ಮುಖ್ಯಮಂತ್ರಿಗೆ ಸ್ವಾಮೀಜಿಯ ಬೆದರಿಕೆ ಎಷ್ಟು ಸರಿ? ಎಷ್ಟು ತಪ್ಪು ?

Update: 2020-01-16 06:07 GMT

ದಾವಣಗೆರೆಯಲ್ಲಿ ನಡೆದ ಬೃಹತ್ ಜಾತಿ ಸಮಾವೇಶವೊಂದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮುಜುಗರಕ್ಕೀಡಾಗುವಂತಹ ಸನ್ನಿವೇಶ ನಿರ್ಮಾಣವಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲೇ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಸ್ವಾಮೀಜಿಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸಮುದಾಯಕ್ಕೆ ಸೇರಿದ ಶಾಸಕರಿಗೆ ಸಚಿವ ಸ್ಥಾನ ಸಿಗಲೇ ಬೇಕು. ಇಲ್ಲದೇ ಇದ್ದರೆ, ಮುಂದಿನ ದಿನಗಳಲ್ಲಿ ಸರಕಾರ ಉಳಿಯುವುದಿಲ್ಲ ಎಂಬ ಬೆದರಿಕೆಯನ್ನು ಹಾಕಿದರು. ಈ ಬೆದರಿಕೆ ಎಷ್ಟು ತೀವ್ರವಾಗಿತ್ತು ಎಂದರೆ, ಮುಖ್ಯಮಂತ್ರಿ ಎದ್ದು ನಿಂತು ‘‘ನೀವು ಹೀಗೆಲ್ಲ ಬೆದರಿಕೆಯೊಡ್ಡಬಾರದು. ಹೀಗಾದಲ್ಲಿ ನಾನು ರಾಜೀನಾಮೆ ನೀಡಬೇಕಾಗುತ್ತದೆ’’ ಎಂದು ಕುರ್ಚಿಯಿಂದ ಎದ್ದು ನಿಂತರು. ಯಡಿಯೂರಪ್ಪ ಮುಖ್ಯಮಂತ್ರಿಯೆನ್ನುವ ಮುಳ್ಳಿನ ಕುರ್ಚಿಯಲ್ಲಿ ಕೂತು ಅನುಭವಿಸುತ್ತಿರುವ ಹಿಂಸೆಯ ತಾರಕವನ್ನು ಈ ಪ್ರಕರಣ ಬಯಲುಗೊಳಿಸಿದೆ.

ಈ ನಾಡಿನ ಮುಖ್ಯಮಂತ್ರಿಯ ಸ್ಥಿತಿ ಎಷ್ಟರ ಮಟ್ಟಿಗೆ ದಯನೀಯವಾಗಿದೆಯೆಂದರೆ, ವೇದಿಕೆಯಲ್ಲೇ ಅವರಿಗೆ ಬಹಿರಂಗವಾಗಿ ಒಬ್ಬ ಸ್ವಾಮೀಜಿ ಬೆದರಿಕೆ ಹಾಕುವ ಮಟ್ಟಿಗೆ. ಅದನ್ನು ಪ್ರತಿಭಟಿಸಿ ವೇದಿಕೆಯಿಂದ ಎದ್ದು ಹೋಗುವ ಆತ್ಮಸ್ಥೈರ್ಯ ಕೂಡ ಯಡಿಯೂರಪ್ಪರಲ್ಲಿ ಇದ್ದಿರಲಿಲ್ಲ. ಸಿದ್ದಗಂಗಾಮಠದ ಸ್ವಾಮೀಜಿಗಳನ್ನು ಹೊರತು ಪಡಿಸಿ, ಬಹುತೇಕ ಸ್ವಾಮೀಜಿಗಳು ರಾಜಕೀಯದ ಜೊತೆಗೆ, ರಾಜಕಾರಣಿಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿದ್ದಾರೆ. ಮಠಗಳೆಂದರೆ, ರಾಜಕೀಯ ಸಂಚುಗಳು ರೂಪುಗೊಳ್ಳುವ ಮನೆಗಳು ಎಂದೇ ಹೇಳಲಾಗುತ್ತದೆ. ವಿವಿಧ ಪ್ರಬಲ ಜಾತಿಗಳ ನಾಯಕರು, ಈ ಸ್ವಾಮೀಜಿಗಳ ಮೂಲಕವೇ ತಮ್ಮ ರಾಜಕೀಯ ಅಸ್ತಿತ್ವವನ್ನು ಗುರುತಿಸುತ್ತಾರೆ. ಪೇಜಾವರ ಶ್ರೀಗಳೂ ಇದಕ್ಕೆ ಹೊರತಾಗಿರಲಿಲ್ಲ. ಬಿಜೆಪಿಯ ರಾಮಜನ್ಮಭೂಮಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಪೇಜಾವರರು, ‘ಬ್ರಾಹ್ಮಣರಿಗೂ ರಾಜಕೀಯ ಸ್ಥಾನಗಳು ಸಿಗಬೇಕು’ ಎಂದು ಒತ್ತಾಯಿಸುತ್ತಿದ್ದರು.

ಪೇಜಾವರರು ಸದಾ ‘ಹಿಂದೂ’ ಪದ ಬಳಸುತ್ತಿದ್ದರೂ, ರಾಜಕೀಯವಾಗಿ ಬ್ರಾಹ್ಮಣ ಸಮುದಾಯದ ಹಿತಾಸಕ್ತಿಯನ್ನು ಬಯಸಿದ್ದರು. ‘ಹಿಂದೂ’ ಹೆಸರಿನಲ್ಲಿ ಬಿಜೆಪಿ ವೋಟು ಕೇಳುತ್ತದೆಯಾದರೂ, ಅಧಿಕಾರ ಹಂಚುವ ಸಂದರ್ಭದಲ್ಲಿ ಜಾತಿ ಮುನ್ನೆಲೆಗೆ ಬರುತ್ತದೆ. ಕೇಂದ್ರ ಸಚಿವರಾಗಿರುವ ಸದಾನಂದ ಗೌಡರು ಒಕ್ಕಲಿಗರ ಸಮಾವೇಶದಲ್ಲಿ ‘ನಾನು ಮುಖ್ಯಮಂತ್ರಿಯಾಗುವುದಕ್ಕೆ, ರಾಜಕೀಯದಲ್ಲಿ ಮೇಲೇರುವುದಕ್ಕೆ ಒಕ್ಕಲಿಗರೇ ಕಾರಣ’ ಎಂದು ಘೋಷಿಸಿದ್ದರು. ಹಾಗಾದರೆ ಅವರು ಪ್ರತಿಪಾದಿಸುತ್ತಾ ಬಂದಿರುವ ಹಿಂದುತ್ವಕ್ಕೆ ಏನು ಅರ್ಥ ಉಳಿಯಿತು? ಡಿಕೆಶಿ ಅವರ ಬಂಧನವಾದಾಗ ಒಕ್ಕಲಿಗರೆಲ್ಲ ಬೀದಿಗಿಳಿದಿದ್ದರು. ಒಕ್ಕಲಿಗರ ಸ್ವಾಮೀಜಿಗಳು ಬಹಿರಂಗವಾಗಿಯೇ ಸರಕಾರಕ್ಕೆ ಸವಾಲು ಹಾಕಿದ್ದರು. ಇದೀಗ ಪಂಚಮಸಾಲಿ ಮಠದ ಸ್ವಾಮೀಜಿಗಳ ಸರದಿ. ‘ಒಬ್ಬ ಸ್ವಾಮೀಜಿ ಸಮುದಾಯದ ವೇದಿಕೆಯಲ್ಲಿ ನಿರ್ದಿಷ್ಟ ವ್ಯಕ್ತಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸುವುದು, ಮುಖ್ಯಮಂತ್ರಿಗೆ ಬೆದರಿಕೆ ಒಡ್ಡುವುದು ಎಷ್ಟು ಸರಿ?’ ಎಂಬ ಪ್ರಶ್ನೆ ಈಗ ಚರ್ಚೆಯಲ್ಲಿದೆ. ಆದರೆ ಈ ಪ್ರಕರಣದಲ್ಲಿ ಸ್ವಾಮೀಜಿಯ ತಪ್ಪೇನು ಇಲ್ಲ. ಇಂತಹದೊಂದು ಸನ್ನಿವೇಶವನ್ನು ಸ್ವತಃ ಯಡಿಯೂರಪ್ಪರವರೇ ನಿರ್ಮಿಸಿಕೊಂಡಿದ್ದಾರೆ. ತಾವು ಬಿತ್ತಿರುವುದನ್ನೇ ಕೊಯ್ಯುತ್ತಿದ್ದಾರೆ.

ಕಳೆದ ಉಪಚುನಾವಣೆಯಲ್ಲಿ ಯಡಿಯೂರಪ್ಪ ಬಹಿರಂಗವಾಗಿಯೇ ಲಿಂಗಾಯತ ಸಮುದಾಯದ ಬೆಂಬಲವನ್ನು ಯಾಚಿಸಿದ್ದರು. ‘‘ಲಿಂಗಾಯತರು ನನ್ನ ಕೈ ಬಿಡುವುದಿಲ್ಲ’’ ಎಂದು ಹೇಳಿದ್ದರು. ಉಪಚುನಾವಣೆಯಲ್ಲಿ ಯಡಿಯೂರಪ್ಪ ಹಿನ್ನಡೆ ಅನುಭವಿಸಿದರೆ ಅದು ಲಿಂಗಾಯತ ಸಮುದಾಯಕ್ಕೆ ಆಗುವ ಹಿನ್ನಡೆ ಎಂಬಂತೆ ಬಿಂಬಿಸಿದ್ದರು. ಯಡಿಯೂರಪ್ಪರ ಮಾತುಗಳನ್ನು ನಂಬಿ ಲಿಂಗಾಯತ ಸ್ವಾಮೀಜಿಗಳೂ ಅವರ ಹಿಂದೆ ನಿಂತಿದ್ದರು.‘ಜಾತಿಯ ಹೆಸರಲ್ಲಿ ಮತಗಳು ಬೇಕು. ಆದರೆ ಅವರಿಗೆ ಅಧಿಕಾರ ನೀಡುವುದು ಸಾಧ್ಯವಿಲ್ಲ’ ಎಂದರೆ ಅದು ಹೇಗೆ ಸಾಧ್ಯ? ಲಿಂಗಾಯತರ ಬಲದಿಂದ ಗೆದ್ದಿರುವುದು ಎನ್ನುವುದನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದರೆ, ಅವರನ್ನು ಗೆಲ್ಲಿಸಿದ ಸ್ವಾಮೀಜಿಗಳು ಅವರಿಗೆ ಆದೇಶ ನೀಡುವುದರಲ್ಲಿ ತಪ್ಪೇನು? ಸ್ವಾಮೀಜಿ ತರಾಟೆಗೆ ತೆಗೆದುಕೊಂಡಿರುವುದು ತಪ್ಪೇ ಆಗಿದ್ದರೆ, ಲಿಂಗಾಯತರೆಲ್ಲ ನನ್ನ ಜಾತಿ ನೋಡಿ ಗೆಲ್ಲಿಸಬೇಕು ಎಂದು ಕರೆ ನೀಡುವುದು ಸರಿಯೇ? ಜಾತ್ಯತೀತನಾಗಿ ಜನರಿಂದ ಮತ ಪಡೆದ ರಾಜಕಾರಣಿಯಷ್ಟೇ ಯಾರೂ ತನಗೆ ಒತ್ತಾಯ ಮಾಡಬಾರದು ಎಂದು ಹೇಳುವ ನೈತಿಕತೆಯನ್ನು ಪಡೆಯುತ್ತಾನೆ. ಆದರೆ ಇಂದಿನ ರಾಜಕಾರಣಿಗಳು ತನ್ನನ್ನು ಮತದಾರರು ಗೆಲ್ಲಿಸಿದ್ದಾರೆ ಎಂದು ಭಾವಿಸಿದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಲಿಂಗಾಯತ ಬಲದಿಂದ ಗೆದ್ದಿದ್ದೇನೆ, ಒಕ್ಕಲಿಗರ ಬಲದಿಂದ ಗೆದ್ದಿದ್ದೇನೆ ಎನ್ನುವ ರಾಜಕಾರಣಿಗಳು ಅಂತಿಮವಾಗಿ ಸಂವಿಧಾನಕ್ಕೆ ಬದಲಾಗಿ ಸ್ವಾಮೀಜಿಗಳ ಆದೇಶಗಳನ್ನೇ ಪಾಲಿಸಬೇಕಾಗುತ್ತದೆ. ಅವರ ಪಾಲಿಗೆ ಸಂವಿಧಾನಕ್ಕಿಂತ ಸ್ವಾಮೀಜಿಗಳೇ ದೊಡ್ಡವರಾಗಿರುತ್ತಾರೆ. ಇಂದು ಯಡಿಯೂರಪ್ಪ ಒಳ ಹೊರಗಿನ ಒತ್ತಡಗಳಿಂದ ಹೈರಾಣಾಗಿರುವುದು ಎದ್ದು ಕಾಣುತ್ತಿದೆ. ಸಂಪುಟ ವಿಸ್ತರಣೆ ಅವರ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಮುಖ್ಯವಾಗಿ ವಿರೋಧ ಪಕ್ಷಗಳಿಗಿಂತ ಪಕ್ಷದೊಳಗಿರುವ ವಿರೋಧಿಗಳೇ ಅವರಿಗೆ ಸವಾಲಾಗಿದ್ದಾರೆ. ಆರೆಸ್ಸೆಸ್ ಮುಖಂಡ ಸಂತೋಷ್ ಮತ್ತು ಯಡಿಯೂರಪ್ಪರ ನಡುವೆ ಶೀತಲ ಯುದ್ಧ ನಡೆಯುತ್ತಿದೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಮತ್ತು ಬಿಜೆಪಿಯೊಳಗಿರುವ ಹಾಲಿ ಶಾಸಕರ ನಡುವೆ ದೊಡ್ಡ ಸಂಘರ್ಷವೇ ಶುರುವಾಗಿದೆ. ಇದರ ಲಾಭವನ್ನು ತನ್ನದಾಗಿಸಿಕೊಳ್ಳಲು ಸಂತೋಷ್ ತಂಡ ಹೊಂಚಿ ಹಾಕಿ ಕಾಯುತ್ತಿದೆ.

ಕೇಂದ್ರ ವರಿಷ್ಠರ ಮೇಲೆ ಯಡಿಯೂರಪ್ಪರಿಗಿಂತ ಸಂತೋಷ್ ಅವರಿಗೆ ಹೆಚ್ಚು ಪ್ರಭಾವವಿದೆ. ರಾಜ್ಯಕ್ಕೆ ಕೇಂದ್ರದ ನೆರವು ಸಿಗದೇ ಇರಲು ಸಂತೋಷ್ ಪಾತ್ರ ಬಹುದೊಡ್ಡದು. ಯಡಿಯೂರಪ್ಪ ಸರಕಾರ ಆಡಳಿತಾತ್ಮಕವಾಗಿ ವಿಫಲವಾಗಬೇಕು ಎನ್ನುವುದೇ ಅವರ ಉದ್ದೇಶ. ತನ್ನನ್ನು ನಂಬಿ ಬಂದಿರುವ ಹೊಸ ಶಾಸಕರನ್ನು ಕೈ ಬಿಡಲಾಗದೆ, ಬಿಜೆಪಿಯೊಳಗಿರುವ ಶಾಸಕರನ್ನು ಸಮಾಧಾನಿಸಲಾಗದೆ ಯಡಿಯೂರಪ್ಪ ಜರ್ಜರಿತರಾಗಿದ್ದಾರೆ. ದಾವಣಗೆರೆಯ ಸಮಾವೇಶದಲ್ಲಿ ಅದು ಸ್ಫೋಟಗೊಂಡಿದೆ. ಉಪಚುನಾವಣೆ ನಡೆದು ಸರಕಾರ ಸುಭದ್ರವಾದ ಬಳಿಕವೂ ಯಡಿಯೂರಪ್ಪ ಅವರಿಗೆ ಸರಕಾರ ನಡೆಸುವುದಕ್ಕೆ ಕಷ್ಟವಾಗುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ‘ಹೀಗಾದರೆ ನಾನು ರಾಜೀನಾಮೆ ನೀಡುತ್ತೇನೆ’ ಎನ್ನುವ ಯಡಿಯೂರಪ್ಪರ ಹೇಳಿಕೆ ಆಕಸ್ಮಿಕವಾಗಿ ಬಂದಿರುವುದಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಅವರು ರಾಜೀನಾಮೆ ನೀಡಲೇಬೇಕಾಗುತ್ತದೆ. ಅಲ್ಲಿಂದ ಬಿಜೆಪಿಯೊಳಗೆ ಯಡಿಯೂರಪ್ಪರ ಯುಗವೊಂದು ಮುಗಿಯಲಿದೆ. ಯಡಿಯೂರಪ್ಪರ ರಾಜಕೀಯ ಬದುಕು ಹೊಸ ತಿರುವನ್ನು ಪಡೆದುಕೊಳ್ಳುವ ಸಾಧ್ಯತೆಗಳೂ ಇವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News