ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ: ಸೋನಿಯಾ ಗಾಂಧಿ

Update: 2020-01-11 18:07 GMT

ಹೊಸದಿಲ್ಲಿ, ಜ. 11: ಹೊಸದಿಲ್ಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಈ ಕಾಯ್ದೆ ತಾರತಮ್ಯದಿಂದ ಕೂಡಿದೆ ಹಾಗೂ ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಉದ್ದೇಶ ಹೊಂದಿದೆ ಎಂದಿದ್ದಾರೆ.

''ಪೌರತ್ವ ತಿದ್ದುಪಡಿ ಕಾಯ್ದೆ ವಿಭಜನೀಯ ಹಾಗೂ ತಾರತಮ್ಯದ ಕಾಯ್ದೆ. ಕಾನೂನಿನ ದುರುದ್ದೇಶ ಪ್ರತಿಯೊಬ್ಬ ದೇಶಭಕ್ತ, ಸಹಿಷ್ಣು ಹಾಗೂ ಜಾತ್ಯತೀತ ಭಾರತೀಯನಿಗೆ ಸ್ಪಷ್ಟವಾಗಿದೆ. ಇದು ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತದೆ'' ಎಂದು ಅವರು ಹೇಳಿದ್ದಾರೆ.

 ಈ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹೋರಾಟದ ಬಗ್ಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸಿದರೆ ಆಗುವ ಗಂಭೀರ ಹಾನಿಯ ಬಗ್ಗೆ ಸಾವಿರಾರು ಯುವಕರು ಹಾಗೂ ಮಹಿಳೆಯರು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತಿಳಿದಿದೆ ಎಂದರು.

ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ. ಅದು ಆ ರಾಜ್ಯಗಳನ್ನು ಮುಖ್ಯವಾಗಿ ಉತ್ತರಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಹೊಸದಿಲ್ಲಿಯನ್ನು ಪೊಲೀಸ್ ರಾಜ್ಯಗಳನ್ನಾಗಿ ಮಾಡಿದೆ ಎಂದು ಅವರು ತಿಳಿಸಿದರು.

ಉತ್ತರಪ್ರದೇಶದ ಹಲವು ಪಟ್ಟಣಗಳು, ಜಾಮಿಯಾ ಮಿಲ್ಲಿಯಾ, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಅಲಹಾಬಾದ್ ವಿಶ್ವವಿದ್ಯಾನಿಲಯ, ದಿಲ್ಲಿ ವಿಶ್ವವಿದ್ಯಾನಿಲಯ, ಗುಜರಾತ್ ವಿಶ್ವವಿದ್ಯಾನಿಲಯ, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್‌ನಲ್ಲಿ ಪೊಲೀಸರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಪೊಲೀಸರನ್ನು ಬಳಸಿರುವುದು ಆತಂಕ ಉಂಟು ಮಾಡಿದ ಎಂದು ಸೋನಿಯಾ ಗಾಂಧಿ ಹೇಳಿದರು.

ಸಿಎಎ ಪ್ರತಿಭಟನೆಗೆ ಸಂಬಂಧಿಸಿದ ಘಟನೆಗಳ ತನಿಖೆಗೆ ಅತ್ಯುಚ್ಚ ಅಧಿಕಾರ ಹೊಂದಿರುವ ಆಯೋಗ ರೂಪಿಸುವಂತೆ ನಾವು ಆಗ್ರಹಿಸಿದ್ದೇವೆ. ಅಲ್ಲದೆ, ಸಂತ್ರಸ್ತ ಜನರಿಗೆ ನ್ಯಾಯ ನೀಡಲಿದ್ದೇವೆ ಎಂದು ಸೋನಿಯಾ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News