ಗುಜರಾತ್: 2018ರಲ್ಲಿ ಬಡತನದಿಂದ ಆತ್ಮಹತ್ಯೆ ಪ್ರಕರಣ ಶೇ.162, ನಿರುದ್ಯೋಗದಿಂದ ಶೇ.21 ಏರಿಕೆ !

Update: 2020-01-13 05:21 GMT

ಅಹ್ಮದಾಬಾದ್: ಗುಜರಾತ್ ರಾಜ್ಯದಲ್ಲಿ 2018ರಲ್ಲಿ ಬಡತನದಿಂದ 294 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಳೆದ ವಾರ ಬಿಡುಗಡೆಗೊಂಡ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋದ 'ಭಾರತದಲ್ಲಿ ಆಕಸ್ಮಿಕ ಸಾವುಗಳು ಹಾಗೂ ಆತ್ಮಹತ್ಯೆಗಳು' ವರದಿ ತಿಳಿಸಿದೆ. ರಾಜ್ಯದಲ್ಲಿ 318 ಮಂದಿ 'ನಿರುದ್ಯೋಗ'ದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎರಡೂ ಕಾರಣಗಳಿಂದಾಗಿ ನಡೆದಿರುವ ಆತ್ಮಹತ್ಯೆಗಳು 2017ರಲ್ಲಿದ್ದ ಸಂಖ್ಯೆಗಿಂತ 2018ರಲ್ಲಿ ಕ್ರಮವಾಗಿ ಶೇ 163 ಹಾಗೂ ಶೇ 21ರಷ್ಟು ಹೆಚ್ಚಾಗಿವೆ. ರಾಜ್ಯದಲ್ಲಿ  2018ರಲ್ಲಿ ಒಟ್ಟು 7,793 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು Times of India ವರದಿ ಮಾಡಿದೆ.

ಗುಜರಾತ್ ರಾಜ್ಯದ ನಗರಗಳ ಪೈಕಿ ಅಹ್ಮದಾಬಾದ್ ನಗರದಲ್ಲಿ ನಿರುದ್ಯೋಗದಿಂದ 31 ಆತ್ಮಹತ್ಯೆಗಳು ಹಾಗೂ ವಡೋದರಾದಲ್ಲಿ 18 ಪ್ರಕರಣಗಳು ವರದಿಯಾಗಿವೆ. ಗುಜರಾತ್‍ನಲ್ಲಿ 2018ರಲ್ಲಿ 67 ಮಂದಿ ದಿವಾಳಿಯಾಗಿ ಆತ್ಮಹತ್ಯೆಗೈದರೆ 136 ಮಂದಿ ವೃತ್ತಿ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಆತ್ಮಹತ್ಯೆಗೈದಿದ್ದಾರೆ.

ರಾಜ್ಯದಲ್ಲಿ 2018ರಲ್ಲಿ ಆತ್ಮಹತ್ಯೆಗೈದವರ ಪೈಕಿ 370 ಮಂದಿ ಪದವೀಧರರು ಹಾಗೂ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿದವರಾಗಿದ್ದರೆ 132 ಮಂದಿ ಕೃಷಿಕರಾಗಿದ್ದರು. 2017ರಲ್ಲಿ ಕೃಷಿಗೆ ಸಂಬಂಧಿಸಿದ 133 ಮಂದಿ ಆತ್ಮಹತ್ಯೆಗೈದಿದ್ದರು. ಆ ವರ್ಷದಲ್ಲಿ ಒಟ್ಟು 26 ಮಂದಿ ಬಂದೂಕಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದಿದ್ದರು, ಆತ್ಮಹತ್ಯೆಗೈದವರ ಪೈಕಿ ಶೇ 73ರಷ್ಟು ಮಂದಿಯ ವಾರ್ಷಿಕ ವರಮಾನ ರೂ. 1 ಲಕ್ಷಕ್ಕಿಂತ ಕಡಿಮೆಯಿತ್ತು. ಶೇ 71ರಷ್ಟು ಮಂದಿ ವಿವಾಹಿತರಾಗಿದ್ದರು ಎಂದು ಎನ್‍ಸಿಆರ್‍ಬಿ ಅಂಕಿಸಂಖ್ಯೆಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News