×
Ad

ಫ್ರಾನ್ಸ್ ದ್ವೀಪದಲ್ಲಿ ಪಾಳು ಬಿದ್ದಿರುವ ಮಲ್ಯರ ಬಂಗಲೆ: ಸಾಲ ನೀಡಿರುವ ಕತರ್ ಬ್ಯಾಂಕ್ ಆರೋಪ

Update: 2020-01-17 22:54 IST

ಲಂಡನ್, ಜ. 17: ಫ್ರಾನ್ಸ್‌ನ ಐಲ್ ಸೇಂಟ್ ಮಾರ್ಗರೇಟ್ ದ್ವೀಪದಲ್ಲಿ ಉದ್ಯಮಿ ವಿಜಯ ಮಲ್ಯ ಖರೀದಿಸಿರುವ ಅತ್ಯಂತ ಐಶಾರಾಮಿ ಬಂಗಲೆ ಪಾಳು ಬೀಳುತ್ತಿದೆ ಎಂದು ಬಂಗಲೆ ಖರೀದಿಸಲು ಸಾಲ ಕೊಟ್ಟಿರುವ ಹಣಕಾಸು ಸಂಸ್ಥೆ ದೂರಿದೆ.

ಈ ಅರಮನೆಯಂಥ ಬಂಗಲೆಯಲ್ಲಿ 17 ಬೆಡ್‌ರೂಮ್‌ಗಳು, ಒಂದು ಸಿನೇಮಾ ಮಂದಿರ, ಖಾಸಗಿ ಹೆಲಿಪ್ಯಾಡ್ ಮತ್ತು ಒಂದು ಸ್ವಂತ ನೈಟ್‌ಕ್ಲಬ್ ಕೂಡ ಇವೆ!

‘ಲೇ ಗ್ರಾಂಡ್ ಜಾರ್ಡಿನ್’ ಎಂಬ ಹೆಸರಿನ ಬಂಗಲೆಯನ್ನು ಮಲ್ಯ 2008ರಲ್ಲಿ ತನ್ನ ಕಂಪೆನಿ ‘ಗಿರ್ಮೊ ಇನ್‌ವೆಸ್ಟ್ ಎಸ್‌ಎ’ ಮೂಲಕ ಖರೀದಿಸಿದ್ದರು. ಅದಕ್ಕಾಗಿ ಕತರ್‌ನ ರಾಷ್ಟ್ರೀಯ ಬ್ಯಾಂಕ್ ಎಸ್‌ಎಕ್ಯೂನ ಘಟಕವಾಗಿರುವ ಆ್ಯನ್ಸ್‌ಬ್ಯಾಕರ್ ಆ್ಯಂಡ್ ಕೊ. ದಿಂದ 30 ಮಿಲಿಯ ಡಾಲರ್ (ಸುಮಾರು 213 ಕೋಟಿ ರೂಪಾಯಿ) ಸಾಲ ಪಡೆದಿದ್ದರು.

ಈಗ ಸಾಲ ಮರುಪಾವತಿಯನ್ನು ಗಿರ್ಮೊ ನಿಲ್ಲಿಸಿದೆ ಎಂದು ಬ್ಯಾಂಕ್ ಲಂಡನ್ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ಮಲ್ಯಗೆ ಸೇರಿರುವ 50 ಮೀಟರ್ ಉದ್ದದ ಸೂಪರ್‌ ಯಾಟ್‌ನ್ನು ಮಾರಾಟ ಮಾಡಲು ಮಲ್ಯಗೆ ಆದೇಶ ನೀಡುವಂತೆ ಬ್ಯಾಂಕ್ ನ್ಯಾಯಾಲಯವನ್ನು ಕೋರಿದೆ. ಈ ದೋಣಿಯ ಬೆಲೆಯ 50 ಲಕ್ಷ ಯುರೋ (ಸುಮಾರು 35.50 ಕೋಟಿ ರೂಪಾಯಿ) ಮೊತ್ತವನ್ನು ಮಲ್ಯ ಸಾಲಕ್ಕೆ ಭದ್ರತೆಯಾಗಿ ನೀಡಲಾಗಿದೆ. ಈ ಹಾಯಿದೋಣಿಯನ್ನು ದಕ್ಷಿಣ ಇಂಗ್ಲೆಂಡ್‌ನಲ್ಲಿ ಈಗ ಜಪ್ತಿ ಮಾಡಲಾಗಿದೆ.

ಸಾಲ ಮರುಪಾವತಿ ಕೋರಿ ಮಲ್ಯ ವಿರುದ್ಧ ಇನ್ನೆರಡು ಪ್ರಕರಣಗಳು ಬ್ರಿಟನ್‌ನಲ್ಲಿ ದಾಖಲಾಗಿವೆ. ಡಿಯಾಜಿಯೊ ಪಿಎಲ್‌ಸಿ ಮಲ್ಯ ವಿರುದ್ಧ 100 ಮಿಲಿಯ ಡಾಲರ್ (ಸುಮಾರು 710 ಕೋಟಿ ರೂಪಾಯಿ) ವಸೂಲಿ ಮೊಕದ್ದಮೆ ದಾಖಲಿಸಿದರೆ, ಸ್ಟೇಟ್‌ಬ್ಯಾಂಕ್ ಸೇರಿದಂತೆ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವೊಂದು 1.2 ಬಿಲಿಯ ಡಾಲರ್ (ಸುಮಾರು 8,500 ಕೋಟಿ ರೂಪಾಯಿ) ವಸೂಲಿಗಾಗಿ ಮೊಕದ್ದಮೆ ಸಲ್ಲಿಸಿದೆ.

2015ರ ವೇಳೆಗೆ, ಫ್ರಾನ್ಸ್ ದ್ವೀಪದಲ್ಲಿರುವ 1.3 ಹೆಕ್ಟೇರ್ ವಿಸ್ತೀರ್ಣದಲ್ಲಿ ಎದ್ದಿರುವ ಕಟ್ಟಡವು ಹಾಳು ಬೀಳಲು ಆರಂಭಿಸಿತ್ತು ಎಂದು ಬ್ಯಾಂಕ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News