ಯಾಚಾರ, ಕೊಲೆ’. ಈ ಪ್ರಕರಣದಲ್ಲಿ ಭಾಗವಹಿಸಿದ ಪ್ರಮುಖ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ ಮಾತ್ರವಲ್ಲ, ಗಲ್ಲಿಗೇರಿಸುವ ದಿನಾಂಕವೂ ಘೋಷಣೆಯಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ‘ನಾಲ್ವರು ಆರೋಪಿಗಳನ್ನು ಒಂದೇ ದಿನ ಗಲ್ಲಿಗೇರಿಸುವುದು’ ದೇಶದ ಪಾಲಿಗೆ ತೀರಾ ಅಪರೂಪದ ಪ್ರಕರಣ. ಸರಿಯಾದ ಮಾರ್ಗದರ್ಶನವಿದ್ದಿದ್ದರೆ ಎಲ್ಲ ನಾಗರಿಕರಂತೆಯೇ ಬದುಕು ಸಾಗಿಸಬಹುದಾಗಿದ್ದ, ನಮ್ಮದೇ ನೆಲದ ನಾಲ್ವರನ್ನು ಒಂದೇ ದಿನ ಕೊಂದು ಹಾಕುವುದು ದೇಶದ ಪಾಲಿಗೆ ಸಂಭ್ರಮದ ವಿಷಯ ಖಂಡಿತ ಅಲ್ಲ. ಸಾಧಾರಣವಾಗಿ ಕೆಲವು ವಿಷಪೂರಿತವಾದ ಜಂತುಗಳಿರುತ್ತವೆ. ರೋಗ ಹರಡುವ ಕೀಟಗಳಿರುತ್ತವೆ. ಅವುಗಳನ್ನು ಕೊಂದು ಹಾಕದೆ ಅನ್ಯ ಮಾರ್ಗವಿಲ್ಲ. ಆದರೆ ಮನುಷ್ಯ ಹಾಗಲ್ಲ. ಅವನು ಹುಟ್ಟುತ್ತಲೇ ಕ್ರೂರಿಯೂ ಅಲ್ಲ, ಒಳ್ಳೆಯವನೂ ಅಲ್ಲ. ಪರಿಸರ, ಸಮಾಜ ಅವನನ್ನು ಆ ದಿಕ್ಕಿಗೆ ಮುನ್ನಡೆಸುತ್ತದೆ. ಅವನೊಳಗಿನ ಒಳಿತುಗಳಾಗಲಿ, ಕೆಡುಕುಗಳಾಗಲಿ ಎಲ್ಲವೂ ಅವನೊಳಗಿನದಲ್ಲವೇ ಅಲ್ಲ. ಹೀಗಿರುವಾಗ ಜ. 22ರಂದು ಗಲ್ಲಿಗೇರುವವರ ಜೊತೆಗೆ ಒಂದು ಕ್ಷಣಕ್ಕೆ ನಾವೆಲ್ಲರೂ ಅವರ ಜೊತೆ ಜೊತೆಗೇ ಗಲ್ಲಿಗೇರಿರುತ್ತೇವೆ. ಯಾಕೆಂದರೆ, ಅವರು ಎಸಗಿದ ಕ್ರೌರ್ಯಗಳ ಹಿಂದೆ ಒಂದು ಸಾಮಾಜಿಕ ಮನಸ್ಥಿತಿಯೂ ಇದೆ. ಹೆಣ್ಣನ್ನು ಲೈಂಗಿಕತೆಗಷ್ಟೇ ಸೀಮಿತಗೊಳಿಸಿ ಆಕೆಯನ್ನು ದಮನಿಸುವ, ಶೋಷಿಸುವ ಪುರುಷ ಅಹಂಕಾರದ ಮನಸ್ಥಿತಿ ಅದು. ಹಾಗೆಯೇ ಅವರನ್ನು ಆ ಕ್ಷಣದಲ್ಲಿ ಅಂತಹದೊಂದು ಭೀಕರ ಕೃತ್ಯಕ್ಕೆ ತಳ್ಳಲು ಕಾರಣವಾದ ಮಾದಕ ವಸ್ತುಗಳನ್ನು ಪೋಷಿಸುತ್ತಿರುವುದೂ ಸಮಾಜವೇ ಆಗಿದೆ.

ಸರಕಾರದ ನೇತೃತ್ವದಲ್ಲೇ ಮದ್ಯ ಮಾರಾಟ ನಡೆಯುತ್ತಿರುವಾಗ, ಅವರು ಎಸಗಿದ ಕೃತ್ಯಕ್ಕೆೆ ಸರಕಾರವೂ ತನ್ನ ಪಾಲನ್ನು ನೀಡಿದಂತಾಗಲಿಲ್ಲವೇ? ನಾಳೆ ನಾಲ್ವರನ್ನು ಗಲ್ಲಿಗೇರಿಸಿದಾಕ್ಷಣ ಈ ದೇಶದಲ್ಲಿ ಅತ್ಯಾಚಾರ ನಿಂತೇ ಬಿಡುತ್ತದೆ ಎನ್ನುವ ಧೈರ್ಯ ಯಾರಿಗೂ ಇಲ್ಲ. ಇಂತಹ ಶಿಕ್ಷೆ ನೀಡಿದರೆ ಕೃತ್ಯ ಎಸಗುವವರ ಮನದಲ್ಲಿ ಭಯ ಮೂಡಿ ಅಪರಾಧಗಳ ಸಂಖ್ಯೆ ಕಡಿಮೆಯಾಗಬಹುದು ಎನ್ನುವುದನ್ನು ಒಪ್ಪಬಹುದು. ಆದರೆ ಅದೂ ಪೂರ್ಣ ಸತ್ಯವಲ್ಲ. ಯಾಕೆಂದರೆ, ನಿರ್ಭಯಾ ಪ್ರಕರಣದಲ್ಲಿ ಮಾತ್ರ ವಿಚಾರಣೆ ಅತ್ಯಂತ ವೇಗವಾಗಿ ನಡೆಯಿತು ಮತ್ತು ಕಠಿಣ ಶಿಕ್ಷೆಯನ್ನೂ ನೀಡಲಾಯಿತು. ನಿಜಕ್ಕೂ ನಮ್ಮ ನ್ಯಾಯ ವ್ಯವಸ್ಥೆ ಎಲ್ಲ ಅತ್ಯಾಚಾರ ಕೊಲೆ ಪ್ರಕರಣಗಳಲ್ಲೂ ಇಷ್ಟೊಂದು ಚುರುಕಾಗಿ ಕೆಲಸ ಮಾಡಿದೆಯೇ? ಎಂಬ ಪ್ರಶ್ನೆಗೂ ಉತ್ತರ ಕಂಡುಕೊಳ್ಳುವ ಸಮಯ ಇದಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆಯಾಗಿಯೇ ಬಿಟ್ಟಿತು ಎಂದು ಗಲ್ಲು ಶಿಕ್ಷೆಯ ಕುರಿತು ನಾವು ಸಂಭ್ರಮಿಸುವಾಗ ಇನ್ನೊಂದು ಅಂಶವನ್ನೂ ಗಮನಿಸಬೇಕು. ಈ ದೇಶದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಸಿಗಲೇ ಬೇಕೆಂದಿದ್ದರೆ, ಅತ್ಯಾಚಾರಗೈಯುವ ಆರೋಪಿಗಳ ಸಾಮಾಜಿಕ ಹಿನ್ನೆಲೆಗಳೂ ಮುಖ್ಯವಾಗುತ್ತವೆ. ಬಡವರು, ಅನಕ್ಷರಸ್ಥರು, ಜೋಪಡಿವಾಸಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಭಾಗವಹಿಸಿದ್ದಾರೆ ಎಂದಾಗ ನ್ಯಾಯಾಲಯ ಚುರುಕಾಗುತ್ತದೆ. ಬೇಕೆಂದರೆ, ನ್ಯಾಯಾಲಯದ ಪಾತ್ರವನ್ನು ಪೊಲೀಸರೇ ವಹಿಸಿ, ಅತ್ಯಾಚಾರಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ‘ಸಜ್ಜನ ಪೊಲೀಸ’ರಾಗಿ ಸಮಾಜದಿಂದ ಹೊಗಳಿಕೆಗಳನ್ನು ಸ್ವೀಕರಿಸುತ್ತಾರೆ. ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆಗೆ ಅತಿ ಶೀಘ್ರದಲ್ಲಿ ನ್ಯಾಯ ದೊರಕುವುದಕ್ಕೆ ಮುಖ್ಯ ಕಾರಣವೇ ಆರೋಪಿಗಳ ಹಿನ್ನೆಲೆ ಎನ್ನುವ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು.

ಇದೇ ಸಂದರ್ಭದಲ್ಲಿ ನಿರ್ಭಯಾ ಪ್ರಕರಣಕ್ಕಿಂತಲೂ ಭೀಕರವಾಗಿರುವ ಜಮ್ಮುವಿನ ಆಸೀಫಾ ಪ್ರಕರಣದಲ್ಲಿ ಯಾಕೆ ಆರೋಪಿಗಳಿಗೆ ಗಲ್ಲಾಗಲಿಲ್ಲ ಎನ್ನುವುದನ್ನು ಚರ್ಚಿಸಬೇಕಾಗಿದೆ. ಆಸೀಫಾ ಅಲ್ಲಿನ ಗುಡ್ಡಗಾಡು ಹಿನ್ನೆಲೆಯಿರುವ ಸಮುದಾಯದಿಂದ ಬಂದಾಕೆ. ಜೊತೆಗೆ ಅವಳು ಪುಟ್ಟ ಬಾಲಕಿ. ಆ ಮಗುವನ್ನು ಸುಮಾರು ನಾಲ್ಕು ದಿನಗಳ ಕಾಲ ಅತ್ಯಂತ ಬರ್ಬರವಾಗಿ ಅತ್ಯಾಚಾರಗೈದು, ಅಷ್ಟೇ ಭೀಕರವಾಗಿ ದುಷ್ಕರ್ಮಿಗಳು ಕೊಂದು ಎಸೆದಿದ್ದಾರೆ. ವಿಪರ್ಯಾಸವೆಂದರೆ, ಈ ಆರೋಪಿಗಳ ಬೆಂಬಲಕ್ಕೆ ಸರಕಾರವೇ ನಿಂತಿತು. ಬಂಧಿಸಿದ ಆರೋಪಿಗಳ ಬಿಡುಗಡೆಯಾಗಬೇಕು ಎಂದು ಬಿಜೆಪಿ ಮತ್ತು ಸಂಘಪರಿವಾರ ಬೀದಿಗಿಳಿಯಿತು. ಇವರೆಲ್ಲರೂ ಅಕ್ಷರಸ್ಥರು. ಸಮಾಜದಲ್ಲಿ ಮಾನವಂತರು, ಸಜ್ಜನರು, ಸಂಸ್ಕೃತಿ ರಕ್ಷಕರು ಎಂಬ ಬಿರುದಾಂಕಿತರು. ಆಸೀಫಾಳನ್ನು ಅತ್ಯಾಚಾರ ಗೈದ ದುಷ್ಕರ್ಮಿಗಳಷ್ಟೇ ಅವರನ್ನು ಬೆಂಬಲಿಸಿದವರೂ ಅತ್ಯಾಚಾರದಲ್ಲಿ ಪರೋಕ್ಷ ಭಾಗಿಗಳೇ ಆಗಿದ್ದಾರೆ ಮತ್ತು ಇವರೆಲ್ಲರೂ ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿ ಮೆರೆಯುತ್ತಿರುವಾಗಲೇ ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳು ಗಲ್ಲಿಗೇರುತ್ತಿದ್ದಾರೆ. ಕೊನೆಗೂ ನ್ಯಾಯ ಸಿಕ್ಕಿತು ಎಂದು ನಾವು ಸಂತೃಪ್ತಿ ಪಡುತ್ತಿದ್ದೇವೆ. ನಿರ್ಭಯಾಳನ್ನು ಅತ್ಯಾಚಾರಗೈದ ಬಸ್‌ನಲ್ಲಿ ಆಸೀಫಾಳನ್ನು ಅತ್ಯಾಚಾರಗೈದವರು ಇರುತ್ತಿದ್ದರೆ ಇಂದು ಪ್ರಕರಣದ ಸ್ಥಿತಿ ಏನಾಗಿ ಬಿಡುತ್ತಿತ್ತು ಎಂದು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

ಉತ್ತರ ಪ್ರದೇಶದ ರಾಜಕಾರಣಿ ಸೆಂಗಾರ್ ಮಾಡಿದ ಅತ್ಯಾಚಾರ ಪ್ರಕರಣವನ್ನು ತೆಗೆದುಕೊಳ್ಳೋಣ. ಸಂತ್ರಸ್ತೆ ಆತ್ಮಹತ್ಯೆಯ ಬೆದರಿಕೆ ಒಡ್ಡಿದ ಬಳಿಕವಷ್ಟೇ ಸೆಂಗಾರ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ದುರಂತವೆಂಬಂತೆ, ಈಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಅನುಭವಿಸಿ ಮೃತಪಟ್ಟರು. ಕಾರು ಅಪಘಾತದ ಮೂಲಕ ಸಂತ್ರಸ್ತೆಯನ್ನು ಕೊಲ್ಲುವ ಪ್ರಯತ್ನ ನಡೆಯಿತು. ಈ ಅಪಘಾತದಲ್ಲಿ ಈಕೆಯ ಕುಟುಂಬದ ಸದಸ್ಯರು ಮೃತಪಟ್ಟರು. ಸಂತ್ರಸ್ತೆ ಗಂಭೀರವಾಗಿ ಗಾಯಗೊಂಡರು. ಅತ್ಯಾಚಾರದ ಜೊತೆ ಜೊತೆಗೆ ಎರಡು ಕೊಲೆ ಪ್ರಕರಣ, ಕೊಲೆ ಯತ್ನ ಪ್ರಕರಣ ನಡೆದಿದ್ದರೂ ಈತನಿಗೆ ಸಿಕ್ಕಿದ್ದು ಜೀವಾವಾಧಿ ಶಿಕ್ಷೆ. ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಗಲ್ಲಿಗೇರಿಸುವ ಹೊತ್ತಿನಲ್ಲಿ, ಉನ್ನಾವೋ ಅತ್ಯಾಚಾರ ಆರೋಪಿ ಜೈಲಿನಲ್ಲಿ ನೆಮ್ಮದಿಯಿಂದ ಬದುಕುತ್ತಿರುವುದು ವಿಪರ್ಯಾಸವಲ್ಲವೇ?

ನಿರ್ಭಯಾ ಪ್ರಕರಣದಲ್ಲಿ ಜ.22ರಂದು ನಾಲ್ವರು ಆರೋಪಿಗಳನ್ನು ಕೊಂದು ಹಾಕುವುದರ ಮೂಲಕ ನಿರ್ಭಯಾರಿಗೆ ನ್ಯಾಯ ಸಿಕ್ಕಿರುವುದು ಸಮಾಧಾನದ ವಿಷಯ. ಆದರೆ ಈ ನ್ಯಾಯ, ಇನ್ನಷ್ಟು ಅತ್ಯಾಚಾರಗಳನ್ನು ಈ ದೇಶದಲ್ಲಿ ತಡೆದೀತು ಎಂದು ಭಾವಿಸಿದರೆ ನಾವು ನಿರಾಶರಾಗಬೇಕಾಗುತ್ತದೆ. ಯಾಕೆಂದರೆ ಅತ್ಯಾಚಾರಿ ಹೊರಗೆಲ್ಲೋ ಇಲ್ಲ. ಅವನು ನಮ್ಮೋಳಗೆ ಇದ್ದಾನೆ. ಕೆಲವೊಮ್ಮೆ ಕೆಲವೊಂದು ಅತ್ಯಾಚಾರಗಳನ್ನು ಸಮರ್ಥಿಸುತ್ತಾ, ಕೆಲವೊಮ್ಮೆ ಅವುಗಳನ್ನು ಖಂಡಿಸದೇ ವೌನವಾಗುತ್ತಾ, ಕೆಲವೊಮ್ಮೆ ಅತ್ಯಾಚಾರಗಳನ್ನು ಬೆಂಬಲಿಸುತ್ತಾ ನಿರ್ಭಯಾ ಅತ್ಯಾಚಾರಿಗಳನ್ನು ಆತ ಸಿದ್ಧಗೊಳಿಸಿದ್ದಾನೆ. ಈ ದೇಶದ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣಗಳನ್ನು ನೀಡದೆ, ಮಾರ್ಗದರ್ಶನ ನೀಡದೆ ಅವರಿಗೆ ಸಬ್ಸಿಡಿಯಲ್ಲಿ ಮದ್ಯಗಳನ್ನು ಕುಡಿಸಿ ತೆರಿಗೆ ಸಂಗ್ರಹಿಸುವ ಸರಕಾರವೂ ನಿರ್ಭಯಾ ಅತ್ಯಾಚಾರದಲ್ಲಿ ಭಾಗಿಯಾಗಿದೆ. ಸಾವಿರಾರು ಅತ್ಯಾಚಾರಿಗಳನ್ನು ರಕ್ಷಿಸಿರುವ ನಮ್ಮ ನ್ಯಾಯಾಲಯವೂ ಕೂಡ ನಿರ್ಭಯಾ ಪ್ರಕರಣದಲ್ಲಿ ಜೊತೆ ನೀಡಿದೆ. ಹೆಣ್ಣು ಮಕ್ಕಳನ್ನು ಪೊಲೀಸ್ ಠಾಣೆಯಲ್ಲಿ ಅತ್ಯಂತ ನಿಕೃಷ್ಟವಾಗಿ ಕಾಣುವ ಪೊಲೀಸರೂ ಪರೋಕ್ಷವಾಗಿ ಅದರಲ್ಲಿ ಕೈಜೋಡಿಸಿದ್ದಾರೆ. ಅವರೆಲ್ಲರೂ ಜ. 22ರಂದು ಗಲ್ಲಿಗೇರಬೇಕಾಗಿದೆ. ಹಾಗಾದಲ್ಲಿ ಮಾತ್ರ ಈ ದೇಶದಲ್ಲಿ ಅತ್ಯಾಚಾರಗಳು ಕಡಿಮೆಯಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News