ಪೊಲೀಸರ ‘ಜಲಿಯನ್‌ವಾಲಾಬಾಗ್’ಗೆ ಮಂಗಳೂರು ನೀಡಿದ ಉತ್ತರ

Update: 2020-01-17 06:01 GMT

ಕೋವಿಯಿಂದ ಹೋರಾಟಗಳನ್ನು ದಮನಿಸಬಹುದು ಎಂದಾಗಿದ್ದರೆ ಪ್ರಥಮ ಸ್ವಾತಂತ್ರ ಹೋರಾಟದ ಮಹಾ ಹತ್ಯಾಕಾಂಡದೊಂದಿಗೆ ಬ್ರಿಟಿಷರ ವಿರುದ್ಧದ ಹೋರಾಟ ಮುಗಿದು ಹೋಗಬೇಕಾಗಿತ್ತು. ಅದನ್ನು ‘ಸಿಪಾಯಿ ದಂಗೆ’ ಎಂದು ಬ್ರಿಟಿಷರು ಕರೆದು ಹೋರಾಟದ ಘನತೆಯನ್ನು ತಗ್ಗಿಸಲು ನೋಡಿದರು. ಆದರೆ ಆ ದಮನ ಮುಂದಿನ ದಿನಗಳಲ್ಲಿ ಸ್ವಾತಂತ್ರ ಹೋರಾಟದಲ್ಲಿ ಜನಸಾಮಾನ್ಯರ ಅಧಿಕೃತ ಪ್ರವೇಶಕ್ಕೆ ಕಾರಣವಾಯಿತು. ಸೈನಿಕರು, ತುಂಡರಸರಿಗೆ ಸೀಮಿತವಾಗಿದ್ದ ಹೋರಾಟ ನಿಧಾನಕ್ಕೆ ಈ ನೆಲದ ಜನರ ಹೋರಾಟವಾಗಿ ರೂಪ ಪಡೆಯಿತು. ಇದಾದ ಬಳಿಕ ದೇಶವನ್ನೇ ಬೆಚ್ಚಿ ಬೀಳಿಸುವ ಇನ್ನೊಂದು ಹತ್ಯಾಕಾಂಡವನ್ನು ಬ್ರಿಟಿಷರು ಸಂಘಟಿಸಿದರು. ಅದು ‘ಜಲಿಯನ್‌ವಾಲಾಬಾಗ್ ಹತ್ಯಾಕಾಂಡ’ ಎಂದು ಇತಿಹಾಸದಲ್ಲಿ ಕುಖ್ಯಾತವಾಗಿದೆ.

ಈ ಹತ್ಯಾಕಾಂಡದ ಉದ್ದೇಶವೇ ಜನ ಚಳವಳಿಗಳನ್ನು ಶಾಶ್ವತವಾಗಿ ದಮನ ಮಾಡುವುದು. ಕೈಯಲ್ಲಿ ಯಾವುದೇ ಮಾರಕ ಆಯುಧಗಳಿಲ್ಲದ ಸಾವಿರಾರು ಜನರನ್ನು ಸುತ್ತುವರಿದು ಬ್ರಿಟಿಷರು ಕೊಂದು ಹಾಕಿದರು. ಆ ಹತ್ಯಾಕಾಂಡದ ರಕ್ತಸಿಕ್ತ ಮಣ್ಣು ‘ಭಗತ್ ಸಿಂಗ್’ರಂತಹ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರನನ್ನು ಹುಟ್ಟು ಹಾಕಿತು. ಮುಂದೆ ಚಂದ್ರಶೇಖರ ಆಝಾದ್‌ರಂತಹ ಉಗ್ರ ಕ್ರಾಂತಿಕಾರಿಗಳನ್ನು ರೂಪಿಸುವಲ್ಲೂ ಜಲಿಯನ್‌ವಾಲಾಬಾಗ್ ಪಾತ್ರವಹಿಸಿತು. ಆ ಬಳಿಕ ಭಗತ್ ಸಿಂಗ್ ಮತ್ತು ಆತನ ಸಹಚರರನ್ನು ಗಲ್ಲಿಗೇರಿಸುವ ಮೂಲಕ ಹೋರಾಟವನ್ನು ದಮನಿಸಬಹುದು ಎಂದು ಬ್ರಿಟಿಷರು ಭಾವಿಸಿದರು. ಆದರೆ ಭಗತ್‌ಸಿಂಗ್‌ನ ಬಲಿದಾನ ದೇಶದಲ್ಲಿ ದೊಡ್ಡ ಮಟ್ಟದ ಚಳವಳಿಯೊಂದು ಹರಡುವುದಕ್ಕೆ ಕಾರಣವಾಯಿತು. ಕಟ್ಟಕಡೆಗೆ ಬ್ರಿಟಿಷರು ಈ ದೇಶವನ್ನು ಬಿಟ್ಟು ತೊಲಗಬೇಕಾದರ ವಾತಾವರಣವನ್ನು ಅದು ನಿರ್ಮಿಸಿತು. ಇತಿಹಾಸ ಪುನರಾವರ್ತನೆಯಾಗುತ್ತಿದೆ. ಯಾರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದೇ ಬ್ರಿಟಿಷರ ಜೊತೆಗೆ ನಿಂತಿದ್ದರೋ ಅವರೇ ಇಂದು ಪ್ರಜಾಸತ್ತೆಯ ದೌರ್ಬಲ್ಯಗಳನ್ನು ಬಳಸಿಕೊಂಡು ಅಧಿಕಾರ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಹೇಗೆ ಬ್ರಿಟಿಷರು ಈ ದೇಶವನ್ನು ಒಡೆದು ಛಿದ್ರಗೊಳಿಸಿದರೋ ಈ ಶಕ್ತಿಗಳೂ ಅದೇ ಮಾದರಿಯನ್ನು ಅನುಸರಿಸಿ ದೇಶವನ್ನು ಒಡೆಯಲು ನೋಡುತ್ತಿದೆ. ಆದರೆ ಅದರ ವಿರುದ್ಧ ಇಡೀ ದೇಶ ಒಂದಾಗಿ ನಿಂತಿದೆ. ಸಿಎಎ ಕಾಯ್ದೆ ಈ ದೇಶವನ್ನು ಒಡೆಯುವ ಉದ್ದೇಶ ಮಾತ್ರವಲ್ಲ, ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಸಮುದಾಯದ ನಡುವೆ ಆತಂಕಗಳನ್ನು, ಅಭದ್ರತೆಯನ್ನು ಬಿತ್ತುವ ಉದ್ದೇಶವನ್ನು ಹೊಂದಿದೆ. ಬ್ರಿಟಿಷರ ಕಾಲದಲ್ಲಿ ಹೇಗೆ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಕ್ಕೆ ಧುಮುಕಿದ್ದಾರೆಯೋ ಹಾಗೆಯೇ ಇದೀಗ ದೇಶಾದ್ಯಂತ ವಿದ್ಯಾಲಯಗಳಿಂದಲೇ ಸರಕಾರದ ಸಂಚಿನ ವಿರುದ್ಧ ಪ್ರತಿಭಟನೆಗಳು ಹೊರ ಹೊಮ್ಮುತ್ತಿವೆ. ಪೊಲೀಸರ ಲಾಠಿ ಮತ್ತು ಬಂದೂಕಿನ ಮೂಲಕ ಪ್ರತಿಭಟನೆಯನ್ನು ಸುಲಭದಲ್ಲಿ ದಮನಿಸಬಹುದು ಎಂದು ಸರಕಾರ ಭಾವಿಸಿತ್ತು. ಆದರೆ ಅದು ಈಗ ಹುಸಿಯಾಗಿದೆ.

ಜಾಮಿಯಾ ಮಿಲ್ಲಿಯಾ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ಫೋಟಗೊಂಡ ಈ ಹೊಸ ಸ್ವಾತಂತ್ರ ಹೋರಾಟ ದೇಶಾದ್ಯಂತ ಬೆಂಕಿಯಂತೆ ಹರಡುತ್ತಿದೆ. ದಮನಿಸಿದಂತೆಯೇ ಅದು ವಿಸ್ತಾರಗೊಳ್ಳುತ್ತಿದೆ. ಒಂದು ಕಾಲದಲ್ಲಿ ಲಕ್ಷಾಂತರ ಜನರು ಬಲಿದಾನಗೈದು ಗಳಿಸಿದ ಸ್ವಾತಂತ್ರ ಮತ್ತು ಸಂವಿಧಾನವನ್ನು ಉಳಿಸುವ ಈ ಹೋರಾಟಕ್ಕೆ ಜಾತಿ ಧರ್ಮ, ಪಂಗಡಗಳ ಭಿನ್ನತೆಯನ್ನು ತೊರೆದು ಜನರು ಒಂದಾಗುತ್ತಿದ್ದಾರೆ. ಬ್ರಿಟಿಷರ ಕಾಲದಲ್ಲಿ ಹೇಗೆ ಸಂಘಪರಿವಾರ ಸ್ವಾತಂತ್ರ ಚಳವಳಿಯಿಂದ ದೂರ ಉಳಿಯಿತೋ ಈ ಬಾರಿಯೂ ಅದೇ ನಡೆಯುತ್ತಿದೆ. ದೇಶದ ಜನರ ಮುಂದೆ ಆರೆಸ್ಸೆಸ್ ನಿಧಾನಕ್ಕೆ ಒಂಟಿಯಾಗುತ್ತಿದೆ. ದೇಶದಲ್ಲಿ ಸಹಸ್ರಾರು ಹೋರಾಟಗಾರರು ಜೈಲು ಸೇರುತ್ತಿದ್ದಾರೆ. ಹಲವರು ಹುತಾತ್ಮರಾಗಿದ್ದಾರೆ. ಗಾಯಾಳುಗಳಾಗಿದ್ದಾರೆ.

ಇಂತಹ ಹೋರಾಟವೊಂದಕ್ಕೆ ಕರ್ನಾಟಕವೂ ತನ್ನ ಕೊಡುಗೆಗಳನ್ನು ನೀಡುತ್ತಿದೆ. ಈ ಹೋರಾಟಕ್ಕಾಗಿ ಕರ್ನಾಟಕದಲ್ಲಿ ಎರಡು ಜೀವಗಳು ಆಹುತಿಯಾದವು. ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ತಡೆಯಲು ಪೊಲೀಸ್ ಪಡೆಯನ್ನು ಬಳಸಿ ಸರ್ವ ಯತ್ನ ಮಾಡಿತಾದರೂ ಜನಸಾಗರದ ಮುಂದೆ ಪೊಲೀಸರು ಅಸಹಾಯಕರಾಗಬೇಕಾಯಿತು. ಆದರೆ ಇದೇ ಸಂದರ್ಭದಲ್ಲಿ ಸಂವಿಧಾನಕ್ಕಾಗಿ ಘೋಷಣೆ ಕೂಗಿದ ಬೆರಳೆಣಿಕೆಯ ಜನರ ಮೇಲೆ ಮಂಗಳೂರಿನಲ್ಲಿ ಪೊಲೀಸರು ಗುಂಡು ಹಾರಿಸಿದರು. ಇಬ್ಬರು ಯುವಕರು ಪ್ರಾಣ ತೆತ್ತರು. ಮಂಗಳೂರಿನಲ್ಲಿ ಯಾವ ಕಾರಣಕ್ಕೂ ಪ್ರತಿಭಟನೆ ನಡೆಯಬಾರದು ಎನ್ನುವ ಉದ್ದೇಶದಿಂದಲೇ ಪೊಲೀಸರು ಬ್ರಿಟಿಷರಿಗಿಂತಲೂ ಬರ್ಬರವಾಗಿ ಜನಸಾಮಾನ್ಯರ ಮೇಲೆ ಎರಗಿದ್ದರು. ಜನರೊಳಗೆ ವ್ಯವಸ್ಥೆಯ ಕುರಿತಂತೆ ಭಯ ಬಿತ್ತುವುದೇ ಅವರ ಉದ್ದೇಶವಾಗಿತ್ತು. ಆದರೆ ಇಬ್ಬರ ಬಲಿದಾನ ಇಂದು ಮಂಗಳೂರಿನಲ್ಲಿ ಲಕ್ಷಾಂತರ ಜನರ ಎದೆಯೊಳಗೆ ಹೋರಾಟದ ಕಿಚ್ಚನ್ನು ಬಿತ್ತಿದೆ. ಬುಧವಾರ ಮಂಗಳೂರಿನ ಅಡ್ಯಾರ್‌ನಲ್ಲಿ ನಡೆದ ಬೃಹತ್ ಸಮಾವೇಶ, ಅಲ್ಲಿ ಸೇರಿದ ಜನಸಾಗರ ‘ಕೋವಿ, ಲಾಠಿಯಿಂದ ನಮ್ಮ ಪ್ರತಿಭಟನೆಯನ್ನು, ಹೋರಾಟವನ್ನು ಹತ್ತಿಕ್ಕಲಾರಿರಿ’ ಎಂಬ ಸ್ಪಷ್ಟ ಸಂದೇಶವನ್ನು ಪೊಲೀಸರಿಗೆ ಮಾತ್ರವಲ್ಲ, ಆಧುನಿಕ ಬ್ರಿಟಿಷರ ಪಾತ್ರವನ್ನು ನಿರ್ವಹಿಸುತ್ತಿರುವ ಆರೆಸ್ಸೆಸ್‌ನ ನಾಯಕರಿಗೂ ನೀಡಿದೆ. ಹೇಗೆ ಬ್ರಿಟಿಷರ ಕಾಲದಲ್ಲಿ ಹೋರಾಟವನ್ನು ವಿಫಲಗೊಳಿಸಲು ದೇಶದ್ರೋಹಿಗಳು ಕೆಲಸ ಮಾಡಿದ್ದರೋ, ಇಲ್ಲೂ ಹಲವರು ಕೆಲಸ ಮಾಡಿದ್ದಾರೆ. ಮಂಗಳೂರಿನ ಚಳವಳಿಯ ಕುರಿತಂತೆ ಹಲವು ವದಂತಿಗಳನ್ನೂ ಬಿತ್ತಿದ್ದರು. ಬಹುತೇಕ ಮಾಧ್ಯಮಗಳು ಮೀರ್ ಸಾದಿಕ್, ಪೂರ್ಣಯ್ಯ, ವಿನಾಯಕ ದಾಮೋದರ ಸಾವರ್ಕರ್ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದವು. ಆದರೆ ಎಲ್ಲ ಸಂಚುಗಳನ್ನು ವಿಫಲಗೊಳಿಸಿ, ಮಂಗಳೂರಿನ ಸಂವಿಧಾನ ಪರ ಹೋರಾಟಗಾರರು ಸಾಗರೋಪಾದಿಯಲ್ಲಿ ನೆರೆದರು. ಬಹುಶಃ ದಕ್ಷಿಣ ಭಾರತದಲ್ಲಿ ನಡೆದ ಹೋರಾಟಗಳಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಮಂಗಳೂರಿನಲ್ಲೇ ಇರಬೇಕು.

ಗೋಲಿಬಾರ್ ಪ್ರಕರಣಗಳಲ್ಲಿ ಪೊಲೀಸರು ಹೇಳಿದ ಸುಳ್ಳುಗಳೆಲ್ಲವೂ ಈ ಪ್ರತಿಭಟನೆಯ ಸುನಾಮಿಯಲ್ಲಿ ಕೊಚ್ಚಿ ಹೋಗಿವೆ. ಲಕ್ಷಾಂತರ ಜನರು ಸೇರಿದರೂ ಎಳ್ಳಷ್ಟೂ ಸಾರ್ವಜನಿಕ ಸೊತ್ತುಗಳಿಗೆ ಹಾನಿಯಾಗಲಿಲ್ಲ. ಪೊಲೀಸರು ಕಾನೂನು ಉಲ್ಲಂಘಿಸಿ ಸಂವಿಧಾನದ ಗೌರವ ಬೀದಿಪಾಲು ಮಾಡಿದ್ದರೆ, ಹೋರಾಟಗಾರರು ಸಂಯಮ ಪಾಲಿಸಿ ಆ ಸಂವಿಧಾನದ ಗೌರವವನ್ನು ಮರು ಸ್ಥಾಪಿಸಿದರು. ‘ಗೋಲಿಬಾರ್‌ನಲ್ಲಿ ಮೃತಪಟ್ಟವರು ದುಷ್ಕರ್ಮಿಗಳಲ್ಲ, ಅವರು ಈ ತುಳು ಮಣ್ಣಿನ ಮಕ್ಕಳು’ ಎನ್ನುವುದನ್ನು ಸೇರಿದ ಎರಡು ಲಕ್ಷಕ್ಕೂ ಅಧಿಕ ಪ್ರತಿಭಟನಾಕಾರರು ಘಂಟಾಘೋಷವಾಗಿ ನಾಡಿಗೆ ಹೇಳಿದ್ದಾರೆ. ವ್ಯವಸ್ಥೆಗೆ ಒಂದಿಷ್ಟು ಲಜ್ಜೆ ಎನ್ನುವುದಿದ್ದರೆ ತಕ್ಷಣ ದೌರ್ಜನ್ಯಕ್ಕೆ ಬಲಿಯಾದ ಅಮಾಯಕರ ಜೊತೆಗೆ ಮಾತ್ರವಲ್ಲ, ಕರ್ಫ್ಯೂನಿಂದ ನರಳಿದ ‘ಮಂಗಳೂರು’ ಜನರ ಜೊತೆ ಕ್ಷಮೆಯಾಚನೆ ಮಾಡಬೇಕು. ಈ ಪ್ರತಿಭಟನೆಯನ್ನು ಗೌರವಿಸಿ ಸರಕಾರ ತಕ್ಷಣ, ಮಂಗಳೂರು ಗೋಲಿಬಾರ್ ತನಿಖೆಯನ್ನು ನ್ಯಾಯಾಂಗಕ್ಕೆ ಒಪ್ಪಿಸಬೇಕು. ಡಿಸೆಂಬರ್ 19ರಂದು ಪೊಲೀಸರೇ ಸೃಷ್ಟಿಸಿದ ‘ಜಲಿಯನ್ ವಾಲಾಬಾಗ್’ ಸಂಚಿನ ಹಿಂದಿರುವವರಿಗೆ ಶಿಕ್ಷೆಯಾಗಬೇಕು. ಇಲ್ಲವಾದರೆ ಖಂಡಿತವಾಗಿಯೂ ಈ ಹೋರಾಟ ಇಲ್ಲಿಗೆ ನಿಲ್ಲಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News