ಫಾಸ್ಟ್ಯಾಗ್ ಬಗೆಗಿನ ಆಘಾತಕಾರಿ ಸುದ್ದಿ ಓದಿ...

Update: 2020-01-17 04:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ ಮೂಲಕ ಡಿಜಿಟಲ್ ಟೋಲ್ ಸಂಗ್ರಹ 2019ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ 2020ರ ಜವರಿಯಲ್ಲಿ ಶೇಕಡ 60ರಷ್ಟು ಹೆಚ್ಚಿದರೂ, ಟೋಲ್‌ಪ್ಲಾಝಾಗಳಲ್ಲಿ ವಾಹನಗಳು ಕಾಯಬೇಕಾದ ಅವಧಿ ಶೇಕಡ 29ರಷ್ಟು ಹೆಚ್ಚಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಇದಕ್ಕೆ ಪ್ರಮುಖ ಕಾರಣ ಎಲ್ಲರೂ ಫಾಸ್ಟ್ಯಾಗ್ ವ್ಯವಸ್ಥೆಗೆ ಇನ್ನೂ ಪರಿವರ್ತನೆಯಾಗದಿರುವುದು. ಆದರೆ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸುವಲ್ಲಿನ ಸಮಸ್ಯೆಗಳು ಕೂಡಾ ಹೆಚ್ಚಿನ ವಿಳಂಬಕ್ಕೆ ಕಾರಣವಾಗಿವೆ ಎನ್ನುವುದು ನಿರ್ವಿವಾದ.

ಹೆದ್ದಾರಿ ಟೋಲ್‌ ಪ್ಲಾಝಾಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಶೇಕಡ 60ರಷ್ಟು ಹೆಚ್ಚಿದೆ ಎಂದು ಸಾರಿಗೆ ಸಚಿವಾಲಯ ಹೇಳುತ್ತದೆ. ಡಿಜಿಟಲ್ ಪಾವತಿಯನ್ನು ಕಡ್ಡಾಯಗೊಳಿಸುವ ನಿಯಮಾವಳಿ ಜಾರಿ ಇದಕ್ಕೆ ಕಾರಣ. ಅದರೆ ಒಟ್ಟಾರೆ ಆದಾಯ ಹೆಚ್ಚಿದೆಯೇ ಎಂಬ ಬಗ್ಗೆ ಇನ್ನೂ ವಿವರ ಲಭ್ಯವಿಲ್ಲ. ಈ ವಿವರ ಲಭ್ಯವಾದಲ್ಲಿ, ಫಾಸ್ಟ್ಯಾಗ್ ವಾಸ್ತವವಾಗಿ ಸೋರಿಕೆ ತಡೆಗೆ ನೆರವಾಗಿದೆಯೇ ಎನ್ನುವುದು ತಿಳಿಯಲಿದೆ.

488 ಕಡೆಗಳಲ್ಲಿರುವ ಕೇಂದ್ರೀಯ ಟೋಲ್ ಪ್ಲಾಝಾಗಳ ಕಣ್ಗಾವಲು ವ್ಯವಸ್ಥೆಯಡಿ ಪಡೆದ ಅಂಕಿ ಅಂಶಗಳ ಪ್ರಕಾರ, 2019ರ ನವೆಂಬರ್ 15ರಿಂದ ಡಿಸೆಂಬರ್ 14ರ ಅವಧಿಯಲ್ಲಿ ಸರಾಸರಿ ಕಾಯುವಿಕೆ ಸಮಯ 7 ನಿಮಿಷ 44 ಸೆಕೆಂಡ್ ಇತ್ತು. ಆದರೆ 2019ರ ಡಿಸೆಂಬರ್ 15ರಿಂದ 2020ರ ಜನವರಿ 14ರ ಅವಧಿಯಲ್ಲಿ ಇದು 9 ನಿಮಿಷ 57 ಸೆಕೆಂಡ್ ಆಗಿದೆ.

ಟೋಲ್‌ಪ್ಲಾಝಾದಿಂದ ಒಂದು ಕಿಲೋಮೀಟರ್ ಆಂತರವನ್ನು ಕ್ರಮಿಸಲು ವಾಹನಗಳು ತೆಗೆದುಕೊಂಡ ಸರಾಸರಿ ಸಮಯವನ್ನು ಲೆಕ್ಕಹಾಕಿ ಒಟ್ಟಾರೆ ಕಾಯುವಿಕೆ ಅವಧಿಯನ್ನು ನಿರ್ಧರಿಸಲಾಗಿದೆ. 2018ರಲ್ಲಿ ಟೋಲ್‌ಪ್ಲಾಝಾಗಳಲ್ಲಿ ಕಾಯುವ ಅವಧಿ 8 ನಿಮಿಷ 18 ಸೆಕೆಂಡ್ ಇತ್ತು. ಕಳೆದ ವರ್ಷದ ಡಿಸೆಂಬರ್‌ವರೆಗೆ ಈ ಅವಧಿ 9 ನಿಮಿಷ 12 ಸೆಕೆಂಡ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News