ಇಕ್ಕಟ್ಟಿನಲ್ಲಿ ಸಿಕ್ಕ ಯಡಿಯೂರಪ್ಪ

Update: 2020-01-15 06:44 GMT

ರಾಜ್ಯ ಸಚಿವ ಸಂಪುಟ ವಿಸ್ತರಣೆ ಎಂಬುದು ಮುಖ್ಯ ಮಂತ್ರಿ ಯಡಿಯೂರಪ್ಪಅವರಿಗೆ ನುಂಗಲಾಗದ ತುತ್ತಾಗಿದೆ. ತಾವು ಅಧಿಕಾರಕ್ಕೆ ಬರಲು ನೆರವಾದ ಹದಿನೈದು ಶಾಸಕರಲ್ಲಿ ಹನ್ನೊಂದು ಮಂದಿಯನ್ನು ಗೆಲ್ಲಿಸಿಕೊಂಡು ಬಂದರು. ಆದರೆ ಮಂತ್ರಿ ಸ್ಥಾನ ನೀಡುವುದಾಗಿ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ನ್ಯಾಯ ಸಮ್ಮತವಾಗಿ ಹೇಳುವುದಾದರೆ ಮಂತ್ರಿ ಮಂಡಲ ವಿಸ್ತರಣೆ ಇಲ್ಲವೇ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ. ಆದರೆ ಬಿಜೆಪಿಯ ದ್ವಿಸದಸ್ಯ ಹೈಕಮಾಂಡ್ ಅವರ ಈ ಅಧಿಕಾರವನ್ನು ಕಿತ್ತುಕೊಂಡಿದೆ. ಸಂಪುಟ ವಿಸ್ತರಣೆಗೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಒಪ್ಪಿಗೆ ಬೇಕು.ಅವರ ಒಪ್ಪಿಗೆ ಪಡೆಯಲು ದಿಲ್ಲಿಗೆ ಹೊಗಬೇಕೆಂದರೆ ಅಮಿತ್ ಶಾ ಭೇಟಿಗೆ ಸಮಯ ಕೊಡುತ್ತಿಲ್ಲ. ಇತ್ತ ತಮ್ಮನ್ನು ಮಂತ್ರಿ ಮಾಡಬೇಕೆಂದು ಉಪಚುನಾವಣೆಯಲ್ಲಿ ಗೆದ್ದು ಬಂದ ಅನರ್ಹ ಶಾಸಕರು ಒತ್ತಡ ಹೇರುತ್ತಲೇ ಇದ್ದಾರೆ. ಹೀಗಾಗಿ ಯಡಿಯೂರಪ್ಪಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ಈ ಸಲದ ಅಧಿಕಾರ ಯಡಿಯೂರಪ್ಪನವರಿಗೆ ಯಾವ ನೆಮ್ಮದಿಯನ್ನೂ ತರಲಿಲ್ಲ. ಅಪ್ಪ ಮುಖ್ಯಮಂತ್ರಿಯಾಗಿದ್ದಾರೆಂದು ಅವರ ಮಕ್ಕಳೇನೊ ಖುಷಿಯಾಗಿದ್ದಾರೆ. ಆದರೆ ಆ ಖುಷಿ ಯಡಿಯೂರಪ್ಪನವರಿಗಿಲ್ಲ. ಅಧಿಕಾರ ವಹಿಸಿಕೊಂಡ ತಕ್ಷಣ ರಾಜ್ಯದಲ್ಲಿ ಉಂಟಾದ ನೆರೆ ಹಾವಳಿಯನ್ನು ನಿಭಾಯಿಸುವಲ್ಲಿ ಅವರು ಸುಸ್ತಾಗಿ ಹೋದರು.

ನೆರೆ ಹಾವಳಿಯಿಂದ ಉತ್ತರ ಕರ್ನಾಟಕದ ಮಾತ್ರವಲ್ಲ ಮಲೆನಾಡಿನ, ಮಧ್ಯ ಕರ್ನಾಟಕದ ಸಾವಿರಾರು ಜನರಿಗೆ ಈ ವರೆಗೆ ಪುನರ್ವಸತಿ ಕಲ್ಪಿಸಲು ಆಗಿಲ್ಲ. ಪ್ರವಾಹ ಬಂದಾಗ ಯಡಿಯೂರಪ್ಪನವರೇನೊ ದಣಿವರಿಯದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಓಡಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಡಿಯೂರಪ್ಪಒತ್ತಾಯಕ್ಕೆ ಮಣಿದು ನೆರೆಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಆದರೆ ಮೂಗಿಗೆ ತುಪ್ಪಸವರಿದ್ದನ್ನು ಬಿಟ್ಟರೆ ನಿರೀಕ್ಷಿತ ಪರಿಹಾರ ಬರಲೇ ಇಲ್ಲ.ಹಲವಾರು ಬಾರಿ ಮಾಡಿಕೊಂಡ ಮನವಿ ಅರಣ್ಯ ರೋದನವಾಯಿತು. ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿವರೆಗೆ ನಷ್ಟವಾಗಿದೆ. ರಾಜ್ಯ ಸರಕಾರ ಮೂವತ್ತು ಸಾವಿರ ಕೋಟಿ ರೂಪಾಯಿಗೆ ಮೊರೆಯಿಡುತ್ತಲೇ ಇದೆ. ಆದರೆ ಕೇಂದ್ರದ ಮೋದಿ ಸರಕಾರ ಜಪ್ಪೆನ್ನುತ್ತಿಲ್ಲ.

ಇದರಿಂದ ರೋಸಿ ಹೋದ ಯಡಿಯೂರಪ್ಪ ಇತ್ತೀಚೆಗೆ ಪ್ರಧಾನ ಮಂತ್ರಿ ತುಮಕೂರಿಗೆ ಬಂದಾಗ ಬಹಿರಂಗ ಸಭೆಯಲ್ಲಿ ಮನವಿ ಮಾಡಿದ್ದರು. ಈ ಮನವಿ ಮಾಡಿದ ನಂತರ ತಕ್ಷಣ ಪ್ರಧಾನಿ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದರೂ ದಿಲ್ಲಿಗೆ ವಾಪಸಾದ ನಂತರ ಕೇಂದ್ರ ಸರಕಾರ ನೆರೆ ಪರಿಹಾರಕ್ಕೆ ಒಂದಿಷ್ಟು ಹಣವನ್ನು ಬಿಡುಗಡೆ ಮಾಡಿತು. ಆದು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಇದ್ದಂತೆ. ಯಾವುದಕ್ಕೂ ಸಾಕಾಗುವುದಿಲ್ಲ. ಅಂತಲೇ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಹಣ ಬಿಡುಗಡೆ ಮಾಡಿದ್ದರಿಂದ ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಮುಖ್ಯ ಮಂತ್ರಿಗಳು ಸೋಮವಾರ ಬಾಯಿಬಿಟ್ಟು ಹೇಳಿದ್ದಾರೆ.

ಪ್ರಧಾನಿ ಎದುರು ಬಹಿರಂಗವಾಗಿ ನೆರೆ ಪರಿಹಾರ ಆಗ್ರಹ ಪಡಿಸಿದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪರಮೇಲೆ ಅಮಿತ್ ಶಾ ಕೋಪಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಅದೇನೇ ಇರಲಿ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲು ಇದು ಅಡ್ಡಿಯಾಗಬಾರದು.

ಕರ್ನಾಟಕದಿಂದ 25 ಬಿಜೆಪಿ ಸಂಸದರನ್ನು ಜನ ಚುನಾಯಿಸಿ ಕಳಿಸಿದ್ದಾರೆ. ನೆರೆ ಪರಿಹಾರ ಸೇರಿದಂತೆ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಈ ಸಂಸದರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಸಚಿವರು ಯಾರೂ ಬಾಯಿಬಿಡುತ್ತಿಲ್ಲ. ಹೇಳಬೇಕಾದುದನ್ನು ಬಿಟ್ಟು ಅವರು ಕೋಮು ಪ್ರಚೋದಕ ಮಾತುಗಳನ್ನಾಡುತ್ತಿದ್ದಾರೆ. ಇದರ ನಡುವೆ ಯಡಿಯೂರಪ್ಪ ಎಷ್ಟು ಅಪಹಾಸ್ಯಕ್ಕೀಡಾಗಿದ್ದಾರೆಂದರೆ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಮಂಗಳೂರಿನಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಪೊಲೀಸರ ಗುಂಡಿಗೆ ಬಲಿಯಾದವರ ಕುಟುಂಬಗಳಿಗೆ ಯಡಿಯೂರಪ್ಪತಲಾ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು. ಮರುದಿನವೇ ಮಡಿದವರ ಮನೆಗೆ ಪರಿಹಾರದ ಮೊತ್ತವನ್ನು ಜಿಲ್ಲಾಧಿಕಾರಿ ತಲುಪಿಸುತ್ತಾರೆ ಎಂದು ಹೇಳಿದರು. ಆದರೆ ಎರಡನೇ ದಿನ ತಮ್ಮ ಮಾತನ್ನು ತಾವೇ ನುಂಗಿ ಗಲಭೆಯಲ್ಲಿ ಪೊಲೀಸ್ ಗುಂಡಿಗೆ ಬಲಿಯಾದವರಿಗೆ ಒಂದು ಪೈಸೆ ಪರಿಹಾರ ನೀಡುವುದಿಲ್ಲ ಎಂದು ಅವಮಾನ ನುಂಗಿಕೊಂಡೇ ಹೇಳಿದರು. ಹೀಗೆ ಹೇಳುವಂತೆ ಅಮಿತ್ ಶಾ ಸಂದೇಶ ನೀಡಿದ್ದರೆಂದು ಬಿಜೆಪಿ ಒಳಗಿನ ವಲಯಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಇದೆ. ನೆರೆ ಪರಿಹಾರಕ್ಕೆ ಮೂವತ್ತು ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿದರೆ ಕೇವಲ ಹನ್ನೆರಡು ಸಾವಿರ ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ(ನರೇಗಾ) ರಾಜ್ಯಕ್ಕೆ ಬರಬೇಕಾದ 2,784 ಕೋಟಿ ರೂಪಾಯಿ ಬಿಡುಗಡೆ ಮಾಡಿಲ್ಲ. ಈ ಹಣ ಬಿಡುಗಡೆಯಾಗದ ಕಾರಣ ನರೇಗಾ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ. ವರ್ಷದಿಂದ ವರ್ಷಕ್ಕೆ ಶಿಕ್ಷಣ ಕ್ಷೇತ್ರದ ಬಜೆಟ್ ಕಡಿತ ಮಾಡುತ್ತ ಬರಲಾಗಿದೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ.

 ನಿಧಾನವಾಗಿ ಯಡಿಯೂರಪ್ಪಅವರ ಸ್ಥಾನ ಪಲ್ಲಟ ಮಾಡುವ ಮಸಲತ್ತು ನಡೆದಿದೆ ಎಂದು ಹೇಳಲಾಗುತ್ತಿದೆ. ಅವರ ಜಾಗಕ್ಕೆ ಸಂಘಪರಿವಾರದ ಕಟ್ಟಾಳುವನ್ನು ತಂದು ಕೂರಿಸುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಯಡಿಯೂರಪ್ಪತಾವಾಗಿ ಬಿಟ್ಟು ಹೋಗುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಕಡೆ ಗ್ರಾಮೀಣ ಜನರ ಬಾಯಲ್ಲಿ ಮಾತೊಂದು ಆಗಾಗ ಹರಿದಾಡುತ್ತಿರುತ್ತದೆ. ಯಾರನ್ನಾದರೂ ಮನೆಯಿಂದ ಹೊರಗೆ ಓಡಿಸಬೇಕಾದರೆ ಮನೆಯೊಳಗೆ ಹೊಗೆ ಎಬ್ಬಿಸಬೇಕು ಹೊಗೆ ತಾಳದೆ ಕೆಮ್ಮಿ, ಕೆಮ್ಮಿ ತಾವೇ ಹೊರಗೆ ಹೋಗುತ್ತಾರೆ. ಅಂಥ ಸ್ಥಿತಿಯಲ್ಲಿ ಈಗ ಯಡಿಯೂರಪ್ಪ ಇದ್ದಾರೆ. ಸದ್ಯ ಇದಾಗಲಿಕ್ಕಿಲ್ಲ, ಆದರೆ ಬರಲಿರುವ ದಿನಗಳಲ್ಲಿ ಏನಾಗುವುದೋ ಹೇಳಲು ಆಗುವುದಿಲ್ಲ. ರಾಜ್ಯಸಚಿವ ಸಂಪುಟ ವಿಸ್ತರಣೆ ಅವರಿಗೆ ಈಗ ನುಂಗಲಾಗದ ತುಪ್ಪವಾಗಿದೆ. ಮುಂಚಿನಂತೆ ಸಂಪುಟ ವಿಸ್ತರಣೆಯ ಪರಮಾಧಿಕಾರ ಮುಖ್ಯಮಂತ್ರಿಗಿಲ್ಲ. ಇದಕ್ಕೆ ಅಮಿತ್ ಶಾ ಒಪ್ಪಿಗೆ ಬೇಕು. ಆದರೆ ಅಮಿತ್ ಶಾ ಮುಖ್ಯಮಂತ್ರಿಗೆ ಸಿಗುತ್ತಿಲ್ಲ. ಈ ನಡುವೆ ತನ್ನನ್ನು ಉಪ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಸಚಿವ ರಾಮುಲು ಅಸಮಾಧಾನ, ಹತಾಶ ಸೋಮಶೇಖರ ರೆಡ್ಡಿಯವರ ಅರಚಾಟ, ಸಿಎಂ ಮಾತು ಕೇಳದ ಮಂತ್ರಿಗಳು, ಒಟ್ಟಾರೆ ಪರಿಸ್ಥಿತಿ ನಾಜೂಕಾಗಿದೆ. ಅಂತಲೇ ಯಡಿಯೂರಪ್ಪನವರ ದೇಗುಲ ಯಾತ್ರೆ, ಹೋಮ ಹವನಗಳು ಕೂಡಾ ಜೋರಾಗಿ ನಡೆದಿವೆ. ನಂಬಿದ ಪರಮಾತ್ಮನಿಗಿಂತ ದಿಲ್ಲಿ ಪರಮಾತ್ಮನ ಕೃಪಾಶೀರ್ವಾದ ದೊರೆತರೆ ಕುರ್ಚಿ ಉಳಿಯಬಹುದು. ಇಲ್ಲವೇ ಹೋಗಬಹುದು. ಏನು ಹೇಳುವುದೂ ಕಷ್ಟ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News