ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಕರ್ನಾಟಕಕ್ಕೆ ಫಾಲೋ-ಆನ್
ರಾಜ್‌ಕೋಟ್, ಜ.13: ವೇಗದ ಬೌಲರ್ ಜೈದೇವ್ ಉನದ್ಕಟ್(5-49) ಹಾಗೂ ಕಮಲೇಶ್ ಮಕ್ವಾನ(3-27)ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ 171 ರನ್ ಗಳಿಸಿ ಆಲೌಟಾಗಿದೆ. ಪಂಜಾಬ್‌ನ ಮೊದಲ ಇನಿಂಗ್ಸ್ 581 ರನ್‌ಗಳಿಗೆ ದಿಟ್ಟ ಉತ್ತರ ನೀಡಲು ವಿಫಲವಾದ ಕರ್ನಾಟಕ ಫಾಲೋಆನ್‌ಗೆ ಸಿಲುಕಿದೆ. 3ನೇ ದಿನದಾಟದಂತ್ಯಕ್ಕೆ 16 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ ಮನ್‌ಗಳಾದ ರೋಹನ್ ಕದಂ(ಔಟಾಗದೆ 14) ಹಾಗೂ ಆರ್. ಸಮರ್ಥ್ (ಔಟಾಗದೆ 16)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂದು 1 ವಿಕೆಟ್ ನಷ್ಟಕ್ಕೆ 13 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 79 ಓವರ್‌ಗಳಲ್ಲಿ 171 ರನ್‌ಗೆ ಆಲೌಟಾಯಿತು. ಕರ್ನಾಟಕದ ಪರವಾಗಿ ಆರಂಭಿಕ ಆಟಗಾರ ಆರ್.ಸಮರ್ಥ್(63, 174 ಎಸೆತ, 8 ಬೌಂಡರಿ) ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಶಿವಂ ದುಬೆ(ಔಟಾಗದೆ 46) ಒಂದಷ್ಟು ಪ್ರತಿರೋಧ ಒಡ್ಡಿದರು. ರೋಹನ್ ಕದಂ(29)ಹಾಗೂ ನಾಯಕ ಎಸ್.ಗೋಪಾಲ್(11)ಎರಡಂಕೆಯ ಸ್ಕೋರ್ ಗಳಿಸಿದರು. ಉತ್ತಮ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಮೊದಲ ಓವರ್‌ನಲ್ಲಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಕೆ.ವಿ. ಸಿದ್ದಾರ್ಥ್(0), ಪವನ್ ದೇಶಪಾಂಡೆ(8),ಶರತ್(2), ಸುಚಿತ್(2) ಹಾಗೂ ರೋನಿತ್ ಮೋರೆ(6) ಒಂದಂಕಿ ದಾಟಲು ವಿಫಲರಾದರು. ಆತಿಥೇಯರ ಪರ ಉನದ್ಕಟ್ 49 ರನ್‌ಗೆ ಐದು ವಿಕೆಟ್ ಗೊಂಚಲು ಪಡೆದರು. ಮಕ್ವಾನ 27 ರನ್ ನೀಡಿ 3 ವಿಕೆಟ್ ಪಡೆದು ಉನದ್ಕಟ್‌ಗೆ ಉತ್ತಮ ಸಾಥ್ ನೀಡಿದರು.