ನಾಳೆ ಭಾರತ-ಆಸ್ಟ್ರೇಲಿಯ ಮೊದಲ ಏಕದಿನ

Update: 2020-01-13 17:34 GMT

 ಮುಂಬೈ, ಜ. 13: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದ್ದು, ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಅಂತಿಮ ಹನ್ನೊಂದರ ಆಯ್ಕೆಗೆ ಸವಾಲು ಎದುರಾಗಿದೆ.

 ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಉತ್ತಮ ಫಾರ್ಮ್‌ನಲ್ಲಿರುವ ಕೆ.ಎಲ್. ರಾಹುಲ್ ಮತ್ತು ಅನುಭವಿ ಶಿಖರ್ ಧವನ್ ಇವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಬಗೆಹರಿದಿಲ್ಲ.

ದ್ವಿಪಕ್ಷೀಯ ಏಕದಿನ ಸರಣಿಯು ವೇಗವಾಗಿ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಎರಡು ಅಗ್ರ ತಂಡಗಳ ನಡುವಿನ ಮೂರು ಪಂದ್ಯಗಳ ಸರಣಿಯು ಏಕದಿನ ಮಾದರಿಯ ಕ್ರಿಕೆಟಿಗೆ ಜೀವಕಳೆಯನ್ನು ನೀಡುವುದನ್ನು ನಿರೀಕ್ಷಿಸಲಾಗಿದೆೆ.

ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹೈ-ವೋಲ್ಟೇಜ್ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಇವರಲ್ಲಿ ಬ್ಯಾಟಿಂಗ್‌ನಲ್ಲಿ ಯಾರು ಶ್ರೇಷ್ಠರು ಎನ್ನುವುದು ಈ ಸರಣಿಯಲ್ಲಿ ಗೊತ್ತಾಗಲಿದೆ.

              

 ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಮತ್ತು ನವದೀಪ ಸೈನಿ ನೇತೃತ್ವದ ಭಾರತದ ಬೌಲರ್‌ಗಳ ತಂಡ ಆಸ್ಟ್ರೇಲಿಯದ ಬ್ಯಾಟಿಂಗ್‌ಗೆ ಸವಾಲು ನೀಡಲು ಸಿದ್ಧವಾಗಿದೆ. ಮತ್ತೊಂದೆಡೆ ಐಪಿಎಲ್‌ನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಪ್ಯಾಟ್ ಕಮ್ಮಿನ್ಸ್, ಕೇನ್ ರಿಚರ್ಡ್ಸನ್ ಮತ್ತು ತಂಡ ಅತಿಯಾಗಿ ಅವಲಂಬಿಸಿರುವ ಆಟಗಾರ ಮಿಚೆಲ್ ಸ್ಟಾರ್ಕ್ ಅವರು ಕೊಹ್ಲಿ ಪಡೆಗೆ ಸುಲಭವಾಗಿ ಶರಣಾಗಲು ಸಿದ್ಧರಿಲ್ಲ. ಅಲೆಕ್ಸ್ ಕಾರೆಯ ಧೈರ್ಯಶಾಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಸಾಮರ್ಥ್ಯ ಪರೀಕ್ಷೆಗೊಳಗಾಗಲಿದೆ. ಉತ್ತಮ ಪ್ರದರ್ಶನದೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಸೆಳೆದಿರುವ ಯುವ ಪ್ರತಿಭಾವಂತ ಆಟಗಾರ ಮಾರ್ನಸ್ ಲ್ಯಾಬುಶೆನ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂತಳವೂರಲು ಎದುರು ನೋಡುತ್ತಿದ್ದಾರೆ. ರೋಹಿತ್ ಶರ್ಮಾ ಅವರೊಂದಿಗೆ ರಾಹುಲ್ ಇನಿಂಗ್ಸ್ ಆರಂಭಿಸಿ ಉತ್ತಮ ದಾಖಲೆ ಬರೆದಿದ್ದಾರೆ. ಆದರೆ ಧವನ್ ಆಸೀಸ್ ವಿರುದ್ಧ ಬಿಳಿ ಚೆಂಡು ಕ್ರಿಕೆಟ್‌ನಲ್ಲಿ ಅಪೂರ್ವ ದಾಖಲೆಯನ್ನು ಹೊಂದಿದ್ದಾರೆ. ವಾಸ್ತವವಾಗಿ ಏಕದಿನ ವಿಶ್ವಕಪ್‌ನಲ್ಲಿ ಧವನ್ ಆಡಿದ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಭಾರತದ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟಿತು.

ಆದರೆ ಅದು ಏಳು ತಿಂಗಳ ಹಿಂದೆ ನಡೆದ ವಿಚಾರ. ಅಂದಿನಿಂದ ಧವನ್ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಅವರು ಶ್ರೀಲಂಕಾ ವಿರುದ್ಧದ ಅಂತಿಮ ಟ್ವೆಂಟಿ-20 ಯಲ್ಲಿ ಅರ್ಧಶತಕ ಗಳಿಸುವ ಮೂಲಕ ಸ್ವಲ್ಪಮಟ್ಟಿಗೆ ಫಾರ್ಮ್ ಕಂಡುಕೊಂಡರು.

  

 ವಿಶ್ವಕಪ್‌ನಲ್ಲಿ ಧವನ್ ತಂಡದಲ್ಲಿರುವ ತನಕ ಲೋಕೇಶ್ ರಾಹುಲ್ ನಂ .4 ರಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ಶ್ರೇಯಸ್ ಅಯ್ಯರ್ ಉತ್ತಮ ಸ್ಕೋರ್ ಕಲೆ ಹಾಕುವ ಮೂಲಕ 4ನೇ ಸ್ಥಾನ ಭದ್ರಪಡಿಸಿದ ಹಿನ್ನೆಲೆಯಲ್ಲಿ ರಾಹುಲ್‌ಗೆ ಸಮಸ್ಯೆ ಎದುರಾಗಿದೆ. ‘‘ರೋಹಿತ್ ಸಹಜವಾಗಿ ಸ್ಪಷ್ಟ ಆಯ್ಕೆಯಾಗಿದ್ದಾರೆ. ಶಿಖರ್ ಮತ್ತು ರಾಹುಲ್ ಉತ್ತಮವಾಗಿ ಆಡುತ್ತಿದ್ದಾರೆ. ಶಿಖರ್ ಏಕದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಮತ್ತು ರಾಹುಲ್ ಉತ್ತಮ ಫಾರ್ಮ್‌ಲ್ಲಿದ್ದಾರೆ. ನಾನು ಇದನ್ನು ಸಮಸ್ಯೆಯಾಗಿ ನೋಡುತ್ತಿಲ್ಲ ಮತ್ತು ಅವರಲ್ಲಿ ಒಬ್ಬರು ತಂಡದಿಂದ ಹೊರಗುಳಿಯ ಬೇಕಾಗುತ್ತದೆ. ಇದರಲ್ಲಿ ತಪ್ಪೇನಿಲ್ಲ’’ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಹ್ಯಾಟ್ರಿಕ್ ಸಾಧಿಸಿರುವ ಕುಲದೀಪ್ ಯಾದವ್‌ಗೆ ಈ ಪಂದ್ಯದಲ್ಲಿ ಯಜುವೇಂದ್ರ ಚಹಾಲ್‌ಗಿಂತ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಕೇದಾರ್ ಜಾಧವ್ ಸ್ಥಾನ ಉಳಿಸಲು ಸವಾಲು ಎದುರಿಸಬೇಕಾಗಿದೆ.

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೇದಾರ್ ಜಾಧವ್, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜ, ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್‌ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಮತ್ತು ಮುಹಮ್ಮದ್ ಶಮಿ.

ಆಸ್ಟ್ರೇಲಿಯ: ಆ್ಯರನ್ ಫಿಂಚ್ (ಕ್ಯಾಪ್ಟನ್), ಅಲೆಕ್ಸ್ ಕಾರೆ(ವಿಕೆಟ್ ಕೀಪರ್), ಪ್ಯಾಟ್ರಿಕ್ ಕಮ್ಮಿನ್ಸ್, ಅ್ಯಶ್ಟನ್ ಅಗರ್, ಪೀಟರ್ ಹ್ಯಾಂಡ್ಸ್ ಕಾಂಬ್, ಜೋಶ್ ಹೇಝಲ್‌ವುಡ್, ಮಾರ್ನಸ್ ಲ್ಯಾಬುಶೇನ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಅ್ಯಶ್ಟನ್ ಟರ್ನರ್, ಡೇವಿಡ್ ವಾರ್ನರ್ ಮತ್ತು ಆ್ಯಡಮ್ ಝಾಂಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News