ವಿದ್ಯಾರ್ಥಿಗಳಿಗೆ ‘ಪಾಕಿಸ್ತಾನಕ್ಕೆ ಹೋಗಿ’ ಎಂದ ಅಧ್ಯಾಪಕಿಯ ಅಮಾನತು

Update: 2020-01-17 18:13 GMT

ತಿರುವನಂತಪುರ, ಜ. 17: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡುವ ಸಂದರ್ಭ ‘ಪಾಕಿಸ್ತಾನಕ್ಕೆ ಹೋಗಲು ಸಿದ್ಧರಾಗಿರಿ’ ಎಂದು ಪದೇ ಪದೇ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಕೇರಳದ ತ್ರಿಶೂರ್‌ನ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಅಧ್ಯಾಪಕಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಹಿಂದಿ ಅದ್ಯಾಪಕಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದಿನನಿತ್ಯ ಅವಮಾನಿಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿನಿಯ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

 ಹಿಂದಿ ಅಧ್ಯಾಪಕಿ ಒಂದು ಬಾರಿ ಅಲ್ಲ, ಹಲವು ಬಾರಿ ವಿದ್ಯಾರ್ಥಿಗಳೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿ ‘ಪಾಕಿಸ್ತಾನಕ್ಕೆ ಹೋಗಲು ಸಿದ್ಧರಾಗಿ’ ಎಂದು ಹೇಳಿದ್ದಾರೆ. ಅಧ್ಯಾಪಕರು, ಪೋಷಕರ ಸಂಘಟನೆಯ ಸಭೆಯಲ್ಲಿ ಕೂಡ ಅವರು ಇದೇ ರೀತಿ ಮಾತನಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ ಎಂದು ಶಾಲೆಯ ಆಡಳಿತ ಸಮಿತಿಯ ಅಧ್ಯಕ್ಷ ಸುನಿಲ್ ದತ್ ತಿಳಿಸಿದ್ದಾರೆ.

ಶಾಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಇದಲ್ಲದೆ ಈ ಹಿಂದೆ ಹಲವು ಬಾರಿ ಜೀವಶಾಸ್ತ್ರ ಬೋಧಿಸಿದ್ದ ಅಧ್ಯಾಪಕಿ ಹಿಂದಿ ಬೋಧಿಸುವುದು ಹೇಗೆ ಎಂದು ಅಧ್ಯಾಪಕರು ಪ್ರಶ್ನಿಸಿದ್ದಾರೆ ಎಂದು ದತ್ತ್ ಹೇಳಿದ್ದಾರೆ.

ದೂರಿನ ಆಧಾರದಲ್ಲಿ ಅಧ್ಯಾಪಕಿ ಹಾಗೂ ವಿದ್ಯಾರ್ಥಿಗಳ ಹೇಳಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕರ್ತವ್ಯದ ಸಂದರ್ಭ ನಡತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಶಿಕ್ಷಣದ ಡಿಡಿಪಿ ಆದೇಶದಂತೆ ಅಮಾನತುಗೊಳಿಸಲಾಗಿದೆ ಎಂದು ದತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News