ಇರಾನ್‌ನಲ್ಲಿ ಬ್ರಿಟನ್ ರಾಯಭಾರಿ ಬಂಧನ: ಸರಕಾರದ ವಿರುದ್ಧ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪ

Update: 2020-01-12 17:20 GMT

ಲಂಡನ್, ಜ. 12: ಇರಾನ್‌ನಲ್ಲಿ ಜನರು ಪ್ರತಿಭಟನೆ ನಡೆಸುವಂತೆ ‘ಪ್ರಚೋದಿಸಿದ’ ಆರೋಪದಲ್ಲಿ ಬ್ರಿಟನ್ ರಾಯಭಾರಿ ರಾಬ್ ಮೆಕೇರ್‌ರನ್ನು ಇರಾನ್ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ ಎಂದು ಬ್ರಿಟನ್ ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಹೇಳಿದ್ದಾರೆ.

‘‘ಯಾವುದೇ ಆಧಾರ ಅಥವಾ ವಿವರಣೆಯಿಲ್ಲದೆ ನಮ್ಮ ರಾಯಭಾರಿಯನ್ನು ಬಂಧಿಸಿರುವುದು ಅಂತರ್‌ರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ’’ ಎಂದು ಹೇಳಿಕೆಯೊಂದರಲ್ಲಿ ರಾಬ್ ಹೇಳಿದರು.

‘‘ಇಂದು ಸಂಧಿಗ್ಧತೆಯ ಸಮಯ. ನೀವು ಎಲ್ಲರಿಂದಲೂ ತಿರಸ್ಕರಿಸಲ್ಪಡುವ ಸ್ಥಿತಿಯತ್ತ ಸಾಗುತ್ತೀರೋ ಅಥವಾ ಉದ್ವಿಗ್ನತೆ ಶಮನ ಮಾಡುವ ಕ್ರಮಗಳನ್ನು ತೆಗೆದುಕೊಂಡು ರಾಜತಾಂತ್ರಿಕತೆಯ ದಾರಿಯಲ್ಲಿ ಮುನ್ನಡೆಯುತ್ತೀರೋ ಎನ್ನುವುದನ್ನು ನೀವು ಆರಿಸಬೇಕಾದ ಸಮಯ’’ ಎಂದು ಬ್ರಿಟನ್ ವಿದೇಶ ಕಾರ್ಯದರ್ಶಿಯು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಯುಕ್ರೇನ್ ಏರ್‌ಲೈನ್ಸ್ ವಿಮಾನವನ್ನು ಹೊಡೆದುರುಳಿಸಿದ ಘಟನೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಇರಾನ್ ವಿದ್ಯಾರ್ಥಿಗಳನ್ನು ಬ್ರಿಟನ್ ರಾಯಭಾರಿ ಪ್ರಚೋದಿಸಿದ್ದಾರೆ ಎಂಬ ಆರೋಪದಲ್ಲಿ ಮೆಕೇರ್‌ರನ್ನು ಬಂಧಿಸಲಾಗಿದೆ ಎಂದು ‘ಡೇಲಿ ಮೇಲ್’ ವರದಿ ಮಾಡಿದೆ.

ಅವರನ್ನು ಒಂದು ಗಂಟೆಯ ಬಳಿಕ ಬಿಡುಗಡೆಗೊಳಿಸಲಾಯಿತು ಎಂದು ಅದು ಹೇಳಿದೆ.

ಜನರ ಪ್ರತಿಭಟನೆ ಹತ್ತಿಕ್ಕಬೇಡಿ: ಟ್ರಂಪ್ ಎಚ್ಚರಿಕೆ

ಯುಕ್ರೇನ್ ಏರ್‌ಲೈನ್ಸ್ ವಿಮಾನವೊಂದನ್ನು ತಪ್ಪಾಗಿ ಹೊಡೆದುರುಳಿಸಿರುವುದನ್ನು ಇರಾನ್ ಒಪ್ಪಿಕೊಂಡ ಬಳಿಕ, ಆ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

‘‘ಇರಾನ್ ಜನತೆ ನಡೆಸುತ್ತಿರುವ ಪ್ರತಿಭಟನೆಗಳನ್ನು ವೀಕ್ಷಿಸಲು ಹಾಗೂ ವಾಸ್ತವಾಂಶಗಳನ್ನು ಸ್ಥಳದಿಂದ ವರದಿ ಮಾಡಲು ಮಾನವಹಕ್ಕು ಗುಂಪುಗಳಿಗೆ ಇರಾನ್ ಸರಕಾರ ಅವಕಾಶ ನೀಡಬೇಕು’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಬುಧವಾರ ಇರಾನ್ ರಾಜಧಾನಿ ಟೆಹರಾನ್‌ನಿಂದ ಯುಕ್ರೇನ್ ರಾಜಧಾನಿ ಕೀವ್‌ಗೆ ಹಾರುತ್ತಿದ್ದ ವಿಮಾನವನ್ನು ವೈರಿ ಕ್ಷಿಪಣಿ ಎಂದು ತಪ್ಪಾಗಿ ಭಾವಿಸಿದ ಇರಾನ್ ಸೇನೆಯು ಕಿರು ವ್ಯಾಪ್ತಿಯ ಕ್ಷಿಪಣಿಯೊಂದರ ಮೂಲಕ ಅದನ್ನು ಹೊಡೆದುರುಳಿಸಿತ್ತು. ಬೆಂಕಿಯ ಉಂಡೆಯಾಗಿ ಕೆಳಗೆ ಬಿದ್ದ ವಿಮಾನದಲ್ಲಿದ್ದ ಎಲ್ಲ 176 ಮಂದಿ ದಹಿಸಿ ಹೋಗಿದ್ದರು. ಮೃತರಲ್ಲಿ ಹೆಚ್ಚಿನವರು ಇರಾನಿಯನ್ನರು.

ಇರಾನ್ ಸೇನೆಯೇ ಯುಕ್ರೇನ್ ವಿಮಾನವನ್ನು ಹೊಡೆದುರುಳಿಸಿರುವುದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಶನಿವಾರ ಟೆಹರಾನ್‌ನಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟೆಹರಾನ್‌ನಲ್ಲಿರುವ ಅಮೀರ್ ಕಬೀರ್ ವಿಶ್ವವಿದ್ಯಾನಿಲಯದಲ್ಲಿ ಸರಕಾರ ವಿರೋಧಿ ಘೋಷಣೆಗಳನ್ನು ಕೂಗಿದ ನೂರಾರು ವಿದ್ಯಾರ್ಥಿಗಳನ್ನು ಪೊಲೀಸರು ಬಲಪ್ರಯೋಗಿಸಿ ಚದುರಿಸಿದರು ಎಂದು ಅದು ಹೇಳಿದೆ.

ಅಮೆರಿಕ ಇರಾನ್ ಜನತೆಯ ಪರವಾಗಿ ನಿಲ್ಲುತ್ತದೆ: ಟ್ರಂಪ್

‘‘ತುಂಬಾ ಸಮಯದಿಂದ ನರಳುತ್ತಾ ಬಂದಿರುವ ಇರಾನ್‌ನ ಧೀರ ಜನರಿಗೆ: ನಾನು ಅಧಿಕಾರಕ್ಕೆ ಬಂದಂದಿನಿಂದ ನಿಮ್ಮ ಪರವಾಗಿ ನಿಂತಿದ್ದೇನೆ ಹಾಗೂ ನನ್ನ ಸರಕಾರವು ನಿಮಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಇನ್ನೊಂದು ಹತ್ಯಾಕಾಂಡ ನಡೆಸಬೇಡಿ ಅಥವಾ ಇನ್ನೊಮ್ಮೆ ಇಂಟರ್‌ನೆಟ್ ಸ್ಥಗಿತಗೊಳಿಸಬೇಡಿ. ಜಗತ್ತು ಗಮನಿಸುತ್ತಿದೆ’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News