ಸರನ್, ರುದ್ರಾಕ್ಷ್ ಗೆ ಬಂಗಾರ
ಗುವಾಹಟಿ, ಜ.13: ಖೇಲೊ ಇಂಡಿಯಾ ಗೇಮ್ಸ್‌ನಲ್ಲಿ ಸೋಮವಾರ ನಡೆದ ಅಂಡರ್-21 ವಿಭಾಗದ ಬಾಲಕರ ಲಾಂಗ್‌ಜಂಪ್ ಇವೆಂಟ್‌ನಲ್ಲಿ ತನ್ನ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ ತಮಿಳುನಾಡಿನ ಎಸ್.ಸರನ್ 7.41 ಮೀ.ದೂರಕ್ಕೆ ಜಿಗಿದು ಚಿನ್ನದ ಪದಕ ಜಯಿಸಿದರು. ಮೊದಲ ಐದು ಪ್ರಯತ್ನದಲ್ಲಿ 3ನೇ ಸ್ಥಾನ ಪಡೆದು ಹಿನ್ನಡೆಯಲ್ಲಿದ್ದ ಸರನ್ ಹರ್ಯಾಣದ ಭೂಪಿಂದರ್ ಸಿಂಗ್(7.30 ಮೀ.) ಹಾಗೂ ಕೇರಳದ ಆರ್.ಸಾಜನ್(7.29 ಮೀ.)ಅವರನ್ನು ಹಿಂದಿಕ್ಕಿದರು.
ರುದ್ರಾಕ್ಷ್‌ಗೆ ಚಿನ್ನದ ಹಾರ: ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಸೋಮವಾರ ನಡೆದ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ರುದ್ರಾಕ್ಷ್ ಪಾಟೀಲ್ ಚಿನ್ನದ ಪದಕ ಜಯಿಸಿದರು. ಒಲಿಂಪಿಕ್ಸ್ ಚಾಂಪಿಯನ್ ಅಭಿನವ ಬಿಂದ್ರಾ ಅವರ ದಾಖಲೆಯನ್ನು ಸರಿಗಟ್ಟುವತ್ತ ಚಿತ್ತವಿರಿಸಿದ್ದಾರೆ.
ರುದ್ರಾಕ್ಷ್ 252.4 ಅಂಕ ಗಳಿಸಿ ಬಂಗಾರ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ 10 ಮೀ. ಏರ್ ರೈಫಲ್‌ನಲ್ಲಿ ಮಹಾರಾಷ್ಟ್ರಕ್ಕೆ ಎರಡನೇ ಪದಕ ಗೆದ್ದುಕೊಟ್ಟರು. ಬಾಲಕರ ಅಂಡರ್-21 ವಿಭಾಗದಲ್ಲಿ ಸಾಹು ತುಷಾರ್ ಮಾನೆ ಕಂಚಿನ ಪದಕ ಜಯಿಸಿದರು. ಶಾಹು ಚಿನ್ನದ ಕೈತಪ್ಪಿದ್ದಕ್ಕೆ ನಿರಾಸೆ ಅನುಭವಿಸಿದರು.