ನಿರ್ಭಯಾ ಪ್ರಕರಣ: ಫೆ. 1ರಂದು ದೋಷಿಗಳು ಗಲ್ಲಿಗೆ

Update: 2020-01-17 18:12 GMT

ಹೊಸದಿಲ್ಲಿ, ಜ. 17: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ದೋಷಿಗಳ ವಿರುದ್ಧ ದಿಲ್ಲಿ ನ್ಯಾಯಾಲಯ ಶುಕ್ರವಾರ ಹೊಸ ಡೆತ್ ವಾರಂಟ್ ಹೊರಡಿಸಿದೆ ಹಾಗೂ ಫೆಬ್ರವರಿ 1ರಂದು ಬೆಳಗ್ಗೆ 6 ಗಂಟೆ ಗಲ್ಲಿಗೇರಿಸಲು ಸಮಯ ನಿಗದಿಪಡಿಸಿದೆ.

 ಪ್ರಕರಣದ ದೋಷಿಗಳಲ್ಲಿ ಓರ್ವನಾಗಿರುವ ಮುಖೇಶ್ ಸಿಂಗ್ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ ಬಳಿಕ ಈ ಹೊಸ ‘ಡೆತ್ ವಾರಂಟ್’ ಜಾರಿಗೊಳಿಸಲಾಗಿದೆ ಹಾಗೂ ಇಂದಿನಿಂದ ನಿಖರವಾಗಿ 14 ದಿನಗಳ ಬಳಿಕ ಮರಣ ದಂಡನೆ ದಿನಾಂಕ ನಿಗದಿಪಡಿಸಿದೆ.

ಕಾನೂನು ಪ್ರಕಾರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಅವರು ತಿರಸ್ಕರಿಸಿದ ಎರಡು ವಾರಗಳ ಬಳಿಕವಷ್ಟೇ ದೋಷಿಗೆ ಮರಣ ದಂಡನೆ ನೀಡಬಹುದು.

ನಿರ್ಭಯಾ ಪ್ರಕರಣದ ದೋಷಿಗಳಾದ ವಿನಯ್ ಶರ್ಮಾ, ಮುಖೇಶ್ ಸಿಂಗ್, ಅಕ್ಷಯ್ ಕುಮಾರ್ ಸಿಂಗ್ ಹಾಗೂ ಪವನ್ ಗುಪ್ತಾರನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಜನವರಿ 22ರಂದು ನೇಣಿಗೇರಿಸುವಂತೆ ವಿಚಾರಣೆ ನ್ಯಾಯಾಲಯದ ನ್ಯಾಯಾಧೀಶರು ಕಳೆದ ವಾರ ಘೋಷಿಸಿದ್ದರು. ಅಲ್ಲದೆ, ‘ಡೆತ್ ವಾರಂಟ್’ಗೆ ಸಹಿ ಹಾಕಿದ್ದರು.

ಆದರೆ, ಗಲ್ಲಿಗೇರಿಸಲು 5 ದಿನ ಬಾಕಿ ಉಳಿದಿರುವಾಗ ಗುರುವಾರ ತಿಹಾರ್ ಕಾರಾಗೃಹದ ಅಧಿಕಾರಿಗಳು, ಕ್ಷಮಾಧಾನದ ಅರ್ಜಿ ವಿಲೇವಾರಿ ಆಗುವ ವರೆಗೆ ಗಲ್ಲಿಗೇರಿಸಲು ಸಾಧ್ಯವಿಲ್ಲ. ಆದುದರಿಂದ ಹೊಸ ದಿನಾಂಕ ನೀಡುವಂತೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News