ಲಿಬಿಯ ಬಂದರುಗಳಿಂದ ತೈಲ ರಫ್ತಿಗೆ ಬಂಡುಕೋರ ಪಡೆಗಳಿಂದ ತಡೆ

Update: 2020-01-19 17:12 GMT

ಟ್ರಿಪೋಲಿ (ಲಿಬಿಯ), ಜ. 19: ಲಿಬಿಯದ ಸೇನಾಧಿಕಾರಿ ಖಲೀಫ ಹಫ್ತಾರ್‌ಗೆ ನಿಷ್ಠವಾಗಿರುವ ಪಡೆಗಳು ದೇಶದ ಪ್ರಮುಖ ಬಂದರುಗಳಿಂದ ತೈಲ ರಫ್ತು ಮಾಡುವುದನ್ನು ಶನಿವಾರ ತಡೆದಿವೆ ಎಂದು ನ್ಯಾಶನಲ್ ಆಯಿಲ್ ಕಂಪೆನಿ ಹೇಳಿದೆ.

ಲಿಬಿಯದ ‘ಆಯಿಲ್ ಕ್ರೆಸೆಂಟ್’ನ ಮುಚ್ಚುಗಡೆಯಿಂದ ದೇಶದ ದೈನಂದಿನ ಕಚ್ಚಾತೈಲ ಉತ್ಪಾದನೆಯು 13 ಲಕ್ಷ ಬ್ಯಾರಲ್‌ ನಿಂದ 5 ಲಕ್ಷ ಬ್ಯಾರಲ್‌ಗೆ ಕುಸಿದಿದೆ ಹಾಗೂ ದಿನವೊಂದಕ್ಕೆ 55 ಮಿಲಿಯ ಡಾಲರ್ (ಸುಮಾರು 390 ಕೋಟಿ ರೂಪಾಯಿ) ನಷ್ಟವಾಗುತ್ತಿದೆ ಎಂದು ಅದು ಎಚ್ಚರಿಸಿದೆ.

ಲಿಬಿಯದ ಈಶಾನ್ಯ ಕರಾವಳಿಯಲ್ಲಿರುವ ರಫ್ತು ಕೇಂದ್ರಗಳನ್ನು ಹಫ್ತಾರ್ ನಿಯಂತ್ರಿಸುತ್ತಿದ್ದಾರೆ. ಹಫ್ತಾರ್ ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಸರಕಾರದೊಂದಿಗೆ 2016ರಿಂದ ಸಂಘರ್ಷದಲ್ಲಿ ತೊಡಗಿದ್ದಾರೆ.

ಪೂರ್ವ ಲಿಬಿಯದಲ್ಲಿ ಪ್ರಬಲವಾಗಿರುವ ಹಫ್ತಾರ್ ವಿರುದ್ಧ ಸೇನಾ ಕಾರ್ಯಾಚರಣೆಗಾಗಿ ಟರ್ಕಿ ಮಧ್ಯಪ್ರವೇಶಿಸಿರುವುದನ್ನು ಪ್ರತಿಭಟಿಸಿ ಹಫ್ತಾರ್‌ಗೆ ಆಪ್ತವಾಗಿರುವ ಗುಂಪೊಂದು ತೈಲ ಟರ್ಮಿನಲ್‌ಗಳನ್ನು ಮುಚ್ಚಲು ಮುಂದಾಗಿದೆ.

ಟ್ರಿಪೋಲಿಯಲ್ಲಿರುವ ರಾಷ್ಟ್ರೀಯ ಸರಕಾರವು ಹಫ್ತಾರ್ ಪಡೆಗಳನ್ನು ಎದುರಿಸುತ್ತಿದೆ. ಹಫ್ತಾರ್ ಪಡೆಗಳು ಟ್ರಿಪೋಲಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News