×
Ad

'ಸಂಸತ್ ದಾಳಿಗೆ ಸಂಚು ಹೂಡಿದ್ದ ವ್ಯಕ್ತಿ' ಎಂದು ಅಫ್ಝಲ್ ಗುರು ಆರೋಪಿಸಿದ್ದ ಡಿವೈಎಸ್ಪಿ ಉಗ್ರರ ಜೊತೆ ಪತ್ತೆ!

Update: 2020-01-12 16:37 IST

ಹೊಸದಿಲ್ಲಿ: ತನ್ನ ವಾಹನದಲ್ಲಿ ಉಗ್ರರೊಂದಿಗೆ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಂಧಿತನಾದ ಡಿವೈಎಸ್ಪಿ ದವೀಂದರ್ ಸಿಂಗ್ ಹೆಸರನ್ನು 2001ರ ಸಂಸತ್ ದಾಳಿ ಪ್ರಕರಣದ ರೂವಾರಿ ಅಫ್ಝಲ್ ಗುರು ತಾನು ಸಲ್ಲಿಸಿದ್ದ ಅಫಿಡವಿಟ್‍ ನಲ್ಲಿ ಉಲ್ಲೇಖಿಸಿದ್ದ ಎಂದು ತಿಳಿದುಬಂದಿದೆ. ಈ ಪೊಲೀಸ್ ಅಧಿಕಾರಿಯೇ ತನ್ನನ್ನು ಸಂಸತ್ ದಾಳಿಗೆ ಉಗ್ರರನ್ನು ಕರೆದೊಯ್ಯಲು ಬಲವಂತ ಪಡಿಸಿದ್ದ ಎಂದು ಅಫ್ಝಲ್ ಆಗ ತಿಳಿಸಿದ್ದ ಎಂದು thewire.in ವರದಿ ತಿಳಿಸಿದೆ.

ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ದವೀಂದರ್ ಸಿಂಗ್ ವಾಹನದಲ್ಲಿ ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ನವೀದ್ ಬಾಬು ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಅಲ್ತಾಫ್ ಇದ್ದ.

ದವೀಂದರ್ ಸಿಂಗ್ ಗೆ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಕೂಡ ಪ್ರದಾನ ಮಾಡಲಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. "ಸಂಸತ್ ಮೇಲಿನ ದಾಳಿ ಪ್ರಕರಣದ ಆರೋಪಿಯೊಬ್ಬನ ಜತೆಗೆ ದಿಲ್ಲಿಗೆ ತೆರಳಿ ಅಲ್ಲಿ ಆತನಿಗೆ ವಸತಿ ಏರ್ಪಾಟು ಮಾಡುವಂತೆ ದವೀಂದರ್ ಸಿಂಗ್ ತಿಳಿಸಿದ್ದರು" ಎಂದು 2013ರಲ್ಲಿ ಅಫ್ಝಲ್ ಗುರು ಬರೆದಿದ್ದ ಪತ್ರವೊಂದರಲ್ಲಿ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.

ಶೋಪಿಯಾನ್ ಪ್ರದೇಶದ ಮೂಲಕ ಕಾಶ್ಮೀರದ ಹೊರಗೆ ದವೀಂದರ್ ಸಿಂಗ್ ಉಗ್ರರನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಂ ಎಂಬಲ್ಲಿನ ಮೀರ್ ಬಜಾರ್ ಪ್ರದೇಶದಲ್ಲಿ ಕಾರನ್ನು ತಡೆದ ದಕ್ಷಿಣ ಕಾಶ್ಮೀರದ ಡಿಐಜಿ ಅತುಲ್ ಗೋಯೆಲ್ ನೇತೃತ್ವದ ತಂಡಕ್ಕೆ ಕಾರಿನಲ್ಲಿ ಎರಡು ಪಿಸ್ತೂಲುಗಳು ಹಾಗೂ ಒಂದು ಎಕೆ ರೈಫಲ್ ಕೂಡ ದೊರಕಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್, "2001ರಲ್ಲಿ ಸಂಸತ್ ದಾಳಿ ನಡೆಸಿದ್ದ ಉಗ್ರರಿಗೆ ಸಹಾಯ ಮಾಡುವಂತೆ ದವೀಂದರ್ ಸಿಂಗ್ ಬಲವಂತಪಡಿಸಿದ್ದರು ಎಂದು ಅಫ್ಝಲ್ ಗುರು ಆರೋಪಿಸಿದ್ದ, ಇದೀಗ ಆತ ಉಗ್ರರ ಜೊತೆ ಸಿಕ್ಕಿಬಿದ್ದಿದ್ದಾನೆ. ಹಾಗಾದರೆ ಆತನನ್ನು ಆಗ ರಕ್ಷಿಸಲಾಗಿತ್ತು. ಯಾಕೆ? ದೊಡ್ಡ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News