ಈರುಳ್ಳಿ ದರ ಇಳಿಕೆ: ಸಗಟು ಹಣದುಬ್ಬರ ಶೇ. 2.59ಕ್ಕೆ ಏರಿಕೆ

Update: 2020-01-14 17:17 GMT

ಹೊಸದಿಲ್ಲಿ, ಜ.14: ಗಗನಕ್ಕೇರಿದ್ದ ಈರುಳ್ಳಿ ಬೆಲೆ ಇಳಿಮುಖವಾಗಿದ್ದು ಈಗ ಕಿ.ಗ್ರಾಂಗೆ 22 ರೂ. ಯಂತೆ ಲಭ್ಯವಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಘೋಷಿಸಿದೆ. ಈ ಮಧ್ಯೆ, ಸಗಟು(ಹೋಲ್‌ಸೇಲ್) ಹಣದುಬ್ಬರದ ಪ್ರಮಾಣ ಡಿಸೆಂಬರ್‌ನಲ್ಲಿ 2.59%ಕ್ಕೆ ಏರಿದ್ದು ಕಳೆದ 8 ತಿಂಗಳಲ್ಲೇ ಇದು ಅತ್ಯಧಿಕವಾಗಿದೆ ಎಂದು ಸರಕಾರದ ಅಂಕಿಅಂಶ ತಿಳಿಸಿದೆ.

ಟರ್ಕಿ, ಈಜಿಪ್ಟ್ ಮತ್ತು ಅಪಘಾನಿಸ್ತಾನದಿಂದ 18,000 ಟನ್ ಈರುಳ್ಳಿ ಆಮದು ಮಾಡಿಕೊಂಡಿದ್ದು ಮುಂಬೈ ತಲುಪಿದೆ. ಈಗ ಈರುಳ್ಳಿ ಬೆಲೆ ಕಿ.ಗ್ರಾಂಗೆ 22 ರೂ.ಗೆ ಇಳಿದಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಸಚಿವ ರಾಮವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಮಾಸಿಕ ಸಗಟು ದರ ಸೂಚ್ಯಾಂಕ ಆಧರಿಸಿದ ವಾರ್ಷಿಕ ಹಣದುಬ್ಬರ 2019ರ ಎಪ್ರಿಲ್‌ನಲ್ಲಿ 3.24% ದಾಖಲಾಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆರ್ಥಿಕ ಸಲಹೆ ಇಲಾಖೆ ಮಂಗಳವಾರ ಬಿಡುಗಡೆಗೊಳಿಸಿದ ಅಂಕಿಅಂಶ ತಿಳಿಸಿದೆ.

ಆಹಾರ ವಸ್ತುಗಳ ಬೆಲೆಏರಿಕೆ ಪ್ರಮಾಣ 2019ರ ನವೆಂಬರ್‌ನಲ್ಲಿ 11% ಇದ್ದರೆ ಡಿಸೆಂಬರ್‌ನಲ್ಲಿ 13.2%ಕ್ಕೆ ತಲುಪಿದೆ. ಆಹಾರೇತರ ವಸ್ತುಗಳ ಬೆಲೆಏರಿಕೆ ಪ್ರಮಾಣ ನವೆಂಬರ್‌ನಲ್ಲಿ 1.93% ಇದ್ದರೆ, ಡಿಸೆಂಬರ್‌ನಲ್ಲಿ 7.72%್ಕಕ್ಕೆ ತಲುಪಿದೆ. ಆಹಾರ ವಸ್ತುಗಳಲ್ಲಿ ತರಕಾರಿ ಬೆಲೆ 69.69% ಪ್ರಮಾಣದಲ್ಲಿ ಹೆಚ್ಚಿದ್ದು ಇದಕ್ಕೆ ಈರುಳ್ಳಿ ಬೆಲೆಏರಿಕೆ ಇದಕ್ಕೆ ಮೂಲಕಾರಣ ಎಂದು ತಿಳಿಸಲಾಗಿದೆ.

ಚಿಲ್ಲರೆ ಬೆಲೆ ಸೂಚ್ಯಾಂಕ ಡಿಸೆಂಬರ್‌ನಲ್ಲಿ 7.35%ಕ್ಕೆ ಹೆಚ್ಚಿರುವುದಾಗಿ ಸೋಮವಾರ ಬಿಡುಗಡೆಯಾಗಿರುವ ಅಂಕಿಅಂಶ ತಿಳಿಸಿತ್ತು. ತರಕಾರಿ ಬೆಲೆಯಲ್ಲಿ ಏರಿಕೆಯಾಗಿರುವ ಕಾರಣ ಮುಂದಿನ ತಿಂಗಳು ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News