ಹೃದಯ ಬಡಿತದಲ್ಲಿ ಏರುಪೇರಾಗುತ್ತಿದೆಯೇ?: ಅದನ್ನು ತಡೆಯಲು ಕೆಲವು ಸುಲಭ ಟಿಪ್ಸ್ ಇಲ್ಲಿವೆ

Update: 2020-01-18 17:09 GMT

ಭಾವೋದ್ವೇಗಕ್ಕೊಳಗಾದಾಗ ಅಥವಾ ಅನಿರೀಕ್ಷಿತ ಘಟನೆಯೊಂದಕ್ಕೆ ಸಾಕ್ಷಿಯಾದಾಗ ಅಥವಾ ಗಾಬರಿಗೊಂಡಾಗ ಹೃದಯ ಡವಗುಡುವುದು ಸಹಜ,ಅಂದರೆ ಹೃದಯ ಬಡಿತದಲ್ಲಿ ಏರುಪೇರು ಉಂಟಾಗುತ್ತದೆ. ಆದರೆ ಈ ಯಾವುದೇ ಕಾರಣಗಳಿಲ್ಲದೆ ಹೃದಯ ಬಡಿತ ತಪ್ಪಿದ ಅನುಭವ ನಿಮಗುಂಟಾಗುತ್ತಿದ್ದರೆ ಅದು ಎಚ್ಚರಿಕೆಯ ಸಂಕೇತವಾಗಿದೆ. ಹೃದಯ ವೇಗವಾಗಿ ಬಡಿದುಕೊಳ್ಳಬಹುದು, ಡವಗುಡುತ್ತಿರಬಹುದುದು. ಇದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ ವೈದ್ಯಕೀಯ ನೆರವು ಅಗತ್ಯವಾಗಬಹುದು, ಆದರೆ ಮೊದಲು ಹೃದಯ ಬಡಿತವನ್ನು ಸಹಜಗೊಳಿಸಲು ಈ ಸರಳ ಉಪಾಯಗಳನ್ನು ಪ್ರಯತ್ನಿಸಿ. ಇವುಗಳನ್ನು ವಿಜ್ಞಾನವೂ ಒಪ್ಪಿಕೊಂಡಿದೆ ಮತ್ತು ಹೃದಯ ಬಡಿತದಲ್ಲಿ ಏರುಪೇರನ್ನು ನಿಲ್ಲಿಸುವಲ್ಲಿ ಪರಿಣಾಮಕಾರಿಯಾಗಿವೆ ಎನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ.

ಹೃದಯ ಬಡಿತದಲ್ಲಿ ವ್ಯತ್ಯಾಸವುಂಟಾಗಲು ಕೆಲವು ಸಾಮಾನ್ಯ ಕಾರಣಗಳು:

ಹೃದಯಾಘಾತ ಅಥವಾ ಹೃದಯ ವೈಫಲ್ಯ (ಅಪರೂಪದ ಪ್ರಕರಣಗಳಲ್ಲಿ)ದಂತಹ ಹೃದಯ ಸಮಸ್ಯೆಗಳು, ಹೃತ್ಕರ್ಣದ ಕಂಪನ, ಥೈರಾಯ್ಡ್ ಸಮಸ್ಯೆ,ಅರಿಥ್ಮಿಯಾ ಅಥವಾ ಅನಿಯಮಿತ ಹೃದಯಬಡಿತ ಹೃದಯ ಬಡಿತವನ್ನು ಸಹಜ ಸ್ಥಿತಿಗೆ ತರಲು ಸರಳ ಉಪಾಯಗಳ ಕುರಿತು ಮಾಹಿತಿಯಿಲ್ಲಿದೆ

* ಉದ್ದೀಪಕಗಳ ಸೇವನೆಯನ್ನು ಕಡಿಮೆ ಮಾಡಿ

ಮಾದಕ ದ್ರವ್ಯಗಳು,ತಂಬಾಕು ಉತ್ಪನ್ನಗಳು,ಕೆಮ್ಮು ಮತ್ತು ಶೀತದ ಔಷಧಿಗಳು,ಹಸಿವು ನಿವಾರಕಗಳು, ಕೆಫೀನ್,ಅಧಿಕ ರಕ್ತದೊತ್ತಡ ಔಷಧಿಗಳು, ಸೋಡಾದಂತಹ ಪಾನೀಯಗಳು ಇತ್ಯಾದಿಗಳಲ್ಲಿ ಸಾಮಾನ್ಯವಾಗಿರುವ ಉದ್ದೀಪಕಗಳು ಹೃದಯ ಬಡಿತವನ್ನು ವೇಗವಾಗಿಸುತ್ತವೆ. ಆದರೆ ಇವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಈ ಸ್ಥಿತಿಯನ್ನುಂಟು ಮಾಡಬೇಕು ಎಂದೇನಿಲ್ಲ. ಇವುಗಳನ್ನು ಸೇವಿಸಿದಾಗ ಹೃದಯ ಬಡಿತ ಅಸಹಜಗೊಂಡಿದೆ ಎಂದು ನಿಮಗನ್ನಿಸಿದರೆ ಅವುಗಳ ಬಳಕೆಯನ್ನು ಕೈಬಿಡಿ.

* ಯಥೇಚ್ಛ ನೀರು ಕುಡಿಯಿರಿ

ಶರೀರದಲ್ಲಿ ನೀರಿನ ಕೊರತೆಯು ಹೃದಯ ಡವಗುಡುವಿಕೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಾಮಾನ್ಯ ಕಾರಣವಾಗಿದೆ. ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರಕ್ತ ಪರಿಚಲನೆಗಾಗಿ ಹೃದಯದ ಮೇಲೆ ಒತ್ತಡವು ಹೆಚ್ಚುತ್ತದೆ ಮತ್ತು ಇದರಿಂದಾಗಿ ಅದು ವೇಗವಾಗಿ ಬಡಿದುಕೊಳ್ಳತೊಡಗುತ್ತದೆ. ಇಂತಹ ಸ್ಥಿತಿಯನ್ನು ತಡೆಯಲು ದಿನವಿಡೀ ನೀರನ್ನು ಸೇವಿಸುವ ಮೂಲಕ ಶರೀರದಲ್ಲಿಯ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ.ಗಾಢ ಹಳದಿ ವರ್ಣದ ಮೂತ್ರ,ಬಾಯಿ ಒಣಗುವಿಕೆ,ಹೃದಯ ಬಡಿತ ದರದಲ್ಲಿ ಅಸಾಧಾರಣ ಏರಿಕೆ,ತಲೆನೋವು ಮತ್ತು ತಲೆ ಸುತ್ತುವಿಕೆ ಇಂತಹ ಯಾವುದೇ ಒಂದು ಲಕ್ಷಣ ಕಂಡುಬಂದರೂ ನೀವು ಸಾಕಷ್ಟು ನೀರನ್ನು ಕುಡಿಯಲೇಬೇಕು. * ಮನಸ್ಸಿಗೆ ವಿಶ್ರಾಂತಿ ನೀಡಿ

ಒತ್ತಡವು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಮತ್ತು ಒತ್ತಡವುಂಟಾದಾಗ ಹೃದಯದ ಆರೋಗ್ಯವು ಹೆಚ್ಚಿನ ಅಪಾಯದಲ್ಲಿರುತ್ತದೆ. ನಿಮ್ಮ ಎದೆ ಹೊಡೆದುಕೊಳ್ಳುತ್ತಿರುವಾಗ ಅತಿಯಾದ ಒತ್ತಡವಿದ್ದರೆ ಅದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇಂತಹ ಸಂದರ್ಭದಲ್ಲಿ ಮನಸ್ಸಿಗೆ ವಿಶ್ರಾಂತಿ ಮುಖ್ಯವಾಗುತ್ತದೆ. ಆಳವಾದ ಉಸಿರಾಟ,ಧ್ಯಾನ,ಯೋಗ,ಲಘು ವ್ಯಾಯಾಮ,ನಿಮ್ಮ ಹವ್ಯಾಸಗಳ ಪುನರುಜ್ಜೀವನ, ಸಾಕುಪ್ರಾಣಿಗಳೊಂದಿಗೆ ಆಟ ಇತ್ಯಾದಿಗಳು ಒತ್ತಡವನ್ನು ನಿವಾರಿಸಿ ಮನಸ್ಸನ್ನು ನಿರಾಳಗೊಳಿಸುತ್ತವೆ.

* ವೇಗಲ್ ಮ್ಯಾನ್ಯೂವರ್

‘ವೇಗಸ್’ ಎಂಬ ನರವು ಹೃದಯ ಮತ್ತು ಮಿದುಳನ್ನು ಪರಸ್ಪರ ಸಂಪರ್ಕಿಸುತ್ತದೆ. ಹೃದಯ ಹೊಡೆದುಕೊಳ್ಳುವುದನ್ನು ನಿಯಂತ್ರಿಸಲು ಮಿದುಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇದಕ್ಕೆ ವೇಗಸ್ ನರವನ್ನು ಪ್ರಚೋದಿಸುವುದು ನೆರವಾಗುತ್ತದೆ. ಈ ನರವನ್ನು ಉತ್ತೇಜಿಸಲು ಕೆಲವು ಕ್ರಮಗಳು ಹೀಗಿವೆ:

ಜೋರಾಗಿ ಕೆಮ್ಮುವುದು,ಶ್ವಾಸ ನಿರ್ಬಂಧ,ಉಸಿರನ್ನು ಹಿಡಿದುಕೊಂಡು ಬಳಿಕ ಹೊಟ್ಟೆಯತ್ತ ತಳ್ಳುವುದು,ಮುಖಕ್ಕೆ ತಂಪು ನೀರನ್ನು ಎರಚಿಕೊಳ್ಳುವುದು, ಮುಖದ ಮೇಲೆ ಮಂಜುಗಡ್ಡೆ ತುಣುಕುಗಳನ್ನು ಇರಿಸುವುದು,ತಣ್ಣೀರಿನ ಸ್ನಾನ.

* ಮದ್ಯಪಾನದಿಂದ ದೂರವಿರಿ

ಅತಿಯಾದ ಅಥವಾ ಕಡಿಮೆ ಮದ್ಯಪಾನ,ಅದು ಹೇಗಿದ್ದರೂ ಆರೋಗ್ಯಕ್ಕೆ ಕೆಟ್ಟದ್ದು. ಹೃದಯ ಬಡಿತಗಳಲ್ಲಿ ಏರುಪೇರುಗಳಾಗುವ ವ್ಯಕ್ತಿಗಳು ಕೇವಲ ಒಂದು ಪೆಗ್ ಮದ್ಯ ಸೇವಿಸಿದರೂ ಹಾನಿಕಾರಕ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಹೃತ್ಕರ್ಣ ಕಂಪನಕ್ಕೆ ಕಾರಣವಾಗುತ್ತದೆ. ಹೀಗಾಗಿ ಮದ್ಯದಿಂದ ದೂರವಿದ್ದಷ್ಟು ಒಳ್ಳೆಯದು.

* ಶರೀರದಲ್ಲಿ ಎಲೆಕ್ಟ್ರೋಲೈಟ್‌ಗಳ ಸಮತೋಲನದ ಮರುಸ್ಥಾಪನೆ

ಇದೊಂದು ತಾಂತ್ರಿಕ ಕ್ರಮವೆಂದು ನಿಮಗೆ ಅನಿಸಬಹುದು. ಆದರೆ ವಿದ್ಯುತ್ ಸಂಕೇತಗಳು ಶರೀರದ ಎಲ್ಲ ಭಾಗಗಳಿಗೆ ತಲುಪುವಂತಾಗಲು ಎಲೆಕ್ಟ್ರೋಲೈಟ್ ಅಥವಾ ವಿದ್ಯುದ್ವಿಚ್ಛೇದ್ಯಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಹೃದಯವು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಈ ವ್ಯವಸ್ಥೆಯು ಮಹತ್ವದ್ದಾಗಿದೆ. ಸೋಡಿಯಂ,ಪೊಟ್ಯಾಷಿಯಂ,ಮ್ಯಾಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಇವು ಮಾನವನ ಆರೋಗ್ಯಕ್ಕೆ ಅತ್ಯಗತ್ಯವಾದ ಕೆಲವು ವಿದ್ಯುದ್ವಿಚ್ಛೇದ್ಯಗಳಾಗಿವೆ. ಇವುಗಳನ್ನು ಆಹಾರದ ಮೂಲಕ ಸುಲಭವಾಗಿ ಪಡೆಯಬಹುದು.

ಕೆಲವು ಪ್ರಕರಣಗಳಲ್ಲಿ ಎಲೆಕ್ಟ್ರೋಲೈಟ್ ಪೂರಕಗಳು ಅಗತ್ಯವಾಗಬಹುದು.ಆದರೆ ಇವು ತಮ್ಮದೇ ಆದ ಋಣಾತ್ಮಕ ಅಂಶಗಳನ್ನೂ ಹೊಂದಿರುತ್ತವೆ. ಹೀಗಾಗಿ ಇಂತಹ ಪೂರಕಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News