ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಜೋ ಬೈಡನ್‌ ಗೆ ಬೆಂಬಲ

Update: 2020-01-19 16:51 GMT
ಫೋಟೊ ಕೃಪೆ: twitter.com/JoeBiden

ವಾಶಿಂಗ್ಟನ್, ಜ. 19: ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿರುವ ಜೋ ಬೈಡನ್‌ಗೆ ಬೆಂಬಲ ನೀಡಲು ಅಮೆರಿಕದ ಭಾರತ ಮೂಲದ ವೈದ್ಯರ ಸಂಘ (ಎಎಪಿಐ)ವು ನಿರ್ಧರಿಸಿದೆ. ಜೋ ಬೈಡನ್ ಭಾರತ-ಅಮೆರಿಕನ್ ಸಮುದಾಯದಲ್ಲಿ ಜನಪ್ರಿಯವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

 ಡೆಮಾಕ್ರಟಿಕ್ ಪಕ್ಷದ ಟಿಕೆಟ್ ಪಡೆಯುವ ಸ್ಪರ್ಧೆಯಲ್ಲಿರುವ ಹಲವು ಅಭ್ಯರ್ಥಿಗಳನ್ನು ಸಂಘವು ಭೇಟಿಯಾಗಿದೆ ಎಂದು ಎಎಪಿಐ ವಿಜಯ ನಿಧಿಯ ಸಹ-ಸ್ಥಾಪಕ, ಭಾರತೀಯ ಅಮೆರಿಕನ್ ಶೇಕರ್ ನರಸಿಂಹನ್ ‘ಇಂಡಿಯ-ವೆಸ್ಟ್’ ಪತ್ರಿಕೆಗೆ ತಿಳಿಸಿದರು.

‘‘ನಿಮ್ಮ ಆದ್ಯತೆಗಳೇನು ಎನ್ನುವುದನ್ನು ನಾವು ಸಮುದಾಯಕ್ಕೆ ಕೇಳಿದೆವು. ಅಂತಿಮವಾಗಿ ಎರಡು ಆದ್ಯತೆಗಳನ್ನು ಗುರುತಿಸಲಾಯಿತು. ಒಂದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸಬಲ್ಲ ಅಭ್ಯರ್ಥಿಯೊಬ್ಬರನ್ನು ಹೊಂದುವುದು ಮತ್ತು, ಎರಡು, ಆ ಅಭ್ಯರ್ಥಿ ನಮ್ಮ ಸಮುದಾಯದ ಮಾತನ್ನು ಕೇಳುವವರಾಗಿರುವುದು’’ ಎಂದು ನರಸಿಂಹನ್ ನುಡಿದರು.

ಬೈಡನ್ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ ಭಾರೀ ಜನಪ್ರಿಯರಾಗಿದ್ದಾರೆ ಹಾಗೂ ಭಾರತೀಯ ಅಮೆರಿಕನ್ನರು ಅವರಿಗೆ 2019ರ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚಿನ ದೇಣಿಗೆ, ಅಂದರೆ 2,46,000 ಡಾಲರ್ (ಸುಮಾರು 1.74 ಕೋಟಿ ರೂಪಾಯಿ)ಗಳನ್ನು ನೀಡಿದ್ದಾರೆ.

ಬೈಡನ್ ಅಮೆರಿಕವನ್ನು ವಿವೇಕದ ದಾರಿಯಲ್ಲಿ ಮುನ್ನಡೆಸಬಹುದು

ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಏಶ್ಯನ್-ಅಮೆರಿಕನ್ ಆಗಿರುವ ಆ್ಯಂಡ್ರೂ ಯಾಂಗ್ ಅವರಿಗೂ ಆದ್ಯತೆ ನೀಡಲು ಆರಂಭದಲ್ಲಿ ಅಮೆರಿಕದ ಭಾರತ ಮೂಲದ ವೈದ್ಯರ ಸಂಘ ನಿರ್ಧರಿಸಿತ್ತು. ಆದರೆ, ಇರಾಕ್‌ನಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹತ್ಯೆಗೀಡಾದ ಬಳಿಕ ಮಧ್ಯಪ್ರಾಚ್ಯದಲ್ಲಿ ತಲೆದೋರಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ನಮ್ಮ ನಿರ್ಧಾರ ಬದಲಾಯಿತು.

‘‘ನಮ್ಮ ದೇಶದ ಹಿತಾಸಕ್ತಿಯನ್ನು ಕಾಯುವ ಶ್ರೇಷ್ಠ ವ್ಯಕ್ತಿ ಯಾರು ಎಂಬ ಬಗ್ಗೆ ನಮ್ಮನ್ನೇ ನಾವು ಕೇಳಿಕೊಂಡೆವು’’ ಎಂದು ನರಸಿಂಹನ್ ಹೇಳಿದರು.

‘‘ನಮ್ಮ ವಿವೇಕ ಮತ್ತು ಜಗತ್ತಿನಲ್ಲಿ ನಮ್ಮ ಸ್ಥಿರತೆಯನ್ನು ಮರಳಿ ಗಳಿಸುವ ನಿಟ್ಟಿನಲ್ಲಿ ಜೋ ಬೈಡನ್ ಈ ದೇಶವನ್ನು ಮುನ್ನಡೆಸಬಹುದು’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News