ಪತನಗೊಂಡ ವಿಮಾನದ ಬ್ಲಾಕ್‌ಬಾಕ್ಸ್ ಯುಕ್ರೇನ್‌ಗೆ: ಇರಾನ್

Update: 2020-01-19 17:23 GMT

ಟೆಹರಾನ್, ಜ. 19: ಇತ್ತೀಚೆಗೆ ಇರಾನ್ ಸೇನೆಯು ತಪ್ಪಾಗಿ ಹೊಡೆದುರುಳಿಸಿದ ಯುಕ್ರೇನ್ ಏರ್‌ಲೈನ್ಸ್ ವಿಮಾನದ ಬ್ಲಾಕ್‌ಬಾಕ್ಸ್‌ಗಳನ್ನು ಯುಕ್ರೇನ್‌ಗೆ ಕಳುಹಿಸುವುದಾಗಿ ಇರಾನ್ ಶನಿವಾರ ತಿಳಿಸಿದೆ.

ವಿಮಾನದ ಹಾರಾಟಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಅಪಘಾತಕ್ಕೆ ಕಾರಣವಾದ ಅಂಶಗಳು ಬ್ಲಾಕ್‌ಬಾಕ್ಸ್‌ನಲ್ಲಿ ದಾಖಲಾಗಿರುತ್ತವೆ ಹಾಗೂ ಅದನ್ನು ಹೊರಗೆ ತೆಗೆಯಬಹುದಾಗಿದೆ. ಇರಾನ್ ರಾಜಧಾನಿ ಟೆಹರಾನ್‌ನ ಹೊರವಲಯದಲ್ಲಿ ಜನವರಿ 8ರಂದು ವಿಮಾನ ಪತನಗೊಂಡ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಯುಕ್ರೇನ್ ಅಂತರರಾಷ್ಟ್ರೀಯ ವಿಮಾನಯಾನ ಕಂಪೆನಿಯ ವಿಮಾನದ ಮಾಹಿತಿಕೋಶ ಮತ್ತು ವಾಯ್ಸ ರೆಕಾರ್ಡರ್‌ಗಳ ಮಾಹಿತಿಯನ್ನು ಪರಿಶೀಲಿಸಲು ಫ್ರಾನ್ಸ್, ಕೆನಡ ಮತ್ತು ಅಮೆರಿಕಗಳ ಪರಿಣತರಿಗೆ ಅವಕಾಶ ಕೊಡಲೂ ಇರಾನ್ ಅಧಿಕಾರಿಗಳು ಸಿದ್ಧವಾಗಿದ್ದಾರೆ ಎಂದು ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನ್ ಅಮೆರಿಕದಿಂದ ನಡೆಯಬಹುದಾದ ದಾಳಿಯ ಭೀತಿಯ ಉತ್ತುಂಗದಲ್ಲಿರುವಾಗ, ಯುಕ್ರೇನ್ ಏರ್‌ಲೈನ್ಸ್ ವಿಮಾನವನ್ನು ಶತ್ರು ಕ್ಷಿಪಣಿ ಎಂಬುದಾಗಿ ಭಾವಿಸಿ ಇರಾನ್‌ನ ಇಸ್ಲಾಮಿಕ್ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ ಹೊಡೆದುರುಳಿಸಿರುವುದನ್ನು ಇರಾನ್ ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News