ನಮ್ಮದೇ ನೆಲ, ನಮ್ಮದೇ ಜಲ ನಿಮ್ಮದೇನಡ್ಡಿ?

Update: 2020-01-09 04:29 GMT

ನಾ. ದಿವಾಕರ

ಪೌರತ್ವ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳನ್ನುದ್ದೇಶಿಸಿ, ‘‘ಓದುವ ಹೊತ್ತಿನಲ್ಲಿ ಇವೆಲ್ಲಾ ಬೇಕಿತ್ತೇ?’’ ಎಂದು ರಾಗಬದ್ಧವಾಗಿ ಹೇಳುವವರು ಒಮ್ಮೆ ಇತಿಹಾಸದ ಪುಟಗಳತ್ತ ಕಣ್ಣು ಹಾಯಿಸಿದರೆ ಒಳಿತಲ್ಲವೇ? ವಿದ್ಯಾರ್ಥಿಗಳು ದೇಶದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಆಡಳಿತಾರೂಢ ಪಕ್ಷಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುವುದು ಜಗತ್ತಿನ ಇತಿಹಾಸದಲ್ಲಿ ಅನೂಚಾನವಾಗಿ ನಡೆದುಕೊಂಡುಬಂದಿದೆ. ಭಾರತವೂ ಇದಕ್ಕೆ ಹೊರತೇನಲ್ಲ. ಭಾರತಕ್ಕೆ ಇದು ಹೊಸತೂ ಅಲ್ಲ. ಆದರೆ ಹೊಸತು ಎನಿಸುವುದು ಆಡಳಿತ ವ್ಯವಸ್ಥೆಯ ಧೋರಣೆ. ಪ್ರತಿರೋಧದ ದನಿಯನ್ನೇ ಸಹಿಸಿಕೊಳ್ಳದ ಆಡಳಿತ ವ್ಯವಸ್ಥೆಗೆ ವಿದ್ಯಾರ್ಥಿಗಳ ಏರು ದನಿ ಸಹಜವಾಗಿಯೇ ಅಪಥ್ಯವಾಗುತ್ತದೆ.

ವಿದ್ಯಾರ್ಥಿ ಜೀವನ ಮಾನವನ ಬದುಕಿನಲ್ಲಿ ಒಂದು ಪೀಳಿಗೆಯ ಹೆಜ್ಜೆ ಗುರುತುಗಳನ್ನು ನಿರ್ಧರಿಸುವ ಮಹತ್ತರ ಘಟ್ಟ. ವಿಶ್ವದ ಎಲ್ಲ ಅಕ್ಷರಸ್ಥ ದಾರ್ಶನಿಕರೂ ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಬದುಕಿನ ವಿವಿಧ ಆಯಾಮಗಳನ್ನು ಗ್ರಹಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನವನ್ನು ನೀಡಿ ನಿರ್ಗಮಿಸಿದ್ದಾರೆ, ಇನ್ನೂ ಕೆಲವರು ನಮ್ಮಾಡನೆ ಇದ್ದಾರೆ. ಅಕ್ಷರ ಜ್ಞಾನವಿಲ್ಲದೆಯೂ ದಾರ್ಶನಿಕರಾಗಿ ಹೊರಹೊಮ್ಮಿದ ಅನೇಕಾನೇಕ ಚೇತನಗಳು ಇದೇ ವಯೋಮಾನದಲ್ಲೇ ಜಗತ್ತನ್ನು ಅರಿತು ಬಾಳುವ ಮಾರ್ಗಗಳನ್ನು ಕಂಡುಕೊಂಡಿದ್ದೇ ಅಲ್ಲದೆ ತಮ್ಮ ಮುಂದಿನ ಸಂತತಿಗಳಿಗೆ ಬಳುವಳಿಯಾಗಿ ನೀಡಿ ನಿರ್ಗಮಿಸಿದ್ದಾರೆ. ಅಕ್ಷರ ವಿದ್ಯೆ ಮಾತ್ರವೇ ಮನುಷ್ಯನನ್ನು ಉನ್ನತ ಮಾನವನನ್ನಾಗಿ ಮಾಡುತ್ತದೆ ಎನ್ನುವ ಭ್ರಮೆಯಲ್ಲೇ ಶತಮಾನಗಳನ್ನು ಕಳೆದಿರುವ ಮನುಕುಲ ಇಂದು ಅಕ್ಷರ ವಿದ್ಯೆಯನ್ನು ಬಲ್ಲವರಲ್ಲೇ ಎಲ್ಲ ವಿಕೃತಿಗಳನ್ನೂ ಕಾಣುತ್ತಿರುವುದು ವಿಡಂಬನೆ ಎನಿಸಿದರೂ ಸತ್ಯ. ಬದುಕಲು ಅಕ್ಷರ ವಿದ್ಯೆ ಅಗತ್ಯ ಬಾಳಲು ಸಾಮಾನ್ಯ ಜ್ಞಾನವೇ ಸಾಕು. ಏಕೆಂದರೆ ಬದುಕು ಹಲವು ಅವಶ್ಯಕತೆಗಳನ್ನು ಪೂರೈಸಿಕೊಳ್ಳುವತ್ತ ನಮ್ಮ ಹೆಜ್ಜೆಗಳನ್ನು ಸೆಳೆದೊಯ್ಯುತ್ತದೆ. ಬಾಳು ಕೆಲವು ಮೌಲ್ಯಗಳನ್ನೇ ಆಧರಿಸಿ ಮುನ್ನಡೆದು, ಹಿಂಬದಿಯಲ್ಲಿರುವವರಿಗೆ ಮಾರ್ಗಸೂಚಿಯಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯುನ್ನತ ಅಕ್ಷರ ವಿದ್ಯೆಯ ಜಗತ್ತಿನಲ್ಲಿ ಬದುಕುತ್ತಿರುವ ಮನುಕುಲ, ಭಾರತದ ಮಟ್ಟಿಗೆ ಹೇಳುವುದಾದರೆ ಎಲ್ಲ ಮಾನವೀಯ ಮೌಲ್ಯಗಳನ್ನೂ ಕಳೆದುಕೊಂಡು ಬೆತ್ತಲಾಗಿಬಿಟ್ಟಿದೆ.

ಕಳೆದ ರವಿವಾರ, ಜನವರಿ 5 2020ರಂದು ದಿಲ್ಲಿಯಲ್ಲಿರುವ ವಿಶ್ವವಿಖ್ಯಾತ ಜೆಎನ್‌ಯು ಆವರಣದಲ್ಲಿ ನಡೆದಿರುವ ದಾಂಧಲೆ, ಗಲಭೆ ಮತ್ತು ವ್ಯವಸ್ಥಿತ ದಾಳಿ ಈ ಬೆತ್ತಲಾದ ಸಮಾಜದ ಮೇಲೆ ಮಸುಕಾಗಿದ್ದ ತೊಗಟೆಯನ್ನೂ ಕಳಚಿಹಾಕಿಬಿಟ್ಟಿದೆ. ನಾವು ಎಲ್ಲಿಂದ ಎಲ್ಲಿಗೆ ತಲುಪಿದ್ದೇವೆ. ವಿಕಸಿಸುವ ಹೂಗಳ ಸ್ವಚ್ಛಂದ ಉದ್ಯಾನದಲ್ಲಿ ಸ್ವಚ್ಛಂದವಾಗಿ ವಿಹರಿಸಬೇಕಾದ ಚಿಟ್ಟೆಗಳು ರಕ್ತದೋಕುಳಿಯಾಡುವುದನ್ನು ನೋಡುತ್ತಾ, ಯಾವುದೋ ಉನ್ಮಾದಕ್ಕೊಳಗಾಗಿ ಅಸ್ಮಿತೆಗಳ ಚೌಕಟ್ಟಿನಲ್ಲಿ ಸ್ವತಃ ಬಂಧಿತರಾಗಿ, ಹಿಂಸೆಯನ್ನು ಆರಾಧಿಸುವ ಹಂತಕ್ಕೆ ತಲುಪಿಬಿಟ್ಟಿದ್ದೇವೆ. ಹೀಗೆನಿಸುವುದಿಲ್ಲವೇ? ಜೆಎನ್‌ಯು ಆವರಣದಲ್ಲಿ ನಡೆದ ಘಟನೆಯನ್ನು ಸ್ವತಂತ್ರ ನೆಲೆಯಲ್ಲಿ ನಿಂತು ನೋಡಿದರೂ ಇದು ವ್ಯವಸ್ಥಿತ ದಾಳಿ ಎನ್ನುವುದು ಸ್ಪಷ್ಟವಾಗುತ್ತದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿನ ಅಭಿಪ್ರಾಯಗಳನ್ನು ನೋಡಿದಾಗ ‘‘ಇನ್ನೇನಾಗುತ್ತದೆ, ಇದು ಹೀಗಾಗಿದ್ದೇ ಒಳಿತಾಯಿತು, ಹೀಗೆಲ್ಲಾ ಮಾಡಿದರೆ ಮತ್ತೇನು ಮಾಡಲಾಗುತ್ತೇ...’’ ಎಂಬ ಧೋರಣೆಯನ್ನು ಹೊರಸೂಸುವ ವಿಕೃತ ಮನಸ್ಸುಗಳು ಇನ್ನೂ ಜೀವಂತವಾಗಿರುವುದನ್ನು ಗುರುತಿಸಬಹುದು. ಇಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಯಾರು ದಾಳಿ ಮಾಡಿದರು, ಹೇಗೆ ದಾಳಿ ಮಾಡಿದರು ಎನ್ನುವುದಕ್ಕಿಂತಲೂ ಹೆಚ್ಚಾಗಿ ಇಂತಹ ಹಿಂಸಾತ್ಮಕ ದಾಳಿ ಒಂದು ವಿಶ್ವವಿದ್ಯಾನಿಲಯದ ಆವರಣದಲ್ಲಿ ಯಾವುದೇ ಅಡೆತಡೆಯಿಲ್ಲದೆ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ದಾಂಧಲೆ ನಡೆಸಿದ ಮುಸುಕುಧಾರಿಗಳು ಯಾರು ಎಂದು ಹೇಳಬೇಕಿಲ್ಲ ಆದರೂ ನ್ಯಾಯಶಾಸ್ತ್ರಕ್ಕೆ ಮಾನ್ಯತೆ ನೀಡಿ ಆರೋಪಿಗಳನ್ನು ಅಪರಾಧಿಗಳನ್ನಾಗಿ ಮಾಡುವ ಸಾಹಸಕ್ಕೆ ಮುಂದಾಗದೆಯೇ, ಇಂತಹ ಹೃದಯವಿದ್ರಾವಕ ಕೃತ್ಯಗಳಿಗೆ ಏನು ಕಾರಣ ಎಂದು ವಸ್ತುನಿಷ್ಠವಾಗಿ ಯೋಚಿಸಿದಾಗ ಅಪರಾಧಿಗಳನ್ನು ಗುರುತಿಸುವುದು ಕಷ್ಟವಾಗಲಾರದು.

ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಗರಿಕ ಸಮಾಜದ ಹೊಣೆಗಾರಿಕೆ ಏನು ಎಂದೇ ಅರಿಯದ ಬೃಹತ್ ಪಡೆಯನ್ನು ಕಳೆದ ಮೂರು ನಾಲ್ಕು ದಶಕಗಳಲ್ಲಿ ಸೃಷ್ಟಿಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಕಾನೂನು ಪಾಲನೆಯನ್ನು ನಾಗರಿಕರೇ ಕೈಗೆತ್ತಿಕೊಳ್ಳುವ ವಿಕೃತ ಪರಂಪರೆಗೆ ಈ ದೇಶದ ಮತಾಂಧ ರಾಜಕಾರಣ, ದ್ವೇಷ ರಾಜಕಾರಣ, ಸಾಂಸ್ಕೃತಿಕ ರಾಜಕಾರಣ ಸುಭದ್ರ ಅಡಿಪಾಯ ನಿರ್ಮಿಸಿಬಿಟ್ಟಿದೆ. ಜೆಎನ್‌ಯುನಲ್ಲಿ ನಡೆದ ಘಟನೆಯನ್ನು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವಿನ ಕಲಹ ಎಂದು ಬಣ್ಣಿಸುವವರೂ ಇದನ್ನು ಗಮನಿಸಬೇಕಿದೆ. ಇದು ಎರಡು ಗುಂಪುಗಳ ನಡುವಿನ ಕಲಹ ಅಥವಾ ಸಂಘರ್ಷ ಅಲ್ಲ ಬದಲಾಗಿ ಪ್ರತಿರೋಧದ ದನಿಯನ್ನು ವ್ಯವಸ್ಥಿತವಾಗಿ ದಮನಿಸುವ ಹಿಂಸಾತ್ಮಕ ತಂತ್ರಗಾರಿಕೆ. ಇಂದು ಜೆಎನ್‌ಯುವಿನಲ್ಲಿ ನಡೆದದ್ದನ್ನೇ ಉತ್ತರ ಪ್ರದೇಶದ ದಾದ್ರಿಯಲ್ಲಿ ಕಂಡಿದ್ದೇವೆ. ಉನಾ ಗ್ರಾಮದಲ್ಲಿ ಕಂಡಿದ್ದೇವೆ, ರಾಜಸ್ಥಾನದಲ್ಲಿ ಕಂಡಿದ್ದೇವೆ, ಕಂಬಾಲಪಲ್ಲಿ, ಕರಂಚೇಡುವಿನಲ್ಲೂ ಕಂಡಿದ್ದೇವೆ, ಅಲ್ಲವೇ ? ಅಲ್ಲಿಯೂ ದಾಳಿ ನಡೆಸಿದ್ದು ಅನಧಿಕೃತ ಸಾಂಸ್ಕೃತಿಕ ಆರಕ್ಷಕರೇ, ನಾಗರಿಕ ಸಮಾಜದ ಒಂದು ಗುಂಪು. ಈ ಗುಂಪಿಗೆ ಪೊಲೀಸರಿಂದ ಅಂದೂ ಅಡ್ಡಿಯಾಗಲಿಲ್ಲ, ತೊಂದರೆಯಾಗಲಿಲ್ಲ, ಇಂದೂ ಆಗಲಿಲ್ಲ. ಲಾಠಿ ಬೀಸಬೇಕಾದವರು ಕೈಕಟ್ಟಿ ಕುಳಿತಾಗ ಕೈಕಟ್ಟಿ ಕುಳಿತಿರಬೇಕಾದವರು ಲಾಠಿ ಪ್ರಹಾರ ಮಾಡುತ್ತಾರೆ. ಈ ಪರಂಪರೆಗೆ ನಾಂದಿ ಹಾಡಿದವರಾರು? ಖಂಡಿತವಾಗಿಯೂ ಜೆಎನ್‌ಯು ಅಲ್ಲ.

ಇದನ್ನೇ ಮತ್ತೊಂದು ಮಜಲಿನಿಂದ ನೋಡೋಣ. ಪೌರತ್ವ ಕಾಯ್ದೆಯ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ದೇಶದ ಹಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಮುದಾಯ ಕೈಗಳಲ್ಲಿ ಆಯುಧ ಹಿಡಿದು ಪ್ರತಿಭಟಿಸಲಿಲ್ಲ. ಶಸ್ತ್ರಾಸ್ತ್ರ ಹಿಡಿದು, ಮುಖ ಮುಚ್ಚಿ ಕೊಂಡು, ಮುಸುಕುಧಾರಿಗಳಾಗಿ ದಂಡಧಾರಿಗಳಾಗಿ ಹಲ್ಲೆ ನಡೆಸಲಿಲ್ಲ. ತಮ್ಮ ಪ್ರತಿರೋಧವನ್ನು ಶಾಂತಿಯುತವಾಗಿ, ಘೋಷಣೆಗಳ ಮೂಲಕ, ಸಂದೇಶವಾಹಕ ಫಲಕಗಳ ಮೂಲಕ ವ್ಯಕ್ತಪಡಿಸಿದ್ದರು. ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು, ಅಲಿಗಡ ಮುಸ್ಲಿಮ್ ವಿವಿ ವಿದ್ಯಾರ್ಥಿಗಳು, ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಯಾರ ಅನುಮತಿಯನ್ನೂ ಪಡೆಯದೆ ವಿಶ್ವವಿದ್ಯಾನಿಲಯದ ಆವರಣದೊಳಕ್ಕೆ ನುಗ್ಗಿ ಲಾಠಿ ಪ್ರಹಾರ ನಡೆಸಿದ ಪೊಲೀಸ್ ಇಲಾಖೆ, ಮೊನ್ನೆ ಜೆಎನ್‌ಯುವಿನಲ್ಲಿ ದಾಂಧಲೆ ನಡೆದಾಗ ಅನುಮತಿಗಾಗಿ ಕಾದಿದ್ದಾದರೂ ಏಕೆ? ಎರಡು ಗಂಟೆಗಳ ಕಾಲ ಆವರಣದೊಳಗೆ ವಿದ್ಯಾರ್ಥಿಗಳ ಮೇಲೆ, ಉಪನ್ಯಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಮೌನ ಪ್ರೇಕ್ಷಕರಾಗಿದ್ದುದೇಕೆ? ಅಲ್ಲಿ ಬೇಡವಾದ ಅನುಮತಿ ಇಲ್ಲಿ ಅತ್ಯವಶ್ಯವಾಗಿಬಿಟ್ಟಿತೇ? ಇದು ಇಡೀ ಘಟನೆಯ ಸುತ್ತಲಿನ ವಿದ್ಯಮಾನಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ ಅಲ್ಲವೇ?

ಪೌರತ್ವ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳನ್ನುದ್ದೇಶಿಸಿ, ‘‘ಓದುವ ಹೊತ್ತಿನಲ್ಲಿ ಇವೆಲ್ಲಾ ಬೇಕಿತ್ತೇ?’’ ಎಂದು ರಾಗಬದ್ಧವಾಗಿ ಹೇಳುವವರು ಒಮ್ಮೆ ಇತಿಹಾಸದ ಪುಟಗಳತ್ತ ಕಣ್ಣು ಹಾಯಿಸಿದರೆ ಒಳಿತಲ್ಲವೇ? ವಿದ್ಯಾರ್ಥಿಗಳು ದೇಶದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಆಡಳಿತಾರೂಢ ಪಕ್ಷಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುವುದು ಜಗತ್ತಿನ ಇತಿಹಾಸದಲ್ಲಿ ಅನೂಚಾನವಾಗಿ ನಡೆದುಕೊಂಡುಬಂದಿದೆ. ಭಾರತವೂ ಇದಕ್ಕೆ ಹೊರತೇನಲ್ಲ. ಭಾರತಕ್ಕೆ ಇದು ಹೊಸತೂ ಅಲ್ಲ. ಆದರೆ ಹೊಸತು ಎನಿಸುವುದು ಆಡಳಿತ ವ್ಯವಸ್ಥೆಯ ಧೋರಣೆ. ಪ್ರತಿರೋಧದ ದನಿಯನ್ನೇ ಸಹಿಸಿಕೊಳ್ಳದ ಆಡಳಿತ ವ್ಯವಸ್ಥೆಗೆ ವಿದ್ಯಾರ್ಥಿಗಳ ಏರು ದನಿ ಸಹಜವಾಗಿಯೇ ಅಪಥ್ಯವಾಗುತ್ತದೆ. ಶುಲ್ಕ ಹೆಚ್ಚಳದ ವಿರುದ್ಧ, ಮೂಲ ಸೌಕರ್ಯಗಳಿಗಾಗಿ, ಉತ್ತಮ ಹಾಸ್ಟೆಲ್ ವ್ಯವಸ್ಥೆಗಾಗಿ, ವಿದ್ಯಾರ್ಥಿ ವೇತನದ ಕಡಿತದ ವಿರುದ್ಧ, ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಡುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆಳುವ ವರ್ಗಗಳ ದೃಷ್ಟಿಯಲ್ಲಿ ವಿಭಜಕರಂತೆ ಕಾಣುವುದೇ ವಿಕೃತ ದೃಷ್ಟಿಯ ಸಂಕೇತ ಅಲ್ಲವೇ? ಪ್ರತಿಭಟನಾನಿರತ ವಿದ್ಯಾರ್ಥಿಗಳು ಕಾನೂನು ಉಲ್ಲಂಘಿಸಿದರೆ ಶಿಕ್ಷಿಸಲು ದೇಶದ ಕಾನೂನು ವ್ಯವಸ್ಥೆ ಇದೆ. ಆದರೆ ಈ ಹಕ್ಕನ್ನು ವಿದ್ಯಾರ್ಥಿ ಸಂಘಟನೆಯೊಂದು ಕಸಿದುಕೊಳ್ಳುವುದಾದರೂ ಹೇಗೆ? ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಜರೆದು ಅವರ ಮೇಲೆ ಹಲ್ಲೆ ನಡೆಸುವ ಹಕ್ಕನ್ನು ವಿದ್ಯಾರ್ಥಿ ಸಂಘಟನೆಗೆ ನೀಡಿದವರಾರು? ಕನ್ಹಯ್ಯ ಕುಮಾರ್ ಘಟನೆಯ ನಂತರ ಈ ವಿಕೃತ ಮನೋಭಾವವನ್ನು ವಿದ್ಯಾರ್ಥಿ ಸಮುದಾಯದ ಮನದಲ್ಲಿ ಬಿತ್ತಿದವರು ಇಂದು ಶಿಕ್ಷಾರ್ಹ ಅಪರಾಧಿಗಳಾಗಿ ಕಾಣುವುದಿಲ್ಲವೇ? ಜೆಎನ್‌ಯು ಘಟನೆಯ ನೈಜ ಅಪರಾಧಿಗಳು ಯಾರೆಂದು ಇನ್ನೂ ಬಿಡಿಸಿ ಹೇಳಬೇಕೇ?

ಇಲ್ಲಿ ವಿದ್ಯಾರ್ಥಿ ಸಮೂಹ, ವಿದ್ಯಾರ್ಥಿ ಸಂಘಟನೆಗಳು, ಅವುಗಳ ಬೇಡಿಕೆ ಮತ್ತು ಹೋರಾಟಗಳು ಇವೆಲ್ಲವನ್ನೂ ಬದಿಗಿಟ್ಟು ನೋಡಿದಾಗ ಎದುರಾಗುವ ಸಮಸ್ಯೆ ಎಂದರೆ ಆಡಳಿತ ವ್ಯವಸ್ಥೆಯ ಧೋರಣೆ ಮತ್ತು ಪ್ರತಿರೋಧವನ್ನು ದಮನಿಸುವ ವಿಕೃತ ಮನಸ್ಸು. ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಹೋರಾಡುತ್ತಿರುವವರು ಆಗ್ರಹಿಸುತ್ತಿರುವುದೇನನ್ನು? ‘‘ನಾವು ಈ ದೇಶದ ಪ್ರಜೆಗಳು, ಇದು ನಮ್ಮ ನೆಲ, ನಮ್ಮ ಜಲ, ಇದು ನಮ್ಮ ಕರ್ಮಭೂಮಿ ಹಾಗಾಗಿ ನಮ್ಮನ್ನು ಹೊರಗಟ್ಟಬೇಡಿ’’ ಎಂದಲ್ಲವೇ? ಈ ಹೋರಾಟದ ದನಿಗಳನ್ನು ತುಕ್ಡೆ ತುಕ್ಡೆ ಗುಂಪು ಎಂದು ಹೀಗಳೆಯುತ್ತಾ ಅವಮಾನಿಸುವವರಿಗೆ ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇದೆಯೇ? ಯುದ್ಧ ವಿರೋಧಿ ಮನಸ್ಸುಗಳನ್ನು ದೇಶದ್ರೋಹಿಗಳಂತೆ ಕಾಣುವ ವಿಕೃತ ಮನೋಭಾವವನ್ನೇ ಇಲ್ಲಿಯೂ ಕಾಣಬಹುದಲ್ಲವೇ? ಈ ವಿಕೃತಿಯನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬಿತ್ತಿದವರು ಯಾರು ಎಂದು ಹೇಳಬೇಕಿಲ್ಲ. ದೇಶದ ಬಗ್ಗೆ ಅಭಿಮಾನ, ಪ್ರೀತ್ಯಾದರಗಳು ಇದ್ದವರು ಮಾತ್ರವೇ ದೇಶವನ್ನಾಳುವವರ ತಪ್ಪುಗಳನ್ನು ಸರಿಪಡಿಸಲು ಯತ್ನಿಸುತ್ತಾರೆ, ಆಡಳಿತ ವ್ಯವಸ್ಥೆಯ ವಾಮ ಮಾರ್ಗಗಳ ವಿರುದ್ಧ ಹೋರಾಡುತ್ತಾರೆ, ಜನಸಾಮಾನ್ಯರ ನಡುವೆ ಸಂಘರ್ಷ ಉಂಟು ಮಾಡುವ ಯಾವುದೇ ಚಿಂತನೆಯನ್ನು ವಿರೋಧಿಸುತ್ತಾರೆ. ದುರಂತ ಎಂದರೆ ಇಂಥವರನ್ನು ದೇಶದ್ರೋಹಿಗಳಂತೆ ಕಾಣುವಷ್ಟು ಮಟ್ಟಿಗೆ ಭಾರತೀಯ ಸಮಾಜ ಉನ್ಮತ್ತವಾಗಿಬಿಟ್ಟಿದೆ. ಈ ಉನ್ಮಾದಕ್ಕೆ ಒಳಗಾಗಲು ಒಪ್ಪದವರು ಉನ್ಮತ್ತರ ದಾಳಿಗೆ ಬಲಿಯಾಗಬೇಕಾಗುತ್ತದೆ. ದಾದ್ರಿಯಲ್ಲಾದುದೂ ಅದೇ, ಉನಾ ಘಟನೆಯಲ್ಲಾದುದೂ ಅದೇ, ಜೆಎನ್‌ಯುವಿನಲ್ಲಾದುದೂ ಅದೇ.

ಈ ಉನ್ಮತ್ತರನ್ನು ತಯಾರಿಸುವ ಕಾರ್ಖಾನೆಗಳನ್ನು ಈ ದೇಶದ ಪ್ರಜ್ಞಾವಂತ ಜನತೆ, ಯುವ ಜನತೆ, ವಿದ್ಯಾರ್ಥಿ ಸಮುದಾಯ ಗುರುತಿಸಲಾರಂಭಿಸಿದೆ. ಆಳುವವರ ವಿಭಜಕ ತಂತ್ರಗಳು ದಿನನಿತ್ಯ ಬಯಲಾಗುತ್ತಲೇ ಇವೆ. ಈ ಸಮಸ್ಯೆ ನಮ್ಮದಲ್ಲ ಎಂಬ ಧೋರಣೆಯಿಂದ ಪರದೆಯ ಹಿಂದೆ ನಿಂತು ನಾಟಕ ನೋಡುತ್ತಿದ್ದವರೂ ಇಂದು ಪರದೆಯನ್ನು ಸೀಳಿ ಮುನ್ನೆಲೆಗೆ ಬರುತ್ತಿದ್ದಾರೆ. ಸಮಸ್ಯೆ ನಮ್ಮ ನಿಮ್ಮದಲ್ಲ ಇದು ಈ ನೆಲದ ಸಮಸ್ಯೆ, ನಮ್ಮ ಸಂವಿಧಾನ ಎದುರಿಸುತ್ತಿರುವ ಸಮಸ್ಯೆ, ಪ್ರಜಾತಂತ್ರ ಮೌಲ್ಯಗಳು ಎದುರಿಸುತ್ತಿರುವ ಸಮಸ್ಯೆ ಎಂಬ ವಾಸ್ತವವನ್ನು ಜನಸಾಮಾನ್ಯರು ಗ್ರಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಈ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರೆ ಅದು ಭಾರತದ ಹೆಮ್ಮೆಯ ವಿಚಾರ. ವಿಶ್ವದ ಯಾವುದೇ ದೇಶದ ಇತಿಹಾಸವನ್ನು ಕೆದಕಿ ನೋಡಿದರೂ ಇದರ ಅಂತರಾಳವನ್ನು ಗ್ರಹಿಸಲು ಸಾಧ್ಯ. ಹಾಗೆಯೇ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾದಷ್ಟೂ ಆಳುವ ವರ್ಗಗಳು ವಿಚಲಿತರಾಗುವುದೂ ಜಾಗತಿಕ ವಿದ್ಯಮಾನವೇ. ಪೂರ್ವ ಯೂರೋಪ್ ಮತ್ತು ಸೋವಿಯತ್ ಸಂಘದಲ್ಲಿ, ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರಗಳ ವಿರುದ್ಧ ನಡೆದ ವಿದ್ಯಾರ್ಥಿ ಆಂದೋಲನಗಳಲ್ಲೂ ಇದನ್ನು ಕಂಡಿದ್ದೇವೆ. ಇದರ ತಪ್ಪುಒಪ್ಪುಗಳೇನೇ ಇದ್ದರೂ ವಿದ್ಯಾರ್ಥಿ ಆಂದೋಲನಗಳು ಆಳುವ ವರ್ಗಗಳ ತಳಪಾಯವೇ ಕುಸಿಯುವಂತೆ ಮಾಡಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.

ಇಂದು ಭಾರತದಲ್ಲೂ ಇಂತಹ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಪ್ರತಿಭಟನೆಯ ಅಂತರಾಳವನ್ನು ಗ್ರಹಿಸದೆ, ಪ್ರಜೆಗಳ ನಾಡಿಮಿಡಿತವನ್ನು ಗ್ರಹಿಸದೆ, ಪ್ರತಿರೋಧಕ್ಕೆ ಪ್ರತೀಕಾರವೇ ಮದ್ದು ಎಂದು ಯೋಚಿಸುವ ಅಧಿಕಾರಸ್ಥ ರಾಜಕಾರಣಕ್ಕೆ, ಭಾರತದ ಪ್ರಜೆಗಳಾದ ನಾವು, ಮನ್ನಣೆ ನೀಡಿದ್ದೇವೆ. ಈ ಅಧಿಕಾರಸ್ಥ ರಾಜಕಾರಣ ತನ್ನ ವಿಭಿನ್ನ ಬಾಹುಗಳನ್ನು ಚಾಚಿ ಈ ದೇಶದ ಅಂತಃಸತ್ವವನ್ನೇ ನಾಶಪಡಿಸಲು ಮುಂದಾಗುತ್ತಿದೆ. ಜಾತಿ, ಧರ್ಮ, ಭಾಷೆ ಮತ್ತು ವಿಭಿನ್ನ ಅಸ್ಮಿತೆಗಳ ಚೌಕಟ್ಟಿನಲ್ಲಿ ಈ ದೇಶದ ಜನ ಸಂಸ್ಕೃತಿಯನ್ನು ನಾಶಪಡಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಕಾರ್ಯಸೂಚಿ ಜಾರಿಯಲ್ಲಿದೆ. ಇದರ ವಿರುದ್ಧ ದನಿ ಎತ್ತುವವರು ದೇಶದ್ರೋಹಿಗಳಂತೆ ಕಾಣುತ್ತಾರೆ. ‘‘ದೇಶವೆಂದರೆ ಮಣ್ಣಲ್ಲವೋ ಮನುಜರು’’ ಎಂಬ ತೆಲುಗು ಕವಿಯ ಘೋಷ ವಾಕ್ಯ ಈ ಸಂದರ್ಭದಲ್ಲಿ ನೆನಪಾಗುತ್ತದೆ. ನಾವು ಯಾವ ದೇಶಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಪ್ರಶ್ನಿಸಿಕೊಳ್ಳುವ ಮುನ್ನ ಯಾರ ದೇಶಕ್ಕಾಗಿ ಹೋರಾಡಬೇಕು ಎಂದು ಪ್ರಶ್ನಿಸಿಕೊಳ್ಳಬೇಕಿದೆ ಅಲ್ಲವೇ? ಇದು ನಮ್ಮ ದೇಶ, ನಮ್ಮ ನೆಲ, ನಮ್ಮ ಸಂಪತ್ತು, ನಮ್ಮ ಜಲ, ನಮ್ಮ ಕರ್ಮಭೂಮಿ ಎಂದು ಘೋಷಿಸುವ ಸ್ವಸ್ಥ ಮನಸ್ಸುಗಳನ್ನು ದ್ವೇಷ ರಾಜಕಾರಣದ ಬಲಿಪೀಠಕ್ಕೆ ಕರೆದೊಯ್ಯಲಾಗುತ್ತಿದೆ ಎನಿಸುವುದಿಲ್ಲವೇ? ಜೆಎನ್‌ಯು ಮೊದಲ ಮೆಟ್ಟಿಲು ಎನಿಸುವುದಿಲ್ಲವೇ? ಎನಿಸಲೇಬೇಕು. ನಾವು, ಭಾರತದ ಪ್ರಜೆಗಳಾದ ನಾವು, ಇದನ್ನು ವಿರೋಧಿಸಲೇಬೇಕು.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News