ತೈಪೆ ಜೊತೆ ಪ್ರೇಗ್ ಒಪ್ಪಂದ: ಪ್ರೇಗ್ ಜೊತೆಗಿನ ಸಂಪರ್ಕ ಕಡಿದ ಶಾಂಘೈ

Update: 2020-01-14 15:49 GMT

ಶಾಂಘೈ (ಚೀನಾ), ಜ. 14: ಝೆಕ್ ದೇಶದ ರಾಜಧಾನಿ ಪ್ರೇಗ್‌ನೊಂದಿಗಿನ ಎಲ್ಲ ಅಧಿಕೃತ ಸಂಪರ್ಕವನ್ನು ಅಮಾನತಿನಲ್ಲಿಟ್ಟಿರುವುದಾಗಿ ಚೀನಾದ ನಗರ ಶಾಂಘೈಯ ಮಹಾನಗರಪಾಲಿಕೆ ಮಂಗಳವಾರ ಹೇಳಿದೆ. ತೈವಾನ್ ರಾಜಧಾನಿ ತೈಪೆ ಜೊತೆಗೆ ಪ್ರೇಗ್ ನಗರವು ‘ಸಹೋದರಿ ನಗರ’ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಶಾಂಘೈಈ ನಿರ್ಧಾರವನ್ನು ತೆಗೆದುಕೊಂಡಿದೆ.

  ಝೆಕ್ ಅಧ್ಯಕ್ಷ ಮಿಲೋಸ್ ಝೆಮನ್ ಚೀನಾದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಲು ಬಯಸಿದ್ದಾರೆ. ಆದರೆ, ಝೆಕ್ ರಾಜಧಾನಿ ಪ್ರೇಗ್ ಮಹಾನಗರಪಾಲಿಕೆಯು ಚೀನಾದ ವಿಷಯದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಬಂದಿದೆ. ಈ ಹಿಂದೆ, ಪ್ರೇಗ್‌ನಲ್ಲಿ ನಡೆದ ಸಮ್ಮೇಳನವೊಂದರಿಂದ ತೈವಾನ್ ರಾಯಭಾರಿಯನ್ನು ಹೊರಹಾಕುವಂತೆ ಚೀನಾ ಒತ್ತಡ ಹೇರಿತ್ತು. ಆದರೆ, ಪ್ರೇಗ್ ಮೇಯರ್ ಝಡೆನೆಕ್ ಹ್ರಿಬ್ ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಟಿಬೆಟ್‌ನಲ್ಲಿನ ಮಾನವಹಕ್ಕು ದಮನವನ್ನು ಖಂಡಿಸಿ ಪ್ರೇಗ್‌ನ ಸಿಟಿ ಹಾಲ್‌ನಲ್ಲಿ ಟಿಬೆಟ್ ಧ್ವಜವನ್ನು ಹಾರಿಸುವ ನಿರ್ಧಾರವನ್ನೂ ಅವರು ತೆಗೆದುಕೊಂಡಿದ್ದರು.

ತೈವಾನ್ ತನ್ನ ಭಾಗ ಹಾಗೂ ಅಗತ್ಯ ಬಿದ್ದರೆ ಬಲಪ್ರಯೋಗದ ಮೂಲಕ ಅದನ್ನು ತನ್ನೊಂದಿಗೆ ವಿಲೀನಗೊಳಿಸಬಹುದಾಗಿದೆ ಎಂದು ಚೀನಾ ಹೇಳುತ್ತಿದೆ ಹಾಗೂ ತನ್ನ ನಿಲುವನ್ನು ಸ್ವೀಕರಿಸುವಂತೆ ಜಗತ್ತಿನ ಸರಕಾರಗಳ ಮೇಲೆ ಒತ್ತಡ ಹೇರುತ್ತಿದೆ. ತೈವಾನ್‌ನಲ್ಲಿ ಈಗ ಚುನಾವಣೆ ಮೂಲಕ ಆರಿಸಲ್ಪಡುವ ಸ್ವತಂತ್ರ ಸರಕಾರವಿದೆ.

ಸೋಮವಾರ ಹ್ರಿಬ್ ಮತ್ತು ತೈಪೆ ಮೇಯರ್ ಕೊ ವೆನ್-ಜೆ ಪ್ರೇಗ್‌ನಲ್ಲಿ ‘ಸೋದರಿ ನಗರ’ ಒಪ್ಪಂದಕ್ಕೆ ಸಹಿ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News