ಎಫ್‌ಐಎಚ್ ಹಾಕಿ ಪ್ರೊ ಲೀಗ್: ಭಾರತ ಪುರುಷರ ತಂಡ ಪ್ರಕಟ

Update: 2020-01-13 17:26 GMT

ಹೊಸದಿಲ್ಲಿ, ಜ.13: ಭುವನೇಶ್ವರದಲ್ಲಿ ನೆದರ್ಲೆಂಡ್ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ವರ್ಷದ ಮೊದಲ ಹಾಕಿ ಟೂರ್ನಿ ಎಫ್‌ಐಎಚ್ ಪ್ರೊ ಲೀಗ್‌ಗೆ ಭಾರತೀಯ ಪುರುಷರ ಹಾಕಿ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಫಿಟ್ನೆಸ್ ಸಮಸ್ಯೆಯಿಂದ ಹೊರಬಂದಿರುವ ಚಿಂಗ್ಲೆನ್‌ಸನ ಸಿಂಗ್ ಹಾಗೂ ಸುಮಿತ್ ತಂಡಕ್ಕೆ ವಾಪಸಾಗಿದ್ದಾರೆ. ಚಿಂಗ್ಲೆನ್‌ಸನ ಒಂದು ವರ್ಷದ ಬಳಿಕ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗುತ್ತಿದ್ದಾರೆ. ಜೂನ್‌ನಲ್ಲಿ ಎಫ್‌ಐಎಚ್ ಪುರುಷರ ಸಿರೀಸ್ ಫೈನಲ್‌ನಲ್ಲಿ ಗಾಯಗೊಂಡಿದ್ದ ಸುಮಿತ್ ತಂಡಕ್ಕೆ ಮರಳಿದ್ದಾರೆ.

 20 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಎರಡು ಪಂದ್ಯಗಳ ಸರಣಿಯು ಭುವನೇಶ್ವರದ ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡಕ್ಕೆ ಡ್ರ್ಯಾಗ್ ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಉಪ ನಾಯಕನಾಗಿರುತ್ತಾರೆ. ಮೊದಲ ಆವೃತ್ತಿಯ ಪ್ರೊ ಲೀಗ್‌ನಿಂದ ಹೊರಗುಳಿದಿದ್ದ ಭಾರತ ಈ ಬಾರಿ ಜ.18 ಹಾಗೂ 19ರಂದು ಆಡಲಿರುವ ತನ್ನ ಚೊಚ್ಚಲ ಪ್ರೊ ಲೀಗ್‌ನಲ್ಲಿ ವಿಶ್ವದ ನಂ.3ನೇ ತಂಡ ನೆದರ್ಲೆಂಡ್‌ನ್ನು ಎದುರಿಸಲಿದೆ.

  ಫೆಬ್ರವರಿಯಲ್ಲಿ ನಡೆದ 9ನೇ ಆವೃತ್ತಿಯ ಹಾಕಿ ಇಂಡಿಯಾ ಸೀನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್-2019ರ(‘ಎ ’ ವಿಭಾಗ)ಬಳಿಕ ಚಿಂಗ್ಲೆನ್‌ಸನ ಸಕ್ರಿಯ ಹಾಕಿಯಿಂದ ದೂರ ಉಳಿದಿದ್ದರು. ರೈಲ್ವೇಸ್ ವಿರುದ್ಧ ಗೆಲುವು ತಂದುಕೊಟ್ಟಿದ್ದ ಚಿಂಗ್ಲೆನ್‌ಸನ ಫೈನಲ್‌ನಲ್ಲಿ ಪಾದದ ನೋವಿನ ಸಮಸ್ಯೆಗೆ ಒಳಗಾಗಿದ್ದರು. 23ರ ಹರೆಯದ ಸುಮಿತ್‌ಗೆ ಜೂನ್‌ನಲ್ಲಿ ಎಫ್‌ಐಎಚ್ ಪುರುಷರ ಸಿರೀಸ್ ಫೈನಲ್‌ನಲ್ಲಿ ಮಣಿಕಟ್ಟಿಗೆ ಗಾಯವಾಗಿತ್ತು. ಸಿರೀಸ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಭಾರತ ತಂಡದಲ್ಲಿ ಹಿರಿಯ ಆಟಗಾರರಾದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್, ಕೃಷ್ಣ ಬಿ.ಪಾಠಕ್, ಗುರಿಂದರ್ ಸಿಂಗ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್ ಹಾಗೂ ಬೀರೇಂದ್ರ ಲಾಕ್ರಾ ಅವರಿದ್ದಾರೆ. ಡ್ರಾಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ ತಂಡಕ್ಕೆ ವಾಪಸಾಗಿದ್ದಾರೆ. ರಾಷ್ಟ್ರೀಯ ಕೋಚಿಂಗ್ ಶಿಬಿರದಲ್ಲಿ ತನ್ನ ಬದ್ಧತೆ ಹಾಗೂ ಕಠಿಣ ಶ್ರಮ ತೋರಿದ್ದ ಸ್ಟ್ರೈಕರ್ ಗುರ್ಜಂತ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಪ್ರೊ ಲೀಗ್‌ನ ತನ್ನ ಮೊದಲ ಮೂರು ಮುಖಾಮುಖಿಯಲ್ಲಿ ನೆದರ್ಲೆಂಡ್(ಜನವರಿ 18-19), ಬೆಲ್ಜಿಯಂ(ಫೆಬ್ರವರಿ 8-9) ಹಾಗೂ ಆಸ್ಟ್ರೇಲಿಯ(ಫೆಬ್ರವರಿ 21-22)ತಂಡವನ್ನು ಎದುರಿಸಲಿದೆ.

<ಭಾರತೀಯ ಹಾಕಿ ತಂಡ: ಪಿ.ಆರ್.ಶ್ರೀಜೇಶ್, ಕೃಷ್ಣ ಬಹಾದೂರ್ ಪಾಠಕ್, ಹರ್ಮನ್‌ಪ್ರೀತ್ ಸಿಂಗ್(ಉಪ ನಾಯಕ), ಗುರಿಂದರ್ ಸಿಂಗ್, ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ಬೀರೇಂದ್ರ ಲಾಕ್ರಾ, ರೂಪಿಂದರ್‌ಪಾಲ್ ಸಿಂಗ್, ಮನ್‌ಪ್ರೀತ್ ಸಿಂಗ್(ನಾಯಕ), ವಿವೇಕ್ ಸಾಗರ ಪ್ರಸಾದ್, ಚಿಂಗ್ಲೆನ್‌ಸನ ಸಿಂಗ್, ನೀಲಕಂಠ ಶರ್ಮಾ, ಸುಮಿತ್, ಗುರ್ಜಂತ್ ಸಿಂಗ್, ಎಸ್.ವಿ. ಸುನೀಲ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಆಕಾಶ್ ದೀಪ್ ಸಿಂಗ್, ಗುರುಸಾಹಿಬ್‌ಜಿತ್ ಸಿಂಗ್, ಕೊಥಜಿತ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News