ರಸ್ತೆ ತೆರವುಗೊಳಿಸಲು ಶಾಹೀನ್ ಭಾಗ್ ಪ್ರತಿಭಟನಾಕಾರರಿಗೆ ದಿಲ್ಲಿ ಪೊಲೀಸರ ಮನವಿ

Update: 2020-01-17 18:05 GMT

ಹೊಸದಿಲ್ಲಿ,ಜ.17: ದಿಲ್ಲಿ ಮತ್ತು ಎನ್ಸಿಆರ್ ನಿವಾಸಿಗಳಿಗೆ ಅನಾನುಕೂಲತೆಯನ್ನು ತಪ್ಪಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾಲಿಂದಿ ಕುಂಜ್- ಶಾಹೀನ್ ಭಾಗ್ ರಸ್ತೆಯನ್ನು ತೆರವುಗೊಳಿಸುವಂತೆ ದಿಲ್ಲಿ ಪೊಲೀಸರು ಶುಕ್ರವಾರ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಕೋರಿಕೊಂಡಿದ್ದಾರೆ.

ಕಳೆದೊಂದು ತಿಂಗಳಿನಿಂದಲೂ ಶಾಹೀನ್ ಭಾಗ್ ನಲ್ಲಿ  ಪ್ರತಿಭಟನೆಯು ನಡೆಯುತ್ತಿದೆ. ಈ ರಸ್ತೆಯು ನೊಯ್ಡೆ ಮತ್ತು ದಿಲ್ಲಿ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು,ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೊಯ್ಡೆ ಸಂಚಾರ ಪೊಲೀಸರು ವಾಹನಗಳ ಸಂಚಾರಕ್ಕೆ ಈ ರಸ್ತೆಯನ್ನು ಮುಚ್ಚಿದ್ದಾರೆ.

ಈ ವಿಷಯವು ಹೈಕೋರ್ಟ್ ಮೆಟ್ಟಿಲನ್ನೂ ಏರಿದೆ.

 ‘ಹೆದ್ದಾರಿಯನ್ನು ಸಂಪೂರ್ಣವಾಗಿ ತಡೆಹಿಡಿದಿರುವುದರಿಂದ ದಿಲ್ಲಿ ಮತ್ತು ಎನ್ಸಿಆರ್ ನಿವಾಸಿಗಳು,ಹಿರಿಯ ನಾಗರಿಕರು,ತುರ್ತು ರೋಗಿಗಳು ಮತ್ತು ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿಭಟನಾಕಾರರು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ನಾವು ಕೋರುತ್ತಿದ್ದೇವೆ’ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತನ್ಮಧ್ಯೆ ಯಾವುದೇ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸದೆ ಆತ/ಆಕೆಯನ್ನು ರಾಷ್ಟ್ರೀಯ ಸುರಕ್ಷತಾ ಕಾಯ್ದೆಯಡಿ ಮೂರು ತಿಂಗಳ ಅವಧಿಗೆ ಬಂಧನದಲ್ಲಿಡಲು ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಅಧಿಕಾರ ನೀಡಿ ಲೆ.ಗ.ಅನಿಲ ಬೈಜಾಲ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News