ಚುನಾವಣಾ ಬಾಂಡ್ ನಿಂದ ಬಿಜೆಪಿಗೆ 1,450 ಕೋ. ರೂ. ದೇಣಿಗೆ!

Update: 2020-01-16 07:27 GMT

ಹೊಸದಿಲ್ಲಿ, ಜ. 15: ಬಿಜೆಪಿ 2018-19ರಲ್ಲಿ 2,410 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದೆ. ಇದರಲ್ಲಿ 1,450 ಕೋಟಿ ರೂಪಾಯಿ ದೇಣಿಗೆ ಚುನಾವಣಾ ಬಾಂಡ್‌ಗಳ ಮೂಲಕ ಬಂದಿದೆ ಎಂದು ಚುನಾವಣಾ ಕಾವಲು ಸಮಿತಿ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.

 ಕಾಂಗ್ರೆಸ್ 918.03 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರಲ್ಲಿ 383.26 ಕೋಟಿ ರೂಪಾಯಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ಕೆಯ ಬ್ರಾಂಡ್‌ಗಳಿಂದ ಖರೀದಿಸಲು ಹಾಗೂ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಸಾಧ್ಯವಾಗುವ ಚುನಾವಣಾ ಬಾಂಡ್‌ಗಳ ರೂಪದಲ್ಲಿ ಸಂಗ್ರಹಿಸಲಾಗಿದೆ.

2018-19 ಹಣಕಾಸು ವರ್ಷದ ಸಂದರ್ಭ 6 ರಾಷ್ಟ್ರೀಯ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸಂಗ್ರಹದ ಆದಾಯ ಒಟ್ಟು 1,931.43 ಕೋಟಿ ರೂಪಾಯಿ ಎಂದು ಬುಧವಾರ ಬಿಡುಗಡೆ ಮಾಡಲಾದ ಎಡಿಆರ್ ವರದಿ ಹೇಳಿದೆ.

ಚುನಾವಣಾ ಬಾಂಡ್ ಮೂಲಕ ಬಿಜೆಪಿ 1,450.89 ಕೋಟಿ ರೂಪಾಯಿ, ಕಾಂಗ್ರೆಸ್ 383.26 ಕೋಟಿ ರೂಪಾಯಿ ಹಾಗೂ ಟಿಎಂಸಿ 97.28 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿದೆ ಎಂದು ಅದು ಹೇಳಿದೆ. 2018-19ರ ಹಣಕಾಸು ವರ್ಷದಲ್ಲಿ ಒಟ್ಟು ಆದಾಯ ಎಂದು ಟಿಎಂಸಿ 192.65 ಕೋಟಿ ರೂಪಾಯಿ, ಸಿಪಿಎಂ 100.96 ಕೋಟಿ ರೂಪಾಯಿ ಹಾಗೂ ಬಿಎಸ್ಪಿ 69.79 ಕೋಟಿ ರೂಪಾಯಿ ಘೋಷಿಸಿಕೊಂಡಿದೆ ಎಂದು ಎಡಿಆರ್ ವರದಿ ಹೇಳಿದೆ. 2017-18ರಲ್ಲಿ ಬಿಜೆಪಿಯ ಆದಾಯ 1,027.34 ಕೋಟಿ ರೂಪಾಯಿಯಿಂದ 2,410.08 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಾಂಗ್ರೆಸ್ ಆದಾಯ 199.15 ಕೋಟಿ ರೂಪಾಯಿಯಿಂದ 918.03 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಅದು ತಿಳಿಸಿದೆ. ಚುನಾವಣಾ ಪ್ರಚಾರಕ್ಕೆ ಬಿಜೆಪಿ 792.39 ಕೋಟಿ ರೂಪಾಯಿ, ಕಾಂಗ್ರೆಸ್ 308.96 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಎಡಿಆರ್ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News