ಮುಂಬೈ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ್ ’ಘೋಷಣಾ ಫಲಕ ಹಿಡಿದಿದ್ದ ಮಹಿಳೆಗೆ ಶಿವಸೇನೆ ಬೆಂಬಲ

Update: 2020-01-09 15:24 GMT

ಮುಂಬೈ,ಜ.9: ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಿಂಸಾತ್ಮಕ ದಾಳಿಯನ್ನು ವಿರೋಧಿಸಿ ಇಲ್ಲಿಯ ಗೇಟ್ ವೇ ಆಫ್ ಇಂಡಿಯಾ ಬಳಿ ನಡೆದಿದ್ದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ್ (ಕಾಶ್ಮೀರವನ್ನು ಮುಕ್ತಗೊಳಿಸಿ)’ ಎಂಬ ಘೋಷಣಾ ಫಲಕವನ್ನು ಪ್ರದರ್ಶಿಸಿದ್ದ ಮೆಹಕ್ ಮಿರ್ಝಾ ಪ್ರಭು ಅವರನ್ನು ಶಿವಸೇನೆಯು ಬೆಂಬಲಿಸಿದೆ.

‘ಮುಂಬೈನ ಮರಾಠಿ ಮಹಿಳೆಗೆ ಕಾಶ್ಮೀರಿಗಳ ನೋವು ಅರ್ಥವಾಗುತ್ತದೆ. ಇದು ದೇಶದ್ರೋಹ ಎಂದು ಪ್ರತಿಪಕ್ಷವು ಭಾವಿಸಿದೆ. ಬೇಜವಾಬ್ದಾರಿಗೆ ಇದಕ್ಕಿಂತ ಕೊಳಕು ಉದಾಹರಣೆ ಬೇರೊಂದಿರಲು ಸಾಧ್ಯವಿಲ್ಲ. ಜನರು ತಮ್ಮ ಭಾವನೆಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದನ್ನು ದೇಶದ್ರೋಹ ಎಂದು ಪ್ರತಿಪಕ್ಷ ಮತ್ತು ಅದರ ಬೆಂಬಲಿಗರು ಭಾವಿಸುತ್ತಿದ್ದರೆ ಅದು ಅವರಿಗೆ(ಪ್ರತಿಪಕ್ಷ) ಮತ್ತು ದೇಶಕ್ಕೆ ಒಳ್ಳೆಯದಲ್ಲ. ಮಹಿಳೆಯ ಸ್ಪಷ್ಟೀಕರಣದ ಬಳಿಕ ಪ್ರತಿಪಕ್ಷಗಳಿಗೆ ಮುಖಭಂಗವಾಗಿದೆ ’ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿಯ ಸಂಪಾದಕೀಯ ಲೇಖನವು ಹೇಳಿದೆ.

‘ಆಕ್ಯುಪೈ ಗೇಟ್ ವೇ’ ಹೆಸರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪ್ರಭು ಸೇರಿದಂತೆ ನೂರಾರು ಮುಂಬೈ ನಿವಾಸಿಗಳು ಭಾಗವಹಿಸಿದ್ದರು. ಪ್ರಭು ಪ್ರದರ್ಶಿಸಿದ್ದ ಘೋಷಣಾ ಫಲಕ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕರ್ನಾಟಕದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರನ್ನು ಕೆರಳಿಸಿತ್ತು. ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ತನ್ನ ಮೂಗಿನಡಿಗೇ ನಡೆದಿದ್ದ ಇಂತಹ ಭಾರತ ವಿರೋಧಿ ಪ್ರಚಾರವನ್ನು ಸಹಿಸಿಕೊಂಡಿದ್ದು ಹೇಗೆ ಎಂದು ಪಡ್ನವೀಸ್ ಪ್ರಶ್ನಿಸಿದ್ದರು.

ಇದಕ್ಕೆ ಸಂಪಾದಕೀಯದಲ್ಲಿ ಪ್ರತಿಕ್ರಿಯಿಸಿರುವ ಶಿವಸೇನೆಯು,ಜುಜುಬಿ ಆರೋಪವನ್ನು ಮಾಡುವ ಮೂಲಕ ಪ್ರತಿಪಕ್ಷ ನಾಯಕರು ತಮ್ಮನ್ನು ತಾವೇ ಅಪಹಾಸ್ಯ ಮಾಡಿಕೊಂಡಿದ್ದಾರೆ ಎಂದಿದೆ.

ತಾನು ಪ್ರದರ್ಶಿಸಿದ್ದ ಘೋಷಣಾ ಫಲಕಕ್ಕೆ ವಿರೋಧ ವ್ಯಕ್ತವಾದ ಬಳಿಕ ಪ್ರಭು ಮಂಗಳವಾರ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು. ಜೆಎನ್‌ಯು ಹಿಂಸಾಚಾರವನ್ನು ವಿರೋಧಿಸಲು ಮಾತ್ರವಲ್ಲ,ಸಂವಿಧಾನವು ಖಾತರಿಪಡಿಸಿರುವ ಹಕ್ಕುಗಳ ರಕ್ಷಣೆ ಕುರಿತು ಮಾತನಾಡಲೂ ಪ್ರತಿಭಟನಾಕಾರರು ಗೇಟ್ ವೇ ಬಳಿ ಸಮಾವೇಶಗೊಂಡಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ ಪ್ರಭು,‘ಕಳೆದ ಐದು ತಿಂಗಳುಗಳಿಂದಲೂ ಕಾಶ್ಮೀರದಲ್ಲಿ ಅಂತರ್ಜಾಲ ಸ್ಥಗಿತಗೊಂಡಿರುವುದರಿಂದ ಸದ್ಯ ಕಾಶ್ಮೀರಿಗಳು ಹಕ್ಕುವಂಚಿತರಾಗಿದ್ದಾರೆ. ಕಾಶ್ಮೀರಿಗಳೂ ನಮ್ಮಂತೆ ಭಾರತೀಯರು ಎಂದು ನಾವು ಭಾವಿಸುತ್ತಿದ್ದರೆ ಅದಕ್ಕೆ ತಕ್ಕಂತೆ ಅವರನ್ನು ನಡೆಸಿಕೊಳ್ಳುವುದೂ ಅಗತ್ಯವಾಗಿದೆ. ನಮಗೆ ದೊರೆಯುತ್ತಿರುವ ಮೂಲಭೂತ ಹಕ್ಕುಗಳು ಅವರಿಗೂ ದೊರೆಯಬೇಕು. ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರವಿರಬೇಕು. ಇದಕ್ಕಾಗಿಯೇ ನಾನು ಘೋಷಣಾ ಫಲಕವನ್ನು ಪ್ರದರ್ಶಿಸಿದ್ದೆ ’ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News