ಭಾರತದ ಆರ್ಥಿಕ ಹಿಂಜರಿತ 2019ರಲ್ಲಿ ಕಾರುಗಳ ಮಾರಾಟದಲ್ಲಿ ದಾಖಲೆಯ ಕುಸಿತಕ್ಕೆ ಕಾರಣ

Update: 2020-01-11 17:33 GMT
file photo

ಹೊಸದಿಲ್ಲಿ,ಜ.11: ದೇಶವನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತ ಆಟೊಮೊಬೈಲ್ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದೆ. 2018ರಲ್ಲಿ 2.24 ಮಿಲಿಯನ್‌ನಷ್ಟಿದ್ದ ಪ್ರಯಾಣಿಕ ಕಾರುಗಳ ಮಾರಾಟ ಸಂಖ್ಯೆ 2019ರಲ್ಲಿ 1.81 ಮಿ.ಗೆ ಕುಸಿದಿದೆ. ಆದರೆ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದರಿಂದ ಎಸ್‌ಯುವಿಗಳ ಮಾರಾಟ ಶೇ.5ರಷ್ಟು ಹೆಚ್ಚಳಗೊಂಡಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್(ಎಸ್‌ಐಎಎಂ) ಹೇಳಿದೆ.

 ಆರ್ಥಿಕ ಮಂದಗತಿಯಿಂದಾಗಿ ದುಬಾರಿ ವಸ್ತುಗಳ ಮೇಲೆ ವೆಚ್ಚ ಮಾಡಲು ಬಳಕೆದಾರರು ಹಿಂದೇಟು ಹೊಡೆದಿದ್ದರಿಂದ ಕಳೆದ ವರ್ಷ ಭಾರತದಲ್ಲಿ ಕಾರು ಮಾರಾಟ ದಾಖಲೆಯ ಶೇ.19ರಷ್ಟು ಕುಸಿದಿದೆ ಮತ್ತು ಎಪ್ರಿಲ್ 2020ರಿಂದ ಆರಂಭಗೊಳ್ಳುವ ಹಣಕಾಸು ವರ್ಷದಲ್ಲಿಯೂ ಬೇಡಿಕೆಯಲ್ಲಿ ಸುಧಾರಣೆಯಾಗುವ ಸಾಧ್ಯತೆಯಿಲ್ಲ. ಜೊತೆಗೆ 2020,ಎ.1ರಿಂದ ಕಟ್ಟುನಿಟ್ಟಿನ ಮಾಲಿನ್ಯ ನಿಯಂತ್ರಣ ನಿಯಮಗಳು ಜಾರಿಗೊಳ್ಳಲಿದ್ದು ಇದು ಕಾರುಗಳ ಬೆಲೆಗಳನ್ನು ಶೇ.8ರಿಂದ ಶೇ.10ರಷ್ಟು ಹೆಚ್ಚಿಸಲಿದೆ. ಇದು ಕೂಡ ಕಾರುಗಳ ಬೇಡಿಕೆಯನ್ನು ಇನ್ನಷ್ಟು ಕುಗ್ಗಿಸಲಿದೆ ಎಂದು ಎಸ್‌ಐಎಎಂ ಅಧ್ಯಕ್ಷ ರಾಜನ್ ವಧೇರಾ ತಿಳಿಸಿದ್ದಾರೆ.

ಗ್ರಾಮೀಣ ಆರ್ಥಿಕತೆಯ ಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗಿರುವ ದ್ವಿಚಕ್ರ ವಾಹನಗಳ ಮಾರಾಟವೂ 2019ರಲ್ಲಿ ಶೇ.14ರಷ್ಟು ಕುಸಿದೆ. ಒಟ್ಟಾರೆ ಆರ್ಥಿಕ ಬೆಳವಣಿಗೆಯ ಮಾನದಂಡಗಳಲ್ಲೊಂದಾದ ಟ್ರಕ್‌ಗಳ ಮಾರಾಟವೂ ವರದಿ ವರ್ಷದಲ್ಲಿ ಶೇ.15ರಷ್ಟು ಕುಸಿತವನ್ನು ದಾಖಲಿಸಿದೆ. ಎಸ್‌ಐಎಎಂ 1997ರಲ್ಲಿ ದಾಖಲೆಗಳನ್ನು ನಿರ್ವಹಿಸಲು ಆರಂಭಿಸಿದಾಗಿನಿಂದ ಈ ಕುಸಿತಗಳು ಅತ್ಯಂತ ಕೆಟ್ಟದ್ದಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News