ಜೆಎನ್‌ಯು ಮತ್ತು ಶಿವಾಜಿ ಪುಸ್ತಕ ಕುರಿತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತ್ಯೇಕ ಮಾನದಂಡಗಳೇಕೆ?: ಶಿವಸೇನೆ

Update: 2020-01-15 17:25 GMT

ಮುಂಬೈ,ಜ.15: ಜೆಎನ್‌ಯು ಹಿಂಸಾಚಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಹೋಲಿಸಿರುವ ವಿವಾದಾತ್ಮಕ ಪುಸ್ತಕದ ಕುರಿತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತ್ಯೇಕ ಮಾನದಂಡಗಳನ್ನು ಏಕೆ ಅನುಸರಿಸಲಾಗುತ್ತಿದೆ ಎಂದು ಶಿವಸೇನೆ ತನ್ನ ಮಾಜಿ ಮಿತ್ರಪಕ್ಷ ಬಿಜೆಪಿಯನ್ನು ಬುಧವಾರ ಪ್ರಶ್ನಿಸಿದೆ. ವಿ.ಡಿ.ಸಾವರ್ಕರ್ ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಆದೇಶ ಹೊರಡಿಸುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಆಗ್ರಹಿಸಿರುವ ಪಕ್ಷದ ಮುಖವಾಣಿ ‘ಸಾಮನಾ’ದಲ್ಲಿಯ ಸಂಪಾದಕೀಯವು, ಸಾವರ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡುವಂತೆಯೂ ಒತ್ತಾಯಿಸಿದೆ.

ದಿಲ್ಲಿಯ ಬಿಜೆಪಿ ಮುಖಂಡ ಜಯ್ ಭಗವಾನ ಗೋಯಲ್ ಬರೆದಿರುವ ‘ಆಜ್ ಕೆ ಶಿವಾಜಿ,ನರೇಂದ್ರ ಮೋದಿ’ ಪುಸ್ತಕವು ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. 17ನೇ ಶತಮಾನದಲ್ಲಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದಲ್ಲಿ ಆರಾಧ್ಯ ಪುರುಷನಾಗಿದ್ದಾರೆ.

ಅಷ್ಟೇನೂ ಪರಿಚಿತನಲ್ಲದ ಬಿಜೆಪಿ ಕಾರ್ಯಕರ್ತ ಪುಸ್ತಕವನ್ನು ಪ್ರಕಟಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ಬಿಜೆಪಿ ಆತನನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಇದಕ್ಕಾಗಿಯೇ ಹೋರಾಡುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳ ಪ್ರಕರಣದಲ್ಲಿ ಈ ನೀತಿಯನ್ನು ಅನುಕೂಲಕರವಾಗಿ ಮರೆಯುತ್ತಿದೆ ಎಂದು ಶಿವಸೇನೆಯು ಹೇಳಿದೆ.

ಪುಸ್ತಕವನ್ನು ನಿಷೇಧಿಸುವಂತೆ ಆಗ್ರಹಿಸಿರುವ ಶಿವಸೇನೆ,ಬಿಜೆಪಿಯು ಗೋಯಲ್‌ರನ್ನು ಪಕ್ಷದಿಂದ ಇನ್ನೂ ಉಚ್ಚಾಟಿಸಿಲ್ಲವೇಕೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದೆ.

ಈ ವಿವಾದ ಶಾಶ್ವತವಾಗಿ ಬಗೆಹರಿಯಬೇಕು ಎಂದು ಶಿವಸೇನೆ ಬಯಸಿದೆ. ಆದರೆ ಲೇಖಕ ಪುಸ್ತಕವನ್ನು ಪುನರ್‌ರಚಿಸಲು ದೃಢನಿರ್ಧಾರ ಮಾಡಿರುವಂತಿದೆೆ,ಅಂದರೆ ವಿವಾದ ಇನ್ನೂ ಮುಗಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದಿರುವ ಸಂಪಾದಕೀಯವು,ವಿವಾದವು ತೀವ್ರಗೊಂಡ ಬಳಿಕವೇ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಪುಸ್ತಕವನ್ನು ಹಿಂದೆಗೆದುಕೊಳ್ಳುವುದಾಗಿ ಟ್ವೀಟಿಸಿದ್ದಾರೆ ಎಂದು ಬೆಟ್ಟು ಮಾಡಿದೆ.

ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಹಳೆಯ ಬೇಡಿಕೆಯನ್ನು ಮತ್ತೆ ಕೆದಕಿರುವ ಸಂಪಾದಕೀಯವು, ಅವರಿಗೆ ತಕ್ಷಣ ಈ ಪ್ರಶಸ್ತಿಯನ್ನು ಪ್ರದಾನಿಸಬೇಕು, ಅವರ ಹೆಸನ್ನು ರಾಷ್ಟ್ರೀಯ ನಾಯಕರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News