‘ಭೋಗಾಲಿ ಬಿಹು’ ಉತ್ಸವದಲ್ಲಿ ಪೌರತ್ವ ಕಾಯ್ದೆಯ ಪ್ರತಿಗಳನ್ನು ದಹಿಸಿದ ಅಸ್ಸಾಂನ ಜನರು

Update: 2020-01-15 17:38 GMT

ಗುವಾಹಟಿ,ಜ.15: ‘ಮಾಘ ಬಿಹು’ ಎಂದೂ ಕರೆಯಲಾಗುವ ‘ಭೋಗಾಲಿ ಬಿಹು’ ಕೊಯ್ಲಿನ ಹಬ್ಬವನ್ನು ಆಚರಿಸುತ್ತಿರುವ ಅಸ್ಸಾಮಿನ ಜನರು ಬುಧವಾರ ಈ ಸಂದರ್ಭದಲ್ಲಿ ಆಚರಿಸಲಾಗುವ ‘ಮೇಜಿ’ ದೀಪೋತ್ಸವಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ಪ್ರತಿಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಾಗಿನಿಂದಲೂ ಅಸ್ಸಾಮಿನಲ್ಲಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಉತ್ಸವದ ಅಂಗವಾಗಿ ಸೂರ್ಯೋದಯಕ್ಕೆ ಮುನ್ನ ಬಿದಿರು, ಹುಲ್ಲು ಮತ್ತು ಕಟ್ಟಿಗೆಯಿಂದ ನಿರ್ಮಿಸಲಾದ ಮೇಜುಗಳನ್ನು ಪ್ರಜ್ವಲಿಸಲಾಗುತ್ತದೆ ಹಾಗೂ ಮನೆಯಲ್ಲಿ ತಯಾರಿಸಿದ ಲಡ್ಡುಗಳು ಮತ್ತು ಅಕ್ಕಿಯ ಕೇಕ್ ಅನ್ನು ದೇವರಿಗೆ ಅರ್ಪಿಸಲಾಗುತ್ತದೆ.

ಸಿಎಎ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ಆಸು, ಎಜೆವೈಸಿಪಿ, ಎಎನ್‌ಎಂ ಮತ್ತು ಕೆಎಂಎಸ್‌ಎಸ್‌ ನಂತಹ ಸಂಘಟನೆಗಳು ಮತ್ತು ಇತರ ಸಾಮಾಜಿಕ ಗುಂಪುಗಳು ಉತ್ಸವದ ವೇಳೆ ಕಾಯ್ದೆಯ ಪ್ರತಿಗಳನ್ನು ಸುಡುವಂತೆ ಜನರಿಗೆ ಕರೆ ನೀಡಿವೆ.

‘ರೊಂಗಾಲಿ ಬಿಹು’ಗೆ ಮುನ್ನಾದಿನವಾದ ಮಂಗಳವಾರ ರಾಜ್ಯಾದ್ಯಂತ ನಡೆದ ‘ಉರುಕಾ’ ಸಮುದಾಯ ಹಬ್ಬಗಳಲ್ಲಿಯೂ ಸಿಎಎಗೆ ವಿರೋಧ ಪ್ರಾಮುಖ್ಯ ಪಡೆದುಕೊಂಡಿತ್ತು. ಹಬ್ಬಕ್ಕೆ ಸೇರಿದ ಜನರು ಸಿಎಎ ಬಗ್ಗೆ ಚರ್ಚಿಸುತ್ತಿದ್ದುದು ಕಂಡು ಬಂದಿತ್ತು. ‘ಉರುಕಾ’ಕ್ಕಾಗಿ ತಾತ್ಕಾಲಿಕವಾಗಿ ನಿರ್ಮಿಸಲಾದ ‘ಭೇಲಾಘರ್’ ಎಂದು ಕರೆಯಲಾಗುವ ಹುಲ್ಲಿನ ಚಪ್ಪರಗಳಲ್ಲಿ ಸಿಎಎ ವಿರೋಧಿ ಬ್ಯಾನರ್‌ಗಳು ರಾರಾಜಿಸುತ್ತಿದ್ದವು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಐವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜನರಲ್ಲಿ ಉತ್ಸವ ಆಚರಣೆಯ ಉತ್ಸಾಹ ಕಡಿಮೆಯಾದಂತಿತ್ತು. ಉತ್ಸವಕ್ಕೆ ಅಗತ್ಯ ಸಾಮಗ್ರಿಗಳ ಮಾರಾಟವೂ ಕುಸಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News