ಜಾಮಾ ಮಸ್ಜಿದ್ ಪಾಕ್ ನಲ್ಲಿದೆಯೇ?, ಪ್ರತಿಭಟನೆ ಸಂವಿಧಾನ ನೀಡಿದ ಹಕ್ಕು: ದಿಲ್ಲಿ ಪೊಲೀಸರಿಗೆ ಕೋರ್ಟ್ ತರಾಟೆ

Update: 2020-01-14 17:52 GMT

ಹೊಸದಿಲ್ಲಿ, ಜ.14: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಜೈಲಿನಲ್ಲಿ ಬಂಧನದಲ್ಲಿರುವ ಭೀಮ್ ಸೇನೆಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಧೀಶರು ದಿಲ್ಲಿ ಪೊಲೀಸರನ್ನು ತರಾಟೆಗೆತ್ತಿಕೊಂಡ ಘಟನೆ ನಡೆದಿದೆ.

“ಧರಣಿ ಅಥವಾ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನು?, ಪ್ರತಿಭಟನೆ ನಡೆಸುವುದು ಸಾಂವಿಧಾನಿಕ ಹಕ್ಕು. ಜಾಮಾ ಮಸ್ಜಿದ್ ಪಾಕ್‌ನಲ್ಲಿರುವಂತೆ ನೀವು ವರ್ತಿಸುತ್ತಿದ್ದೀರಿ. ಒಂದು ವೇಳೆ ಪಾಕಿಸ್ತಾನದಲ್ಲಿದ್ದರೂ ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಪಾಕಿಸ್ತಾನ ಅವಿಭಜಿತ ಭಾರತದ ಭಾಗವಾಗಿತ್ತು” ಎಂದು ತೀಸ್ ‌ಹಝಾರಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ಜಡ್ಜ್ ಕಾಮಿನಿ ಲಾವು ದಿಲ್ಲಿ ಪೊಲೀಸರ ಪರ ವಕೀಲ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪಂಕಜ್ ಭಾಟಿಯಾರನ್ನು ಉದ್ದೇಶಿಸಿ ಹೇಳಿದರು.

ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ(ಜ.15)ಕ್ಕೆ ಮುಂದೂಡಲಾಗಿದೆ.

ಪೌರತ್ವ ಕಾಯ್ದೆ ವಿರೋಧಿಸಿ ಡಿ.20ರಂದು ಭೀಮ್‌ಸೇನೆ ಹಳೆದಿಲ್ಲಿಯ ಜಾಮಾ ಮಸ್ಜಿದ್‌ನಿಂದ ಜಂತರ್ ಮಂತರ್‌ವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಂಡಿತ್ತು. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಚಂದ್ರಶೇಖರ್ ಆಝಾದ್‌ರನ್ನು ಬಂಧಿಸಿರುವುದಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಭಾಟಿಯಾ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸೆಕ್ಷನ್ 144ನ್ನು ಪದೇ ಪದೇ ಬಳಸುವುದು ಅಧಿಕಾರದ ದುರುಪಯೋಗ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದ ಹಲವರು ಬಳಿಕ ಮುಖಂಡರಾಗಿ, ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದನ್ನು ಕಂಡಿದ್ದೇನೆ. ಸಂಸತ್ತಿನಲ್ಲಿ ಹೇಳಬೇಕಾಗಿರುವುದನ್ನು ಹೇಳದ ಕಾರಣ ಜನತೆ ಈಗ ಬೀದಿಗಿಳಿದಿದ್ದಾರೆ ಎಂದರು.

ಸಾಮಾಜಿಕ ಮಾಧ್ಯಮದಲ್ಲಿ ಚಂದ್ರಶೇಖರ್ ಆಝಾದ್ ಸಾವಿರಾರು ಆಕ್ಷೇಪಾರ್ಹ ಸಂದೇಶ ರವಾನಿಸಿದ್ದಾರೆ ಎಂದು ಪಂಕಜ್ ಭಾಟಿಯಾ ಹೇಳಿದರು. ಇದರಲ್ಲಿ ಒಂದನ್ನಾದರೂ ಓದಿ ಹೇಳಿ ಎಂದು ನ್ಯಾಯಾಧೀಶೆ ಸೂಚಿಸಿದಾಗ, ಜಾಮಾ ಮಸ್ಜಿದ್ ಬಳಿ ಸೇರುವಂತೆ ಚಂದ್ರಶೇಖರ್ ಆಝಾದ್ ರವಾನಿಸಿದ್ದ ಸಂದೇಶವನ್ನು ಭಾಟಿಯಾ ಓದಿ ಹೇಳಿದರು.

“ಈ ಸಂದೇಶದಲ್ಲಿ ತಪ್ಪೇನಿದೆ. ನೀವು ಸಂವಿಧಾನವನ್ನು ಓದಿದ್ದೀರಾ?” ಎಂದು ಭಾಟಿಯಾರನ್ನು ಪ್ರಶ್ನಿಸಿದ ನ್ಯಾಯಾಧೀಶರು, ಧಾರ್ಮಿಕ ಕೇಂದ್ರಗಳ ಹೊರಗೆ ಪ್ರತಿಭಟನೆ ನಡೆಸಬಾರದು ಎಂದು ಯಾವ ಕಾನೂನಿನಲ್ಲಿ ಹೇಳಿದೆ ಎಂಬುದನ್ನು ತಿಳಿಸಿ ಎಂದರು. ಅಲ್ಲದೆ ಪ್ರತಿಭಟನೆ ಸಂದರ್ಭ ನಡೆದಿರುವ ಹಿಂಸಾಚಾರದ ವೀಡಿಯೊ ದೃಶ್ಯಾವಳಿ ಇದೆಯೇ ಎಂದು ಭಾಟಿಯಾರನ್ನು ಪ್ರಶ್ನಿಸಿದರು. ಪೊಲೀಸರಲ್ಲಿ ಡ್ರೋನ್‌ನಿಂದ ತೆಗೆದ ದೃಶ್ಯಗಳಿವೆ. ವೀಡಿಯೊ ದೃಶ್ಯಗಳಿಲ್ಲ ಎಂದು ಭಾಟಿಯಾ ಉತ್ತರಿಸಿದಾಗ, “ದಿಲ್ಲಿ ಪೊಲೀಸರು ಇಷ್ಟೊಂದು ಹಿಂದುಳಿದಿದ್ದಾರೆಯೇ ? ನಾಳೆ ಪುರಾವೆ ಕೇಳಿದಾಗ ವೀಡಿಯೊ ರೆಕಾರ್ಡಿಂಗ್ ಬೇಕಾಗುತ್ತದೆ” ಎಂದು ನ್ಯಾಯಾಧೀಶರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News