ಪರೋಲ್‌ನಲ್ಲಿದ್ದ ಮುಂಬೈ ಸರಣಿ ಸ್ಫೋಟ ಪ್ರಕರಣದ ಆರೋಪಿ ನಾಪತ್ತೆ

Update: 2020-01-17 04:21 GMT

ಮುಂಬೈ: ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 68 ವರ್ಷ ವಯಸ್ಸಿನ ಜಲೀಸ್ ಅನ್ಸಾರಿ ನಾಪತ್ತೆಯಾಗಿದ್ದಾನೆ.

ದಕ್ಷಿಣ ಮುಂಬೈನ ಅಗ್ರಿಪಾಡ ಪ್ರದೇಶದ ಮೊಮಿನ್‌ಪುರದ ನಿವಾಸಿಯಾದ ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ದೇಶದ ವಿವಿಧೆಡೆಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಈತ ಷಾಮೀಲಾದ ಶಂಕೆ ಇದೆ.

ರಾಜಸ್ಥಾನದ ಅಜ್ಮೀರ್ ಕೇಂದ್ರೀಯ ಕಾರಾಗೃಹದಲ್ಲಿದ್ದ ಈತ 21 ದಿನಗಳ ಪರೋಲ್ ಪಡೆದಿದ್ದ. ಈ ಅವಧಿ ಮುಗಿದು ಶುಕ್ರವಾರ ಅಧಿಕಾರಿಗಳ ಮುಂದೆ ಶರಣಾಗಬೇಕಿತ್ತು. ಪರೋಲ್ ಅವಧಿಯಲ್ಲಿ ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಪ್ರತಿದಿನ ಬೆಳಗ್ಗೆ 10.30ರಿಂದ 12 ಗಂಟೆ ಅವಧಿಯಲ್ಲಿ ಹಾಜರಾಗುವಂತೆ ಆದೇಶಿಸಲಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ಜಲೀಸ್ ಗುರುವಾರ ಆಗಮಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸಂಜೆ ಠಾಣೆಗೆ ಆಗಮಿಸಿದ ಜಲೀಸ್ ಮಗ ಜೈದ್ ಅನ್ಸಾರಿ, ತಮ್ಮ ತಂದೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಮುಂಜಾನೆ ತೆರಳಿದ್ದ ಅನ್ಸಾರಿ ಮನೆಗೆ ವಾಪಸ್ಸಾಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದ್ದು, ಆರೋಪಿಯ ಪತ್ತೆಗೆ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ.

ಡಾಕ್ಟರ್ ಬಾಂಬ್ ಎಂದು ಕರೆಯಲ್ಪಡುತ್ತಿದ್ದ ಜಲೀಸ್ ಅನ್ಸಾರಿ, ಸಿಮಿ, ಇಂಡಿಯನ್ ಮುಜಾಹಿದ್ದೀನ್‌ನಂಥ ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 2008ರಲ್ಲಿ ನಡೆದ ಮುಂಬೈ ಸ್ಫೋಟ ಪ್ರಕರಣದ ಸಂಬಂಧ 2011ರಲ್ಲಿ ಎನ್‌ಐಎ ಈತನನ್ನು ವಿಚಾರಣೆಗೆ ಗುರಿಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News