ಪೌರತ್ವ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳ

Update: 2020-01-14 14:31 GMT

ಹೊಸದಿಲ್ಲಿ, ಜ. 13: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರ ಸುಪ್ರೀಂ ಕೋರ್ಟ್‌ಮೆಟ್ಟಿಲೇರಿದೆ. ತಿದ್ದುಪಡಿ ಮಾಡಲಾದ ಕಾಯ್ದೆ ಭಾರತೀಯ ಸಂವಿಧಾನದ ಸಮಾನತೆಯ ಹಕ್ಕಿಗೆ ವಿರುದ್ಧವಾದುದು ಎಂದು ಅದು ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ ಮೊದಲ ರಾಜ್ಯ ಕೇರಳ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿಧಾನ ಸಭೆಯ ನಿರ್ಣಯ ಅಂಗೀಕರಿಸಿದ ಮೊದಲ ರಾಜ್ಯ ಕೂಡ ಕೇರಳ.

ಪೌರತ್ವ ತಿದ್ದುಪಡಿ ಕಾಯ್ದೆ ಅಲ್ಲದೆ, ಪಾಸ್‌ಪೋರ್ಟ್ ಕಾಯ್ದೆ ಹಾಗೂ ವಿದೇಶಿಗರ ಕಾಯ್ದೆಯ ನಿಯಮಗಳನ್ನು ಕೂಡ ಕೇರಳದ ಎಲ್‌ಡಿಎಫ್ ಸರಕಾರ ಪ್ರಶ್ನಿಸಿದೆ. ಸಂವಿಧಾನದ ಕಲಂ 14, 21, 25 ಹಾಗೂ ಭಾರತದ ಜಾತ್ಯತೀತತೆಯ ಮೂಲ ವಿನ್ಯಾಸವನ್ನು ಪೌರತ್ವ ತಿದ್ದುಪಡಿ ಕಾಯ್ದೆ ಉಲ್ಲಂಘಿಸುತ್ತದೆ ಎಂದು ಘೋಷಿಸಬೇಕು ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದೆ. ಈ ತಿಂಗಳ ಆರಂಭದಲ್ಲಿ ಕೇರಳ ವಿಧಾನ ಸಭೆಯಲ್ಲಿ ಪೌರತ್ವ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಗಿತ್ತು.

 ಎಲ್‌ಡಿಎಫ್‌ಗೆ ಕಾಂಗ್ರೆಸ್ ನೇತೃತ್ವದ ವಿಪಕ್ಷ ಯುಡಿಎಫ್ ಬೆಂಬಲ ನೀಡಿತ್ತು. ವಿವಾದಾತ್ಮಕ ಕಾನೂನಿನ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳುವಂತೆ 11 ಬಿಜೆಪಿಯೇತರ ಮುಖ್ಯಮಂತ್ರಿಗಳಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರ ಬರೆದಿದ್ದರು. ಅಲ್ಲದೆ ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನೂ ರಕ್ಷಿಸಲು ಸಂಘಟಿತರಾಗಿ ಧ್ವನಿ ಎತ್ತುವಂತೆ ಆಗ್ರಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News