ಪ್ರತಿಮೆಗಳ ಸ್ಮಶಾನವಾಗಿ ಬದಲಾಗುತ್ತಿರುವ ದೇಶ

Update: 2020-01-18 07:11 GMT

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಅನುದಾನ ನೀಡುವಲ್ಲಿ ವಿಳಂಬಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ಅಲ್ಲಿನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ‘ಸರಕಾರಕ್ಕೆ ಪ್ರತಿಮೆಗಳ ನಿರ್ಮಾಣಕ್ಕಾಗಿ ಹಣವಿದೆ. ಆದರೆ ಸಾರ್ವಜನಿಕರ ಆರೋಗ್ಯಕ್ಕೆ ನೀಡಲು ಹಣವಿಲ್ಲ’’ ಎಂದು ಅದು ವ್ಯಂಗ್ಯ ಮಾಡಿದೆ. ಹೈಕೋರ್ಟ್‌ನ ಈ ವ್ಯಂಗ್ಯ ಮಹಾರಾಷ್ಟ್ರ ಸರಕಾರವನ್ನಷ್ಟೇ ಅಲ್ಲ, ಕೇಂದ್ರ ಸರಕಾರವನ್ನೂ ಗುರಿಯಾಗಿಸಿಕೊಂಡಿದೆ. ಮಹಾರಾಷ್ಟ್ರದ ಸ್ಥಿತಿಗಿಂತ ಕೇಂದ್ರದ ಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಈಗಾಗಲೇ 3,000 ಕೋಟಿ ರೂಪಾಯಿಯಲ್ಲಿ ಬೃಹತ್ ಪ್ರತಿಮೆಯನ್ನು ನಿರ್ಮಿಸಿದ ಹೆಗ್ಗಳಿಕೆ ಕೇಂದ್ರ ಸರಕಾರದ್ದು. ಆದರೆ ಈ ಪ್ರತಿಮೆ ಭಾರತದ ಪರಿಸ್ಥಿತಿಯಲ್ಲಿ ಏನಾದರೂ ಬದಲಾವಣೆ ತಂದಿತೇ ಎಂದು ಪ್ರಶ್ನಿಸಿದರೆ ಉತ್ತರ ಶೂನ್ಯ. ಇಡೀ ದೇಶ ಆರ್ಥಿಕವಾಗಿ ಜರ್ಜರಿತವಾಗಿ ಕೂತಿರುವ ಸಂದರ್ಭದಲ್ಲಿ 3,000 ಕೋಟಿಯ ರೂಪಾಯಿಯನ್ನು ಸರಕಾರ ದುಂದುವೆಚ್ಚ ಮಾಡಿತು. ಇದರಿಂದ ಸರಕಾರಕ್ಕೆ ವಾರ್ಷಿಕವಾಗಿ ಬರುವ ಆರ್ಥಿಕ ಲಾಭವಾದರೂ ಏನು ಎಂದು ಲೆಕ್ಕ ಹಾಕಿದರೆ ಲಾಭಕ್ಕಿಂತ, ನಷ್ಟವೇ ಹೆಚ್ಚು.

ಈ ಸ್ಮಾರಕದ ನಿರ್ವಹಣೆಗಾಗಿಯೇ ಬಂದ ಹಣವನ್ನು ವೆಚ್ಚ ಮಾಡಬೇಕಾದ ಸ್ಥಿತಿಯಿದೆ. ಇದೇ ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ 3,000 ಕೋಟಿ ರೂಪಾಯಿ ಕಡಿತ ಮಾಡುವುದಕ್ಕೆ ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಪ್ರತಿಮೆಗೆ ಮೀಸಲಿಟ್ಟ ಹಣವನ್ನೇ ಪಟೇಲರ ಹೆಸರಿನಲ್ಲಿ ಶಿಕ್ಷಣಕ್ಕಾಗಿ ನೀಡಿದ್ದಿದ್ದರೆ ಅದುವೇ ಅವರಿಗೆ ನೀಡುವ ಅತ್ಯುತ್ತಮ ಗೌರವವಾಗಿತ್ತು. ಈ ದೇಶದಲ್ಲಿ ಬಡವರು ಹಂತಹಂತವಾಗಿ ಶಿಕ್ಷಣದ ಹಕ್ಕನ್ನು ಕಳೆದುಕೊಳ್ಳುತ್ತಿರುವಾಗ, ಪಟೇಲರ ಪ್ರತಿಮೆಗೆ 3,000 ಕೋಟಿ ರೂಪಾಯಿ ವೆಚ್ಚ ಮಾಡುವುದು ಪಟೇಲರ ವ್ಯಂಗ್ಯವೇ ಆಗಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಪಾರ್ಕ್‌ಗಾಗಿ ಸುಮಾರು 4 ಸಾವಿರ ಕೋಟಿ ರೂಪಾಯಿಯನ್ನು ವೆಚ್ಚ ಮಾಡಲು ಸರಕಾರ ಸಿದ್ಧತೆ ನಡೆಸಿದೆ. ದೇಶದ ಜಿಡಿಪಿ ತೀವ್ರ ಮಟ್ಟದಲ್ಲಿ ಇಳಿಕೆಯಾಗಿದೆ. ಆರ್ಥಿಕ ವ್ಯವಸ್ಥೆ ಕುಸಿದು ಕೂತಿದೆ. ದೇಶದ ಜನರು ದೈನಂದಿನ ವಸ್ತುಗಳ ಬೆಲೆ ಇಳಿಯಲಿ ಎಂದು ಆಗ್ರಹಿಸುತ್ತಿದ್ದಾರೆ. ಸರಕಾರದ ನೀತಿಯಿಂದಾಗಿ ಹಂತಹಂತವಾಗಿ ಆರೋಗ್ಯ, ಶಿಕ್ಷಣ, ಆಹಾರದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಶಿವಾಜಿ ಪಾರ್ಕ್ ಮಾಡಿ ಎಂದು ಈ ದೇಶ ಯಾವತ್ತೂ ಹಂಬಲಿಸಿಲ್ಲ. ಅದರ ಪ್ರಯೋಜನವನ್ನು ಈ ದೇಶ ಶೇ. 1ರಷ್ಟು ಜನರೂ ಪಡೆಯಲಾರರು. ಶಿವಾಜಿಯ ಮೇಲೆ ನಿಜಕ್ಕೂ ಸರಕಾರಕ್ಕೆ ಗೌರವವಿದ್ದಿದ್ದರೆ ಶಿವಾಜಿ ತನ್ನ ಆಡಳಿತದಲ್ಲಿ ಪಾಲಿಸಿದ ವೌಲ್ಯಗಳಿಗೆ ಗೌರವ ನೀಡಲಿ. ಶಿವಾಜಿಯ 12 ದಂಡನಾಯಕರು ಮುಸ್ಲಿಮರಾಗಿದ್ದರು. ಆತನ ಸರಕಾರದಲ್ಲಿ ದಲಿತರು, ಮುಸ್ಲಿಮರು, ಬುಡಕಟ್ಟು ಜನರು ಮುಖ್ಯ ಪಾತ್ರವಹಿಸಿದ್ದರು. ಆತ ಮುಸ್ಲಿಮರು ಮತ್ತು ದಲಿತರ ಕುರಿತಂತೆ ಅದೆಷ್ಟು ನಂಬಿಕೆಯನ್ನು ಹೊಂದಿದ್ದನೆಂದರೆ ಆತನ ಅಂಗರಕ್ಷಕರು ಮುಸ್ಲಿಮ್ ಮತ್ತು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರು.

ಶಿವಾಜಿಯನ್ನು ಕಣ್ಣಿಗೆ ಕಣ್ಣಿಟ್ಟು ಕಾಪಾಡಿ ಮೊಗಲರ ವಿರುದ್ಧ ಹೋರಾಡಿದವರೂ ಮುಸ್ಲಿಮರು ಮತ್ತು ದಲಿತರೇ ಆಗಿದ್ದಾರೆ. ಆದರೆ ಇಂದು ಶಿವಾಜಿಯನ್ನು ತನ್ನ ದ್ವೇಷ ರಾಜಕಾರಣಕ್ಕಾಗಿ ಬಳಸಲಾಗುತ್ತಿದೆ. ಮುಸ್ಲಿಮರನ್ನು, ದಲಿತರನ್ನು ಎನ್‌ಆರ್‌ಸಿಯ ಹೆಸರಿನಲ್ಲಿ ದೇಶದಿಂದ ಬೇರ್ಪಡಿಸಲು ಸಂಚು ನಡೆಸುತ್ತಿರುವ ಈ ಹೊತ್ತಿನಲ್ಲಿ ಶಿವಾಜಿ ಪಾರ್ಕ್‌ಗೆ ಏನು ಅರ್ಥ ಉಳಿಯಿತು? ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಪ್ರತಿಮೆಯೂ ಸುದ್ದಿಯಲ್ಲಿದೆ. ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲು ಸರಕಾರ ಹೊರಟಿದೆ. ಇದರಿಂದ ಅಂಬೇಡ್ಕರ್‌ಗಾಗಲಿ, ದಲಿತರಿಗಾಗಲಿ ಅಥವಾ ದೇಶಕ್ಕಾಗಲಿ ಯಾವರೀತಿಯಲ್ಲೂ ಪ್ರಯೋಜನವಾಗದು. ಹೆಚ್ಚೆಂದರೆ ಈ ಪ್ರತಿಮೆಗೆ ಮಸಿ ಬಳಿದು ಸಮಾಜವನ್ನು ಉದ್ವಿಗ್ನಗೊಳಿಸುವುದಕ್ಕಷ್ಟೇ ಬಳಸಬಹುದಾಗಿದೆ. ಒಂದೆಡೆ ದಲಿತರ ಹಕ್ಕುಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಾ, ಸಂವಿಧಾನವನ್ನು ದುರ್ಬಲಗೊಳಿಸುತ್ತಾ ಅಂಬೇಡ್ಕರ್‌ರ ಪ್ರತಿಮೆಯನ್ನು ನಿಲ್ಲಿಸುವುದರಿಂದ ಅಂಬೇಡ್ಕರ್‌ಗೆ ಗೌರವವನ್ನು ಸಲ್ಲಿಸುವುದಕ್ಕೆ ಸಾಧ್ಯವಿದೆಯೇ? ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಸರಿಯಾದ ಮಾರ್ಗದಲ್ಲಿ ಬಳಕೆಯಾಗುತ್ತಿಲ್ಲ. ಅವುಗಳನ್ನು ಇತರ ಯೋಜನೆಗಳಿಗೆ ವರ್ಗಾಯಿಸಲಾಗುತ್ತಿದೆ. ದಲಿತರಿಗೆ ಮೀಸಲಾದ ಉದ್ಯೋಗಗಳು ಇನ್ನೂ ನೇಮಕಾತಿಯಿಲ್ಲದೆ ಖಾಲಿ ಉಳಿದಿವೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಡೀ ಸಂವಿಧಾನವನ್ನೇ ಬದಲಾಯಿಸಿ ಆ ಸ್ಥಾನದಲ್ಲಿ ಮನು ಸಿದ್ಧಾಂತವನ್ನು ತುರುಕುವ ಸಂಚೊಂದು ರೂಪುಗೊಂಡಿದೆ. ಪೌರತ್ವ ನೋಂದಣಿಯ ಹೆಸರಿನಲ್ಲಿ ದಲಿತರನ್ನು ಡಿಟೆನ್ಶನ್ ಸೆಂಟರ್‌ಗೆ ಸೇರಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ. ಅವೆಲ್ಲದರಿಂದ ದಲಿತರ ಗಮನವನ್ನು ಬೇರೆಡೆಗೆ ಸೆಳೆಯಲು ಅಂಬೇಡ್ಕರ್ ಪ್ರತಿಮೆಯನ್ನು ತೋರಿಸಲಾಗುತ್ತಿದೆ. ಆ ಪ್ರತಿಮೆ ನಿರ್ಮಾಣಗೊಳ್ಳುತ್ತಿರುವುದು ಅಂಬೇಡ್ಕರ್ ಅವರ ಚಿಂತನೆಯ ಗೋರಿಯ ಮೇಲೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನೆಹರೂ ಈ ದೇಶಕ್ಕೆ ಬೃಹತ್ ಅಣೆಕಟ್ಟುಗಳನ್ನು, ಕೈಗಾರಿಕೆಗಳನ್ನು, ಶಿಕ್ಷಣಸಂಸ್ಥೆಗಳನ್ನು, ವಿಜ್ಞಾನ ಕೇಂದ್ರಗಳನ್ನು ನೀಡಿದರು. ಅವರು ಪ್ರತಿಮೆಗಳನ್ನು ನಿರ್ಮಿಸುತ್ತಾ ಕಾಲ ಕಳೆದಿದ್ದರೆ ಇಂದು ನಮಗೆ ಉಣ್ಣುವುದಕ್ಕೆ ಆಹಾರವಿರುತ್ತಿರಲಿಲ್ಲ. ಹಸಿರು ಕ್ರಾಂತಿ ನಡೆಯಲು ಸಾಧ್ಯವಿರುತ್ತಿರಲಿಲ್ಲ. ಇಸ್ರೋ ವಿಶ್ವಮಾನ್ಯ ಸಾಧನೆಗಳನ್ನು ಸಾಧಿಸುತ್ತಿರಲಿಲ್ಲ. ಅತ್ಯುತ್ತಮ ವಿಜ್ಞಾನಿಗಳು, ವೈದ್ಯರು, ಸಂಶೋಧಕರು ಹುಟ್ಟುತ್ತಿರಲಿಲ್ಲ. ಆಟೊಮೊಬೈಲ್ ಕ್ಷೇತ್ರದಲ್ಲಿ ಭಾರತ ಮುನ್ನೇರುತ್ತಿರಲಿಲ್ಲ. ಮೋದಿ ಅಧಿಕಾರಕ್ಕೇರಿದ ದಿನದಿಂದ ಅವರು ಈ ದೇಶಕ್ಕೆ ಕೊಟ್ಟಿರುವುದು ಬರೇ ಪ್ರತಿಮೆಗಳನ್ನು ಮಾತ್ರ. ‘ಸರ್ವಾಧಿಕಾರಿ ಮೊದಲು ಚಿಂತನೆಗಳನ್ನು ನಾಶ ಮಾಡುತ್ತಾನೆ. ಬಳಿಕ ಅವುಗಳ ಮೇಲೆ ಆ ಚಿಂತಕರ ಪ್ರತಿಮೆಗಳನ್ನು ನಿಲ್ಲಿಸಿ ಜನರನ್ನು ವಂಚಿಸುತ್ತಾನೆ’ ಎಂಬ ಮಾತು ಮೋದಿ ಆಡಳಿತಕ್ಕೆ ಸಮರ್ಪಕವಾಗಿ ಹೊಂದುತ್ತದೆ. ಮೋದಿ ನೇತೃತ್ವದ ಸರಕಾರದ ಬಳಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿ ಸಲಹೆ ನೀಡಲು ಯೋಗ್ಯ ಸಲಹೆಗಾರರಿಲ್ಲ. ಅಂಬಾನಿ, ಅದಾನಿಗಳ ಸೂತ್ರಕ್ಕೆ ತಕ್ಕಂತೆ ಸರಕಾರ ಕುಣಿದು ಇದೀಗ ಸೊಂಟ ಮುರಿದು ಬಿದ್ದಿದೆ. ದೇಶದ ತುಂಬಾ ಅರಾಜಕತೆ ತಾಂಡವವಾಡುತ್ತಿದೆ.

ಸರಕಾರದ ಬಳಿ ಅಭಿವೃದ್ಧಿಗೆ ಸಂಬಂಧಪಟ್ಟ ಯಾವುದೇ ಯೋಜನೆಗಳಿಲ್ಲ ಮಾತ್ರವಲ್ಲ, ಯೋಜನೆಗಳಿಗೆ ಬೇಕಾದ ಹಣವೂ ಇಲ್ಲ. ಈ ಹಿನ್ನೆಲೆಯಲ್ಲೇ ಅದು ಎನ್‌ಆರ್‌ಸಿ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಆದರೆ ಎನ್‌ಆರ್‌ಸಿ ದೇಶವನ್ನು ವಿಭಜಿಸುವ ಬದಲು ಒಂದಾಗಿಸಿದೆ. ಹಿಂದೂ, ಮುಸ್ಲಿಮ್, ಕ್ರೈಸ್ತರೆಲ್ಲರೂ ಜೊತೆಗೂಡಿ ಸಿಎಎ ಕಾಯ್ದೆಯ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಈ ಪ್ರತಿಭಟನೆ ಸ್ವಾತಂತ್ರ ಹೋರಾಟದ ರೂಪವನ್ನು ಪಡೆದಿದೆ. ಇದನ್ನು ತಹಬದಿಗೆ ತರುವ ದಾರಿ ತಿಳಿಯದೆ, ಇದೀಗ ಅಮಿತ್ ಶಾ ‘ಗಗನ ಚುಂಬಿ ರಾಮಮಂದಿರ’ ನಿರ್ಮಾಣದ ಭರವಸೆಯನ್ನು ನೀಡುತ್ತಿದ್ದಾರೆ. ರಾಮಮಂದಿರ, ಶಿವಾಜಿಪಾರ್ಕ್, ಅಂಬೇಡ್ಕರ್ ಪ್ರತಿಮೆ...ಇವೆಲ್ಲವೂ ಈ ದೇಶದ ಆರ್ಥಿಕತೆಯನ್ನು, ಸಾಮಾಜಿಕ ಸ್ಥಿತಿಗತಿಗಳನ್ನು ಬದಲಿಸಲಾರವು ಎನ್ನುವ ವಾಸ್ತವವನ್ನು ಅರ್ಥಮಾಡಿಕೊಳ್ಳುವ ದಿನ ಬಂದಿದೆ. ರೈತರು, ಕಾರ್ಮಿಕರನ್ನು ಸಾಯಿಸಿ ದೇಶವನ್ನು ಜೀವವಿಲ್ಲದ ಪ್ರತಿಮೆಗಳ ಗೋರಿಗಳಾಗಿಸುವ ಮುನ್ನ ಜನರು ಒಂದಾಗಿ ಸರಕಾರವನ್ನು ಪ್ರಶ್ನಿಸಬೇಕಾಗಿದೆ. ಸಿಎಎ ವಿರುದ್ಧದ ಪ್ರತಿಭಟನೆಯ ಜೊತೆ ಜೊತೆಗೇ ಇದು ಕೂಡ ನಡೆಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News