ಮುಂಬೈ ಶಾಲೆಗಳಲ್ಲಿ ಸಿಎಎ ಕುರಿತು ಭಾಷಣ: ಆದಿತ್ಯ ಠಾಕ್ರೆಯಿಂದ ಬಿಜೆಪಿಗೆ ತರಾಟೆ

Update: 2020-01-11 18:23 GMT

ಮುಂಬೈ, ಜ. 11: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಶಾಲೆಗಳಲ್ಲಿ ಬಿಜೆಪಿ ನಡೆಸುತ್ತಿರುವ ಪ್ರಚಾರ ಅಭಿಯಾನವನ್ನು ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಶನಿವಾರ ಪ್ರಶ್ನಿಸಿದ್ದಾರೆ.

ದೇಶಾದ್ಯಂತದ ಪ್ರತಿಭಟನೆಯ ಕಿಡಿ ಹಚ್ಚಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಹರಡಲು ಮುಂಬೈಯ ಮಾತುಂಗ ಪ್ರದೇಶದಲ್ಲಿರುವ ಶಾಲೆಗೆ ಬಿಜೆಪಿಯ ಕೆಲವು ನಾಯಕರು ಭೇಟಿ ನೀಡಿದ ದಿನದ ಬಳಿಕ ಆದಿತ್ಯ ಠಾಕ್ರೆ ಈ ಟ್ವೀಟ್ ಮಾಡಿದ್ದಾರೆ.

 ಭಿವನಿ ಸ್ಟ್ರೀಟ್‌ನಲ್ಲಿರುವ ದಯಾನಂದ ಬಾಲಕ್ ವಿದ್ಯಾಲಯದಲ್ಲಿ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 10ರಿಂದ 11 ಗಂಟೆ ವರೆಗೆ ಬಿಜೆಪಿ ಭಾಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಗಳಲ್ಲಿ ಕಾಯ್ದೆ ಬಗ್ಗೆ ಪ್ರಚಾರ ನಡೆಸುವುದು ಹಾಸ್ಯಾಸ್ಪದ. ಯಾವುದೇ ಕೆಟ್ಟ ಉದ್ದೇಶ ಇಲ್ಲದಿದ್ದರೆ, ಈ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಇಂತಹ ರಾಜಕೀಯ ಪ್ರಚಾರದ ಅಗತ್ಯವಾದರೂ ಏನು ? ಶಾಲೆಗಳನ್ನು ರಾಜಕೀಕರಣಗೊಳಿಸುವುದನ್ನು ಸಹಿಸಲು ಸಾಧ್ಯವಿಲ್ಲ. ರಾಜಕಾರಣಿಗಳು ಶಾಲೆಗಳಲ್ಲಿ ಮಾತನಾಡಬೇಕೆಂದರೆ ಬಯಸಿದರೆ, ಲಿಂಗ ಸಮಾನತೆ, ಹೆಲ್ಮೆಟ್, ಸ್ವಚ್ಛತೆ ಬಗ್ಗೆ ಮಾತನಾಡಲಿ ಎಂದರು.

ಲೋಕಸಭೆಯಲ್ಲಿ ಆದಿತ್ಯ ಠಾಕ್ರೆ ಅವರ ಶಿವಸೇನೆ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿತ್ತು. ಆದರೆ, ಕಳೆದ ಡಿಸಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಈ ಕಾಯ್ದೆ ಪರವಾಗಿ ಮತ ಹಾಕಿರುವುದರಿಂದ ದೂರ ಉಳಿಯುವ ಮೂಲಕ ರಾಜ್ಯ ಸಭೆಯಲ್ಲಿ ಯು ಟರ್ನ್ ಪಡೆದುಕೊಂಡಿತ್ತು.

ಠಾಕ್ರೆ ಹಾಗೂ ಇತರರು ಕಾಯ್ದೆ ಕುರಿತು ‘ಕೊಳಕು ರಾಜಕೀಯ ಆಟ ಆಡುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಮಾಧವ ಭಂಡಾರಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News