ಅಂಬೇಡ್ಕರ್ ಸ್ಮಾರಕ ಯೋಜನೆ: ಪ್ರತಿಮೆಯ ಎತ್ತರ 100 ಅಡಿ ಹೆಚ್ಚಿಸಲು ಮಹಾರಾಷ್ಟ್ರ ಸಂಪುಟದ ಒಪ್ಪಿಗೆ
Update: 2020-01-15 22:40 IST
ಮುಂಬೈ,ಜ.15: ಇಲ್ಲಿಯ ಇಂದು ಮಿಲ್ಸ್ ಕಂಪೌಂಡ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಎತ್ತರವನ್ನು ನೂರು ಅಡಿಗಳಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು, ಉದ್ದೇಶಿತ ಕಂಚಿನ ಪ್ರತಿಮೆಯ ಎತ್ತರವನ್ನು 350 ಅಡಿಗೆ ಹೆಚ್ಚಿಸಲಾಗುವುದು ಮತ್ತು ಆಧಾರಪೀಠದ ಸಹಿತ ಅಂಬೇಡ್ಕರ್ ಸ್ಮಾರಕದ ಒಟ್ಟು ಎತ್ತರ 450 ಅಡಿಗಳಷ್ಟಾಗಲಿದೆ ಎಂದರು.
ಯೋಜನೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಮತ್ತು ಹಣಕಾಸಿನ ಕೊರತೆಯಿಲ್ಲ. ಉದ್ದೇಶಿತ ಸ್ಮಾರಕವು ಸಭಾಂಗಣ,ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರವನ್ನೂ ಒಳಗೊಂಡಿರಲಿದೆ ಎಂದು ವಿತ್ತಸಚಿವರೂ ಆಗಿರುವ ಪವಾರ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 2015ರಲ್ಲಿ ಯೋಜನೆಗೆ ಶಿಲಾನ್ಯಾಸವನ್ನು ನೆರವೇರಿಸಿದ್ದರು.