ನಿರ್ಭಯಾ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳ ಪರಿಹಾರಾತ್ಮಕ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2020-01-14 14:29 GMT

ಹೊಸದಿಲ್ಲಿ, ಜ. 14: ಹೊಸದಿಲ್ಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಎದುರು ನೋಡುತ್ತಿರುವ ನಾಲ್ವರು ದೋಷಿಗಳಲ್ಲಿ ಇಬ್ಬರು ಸಲ್ಲಿಸಿದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ ಮಂಗಳವಾರ ವಜಾಗೊಳಿಸಿದೆ. ಪರಿಹಾರಾತ್ಮಕ ಅರ್ಜಿ ದೋಷಿಗಳಾದ ವಿನಯ್ ಶರ್ಮಾ (26) ಹಾಗೂ ಮುಖೇಶ್ ಕುಮಾರ್ (32)ಗೆ ಇದ್ದ ಕೊನೆಯ ಕಾನೂನು ಪರಿಹಾರವಾಗಿತ್ತು.

 ಮರಣದಂಡನೆ ರದ್ದುಗಳಿಸುವ ಹಾಗೂ ಮೌಖಿಕ ವಿಚಾರಣೆಯನ್ನು ಮುಂದುವರಿಸುವ ಅವರ ಮನವಿಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ತನ್ನ ಏಕ ಆದೇಶದಲ್ಲಿ ತಿರಸ್ಕರಿಸಿದೆ. ಪರಿಹಾರಾತ್ಮಕ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದ ಪ್ರಕಾರ, ಈ ಮಾನದಂಡಗಳ ಅಡಿಯಲ್ಲಿ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ದಿಲ್ಲಿ ನ್ಯಾಯಾಲಯದ ನ್ಯಾಯಮೂರ್ತಿ ಆದೇಶದಂತೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಲಿರುವ ನಾಲ್ವರು ದೋಷಿಗಳು ಇನ್ನು ಕೂಡ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಬಹುದು. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವ ಅಧಿಕಾರ ಇರುವ ರಾಷ್ಟ್ರಪತಿಗಳು ಮನವಿ ತಿರಸ್ಕರಿಸದ ಬಳಿಕವಷ್ಟೇ ಅವರನ್ನು ಗಲ್ಲಿಗೇರಿಸಬಹುದು. ‘‘ಇದು ನನಗೆ ಅತಿ ಪ್ರಮುಖ ದಿನ. ನಾನು ಕಳೆದೆ 7 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದೇನೆ’’ ಎಂದು ನಿರ್ಭಯಾ ತಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News